
ಹುಬ್ಬಳ್ಳಿ: ಇತ್ತೀಚೆಗಷ್ಟೇ ಮದುವೆಯಾಗಿದ್ದ ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ದಂಪತಿ, ಆರತಕ್ಷತೆಯ ಕಾರ್ಯಕ್ರಮವನ್ನು ವಿಡಿಯೊ ಕಾನ್ಪರೆನ್ಸ್ ಮೂಲಕ ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿಯ ಮೇಘಾ ಕ್ಷೀರಸಾಗರ್ ಹಾಗೂ ಒಡಿಶಾ ಮೂಲದ ಸಂಗಮ್ ದಾಸ್ ಅವರ ವಿವಾಹವು ನ.23 ರಂದು ಭುವನೇಶ್ವರದಲ್ಲಿ ಜರುಗಿತ್ತು. ವಧುವಿನ ಊರಾದ ಹುಬ್ಬಳ್ಳಿಯಲ್ಲಿ ಡಿ.3ರಂದು ಆರತಕ್ಷತೆ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿತ್ತು.
ಆರತಕ್ಷತೆ ಕಾರ್ಯಕ್ರಮಕ್ಕಾಗಿ ಎಲ್ಲಾ ರೀತಿಯ ಸಿದ್ದತೆಗಳನ್ನು ಕೂಡ ಮಾಡಿಕೊಳ್ಳಲಾಗಿತ್ತು. ಭುವನೇಶ್ವರದಲ್ಲಿದ್ದ ನವ ದಂಪತಿ ಡಿ.2ರಂದು ಅಲ್ಲಿಂದ ಬೆಂಗಳೂರಿಗೆ ಬಂದು, ನಂತರ ಹುಬ್ಬಳ್ಳಿಗೆ ವಿಮಾನದ ಮೂಲಕ ತೆರಳಲು ಇಂಡಿಗೊ ವಿಮಾನದ ಟಿಕೆಟ್ ಖರೀದಿಸಿದ್ದರು.
ಆದರೆ, ಸಿಬ್ಬಂದಿಗಳ ಕೊರತೆಯಿಂದ ಇಂಡಿಗೊ ವಿಮಾನ ಕಾರ್ಯಾಚರಣೆಯಲ್ಲಿ ಭಾರಿ ಅಡಚಣೆ ಉಂಟಾಗಿರುವ ಬೆನ್ನಲ್ಲೇ ಡಿ.2ರ ಬೆಳಿಗ್ಗೆ 9 ಗಂಟೆಯಿಂದ ಡಿ.3ರ ಮುಂಜಾನೆಯವರೆಗೆ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿದ ಹಿನ್ನಲೆಯಲ್ಲಿ ನವ ದಂಪತಿ ಆರತಕ್ಷತೆಗೆ ಬರಲು ಸಾಧ್ಯವಾಗಿಲ್ಲ.
ದೇಶದ ಬೇರೆ ಬೇರೆ ಭಾಗಗಳಿಂದ ಅತಿಥಿಗಳು ಆಗಮಿಸಿದ್ದ ಕಾರಣ, ಕಾರ್ಯಕ್ರಮವನ್ನು ವಿಡಿಯೊ ಕಾನ್ಪರೆನ್ಸ್ ಮೂಲಕ ಮಾಡಲು ವಧುವಿನ ತಂದೆ ಅನಿಲ್ ಕ್ಷೀರಸಾಗರ್ ಅವರು ನಿರ್ಧರಿಸಿದ್ದಾರೆ. ಆರತಕ್ಷತೆ ನಿಗದಿಯಾಗಿದ್ದ ಸಭಾಂಗಣದಲ್ಲಿ ದೊಡ್ಡ ಪರದೆಯನ್ನು ಹಾಕಿಸಿದ್ದಾರೆ. ಭುವನೇಶ್ವರದಲ್ಲಿದ್ದ ನವ ದಂಪತಿ ಅಲ್ಲಿಂದಲೇ ವಿಡಿಯೊ ಕಾನ್ಪರೆನ್ಸ್ ಮೂಲಕ ತಮ್ಮ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ನವ ದಂಪತಿ ಸೇರಿದಂತೆ, ಹಲವು ಅತಿಥಿಗಳು ಕೂಡ ಇಂಡಿಗೊ ವಿಮಾನ ಸಂಚಾರ ಸ್ಥಗಿತಗೊಂಡ ಕಾರಣ ಕಾರ್ಯಕ್ರಮಕ್ಕೆ ಬರಲಾಗಿಲ್ಲ. ಸರ್ಕಾರವು ಈ ವಿಮಾನ ಸಂಚಾರ ವ್ಯತ್ಯಯದ ಕುರಿತು ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂದು ವಧುವಿನ ತಂದೆ ಅನಿಲ್ ಕ್ಷೀರಸಾಗರ್ ಅವರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.