ADVERTISEMENT

ಹುಬ್ಬಳ್ಳಿ ಗಲಭೆ: ಪೊಲೀಸ್‌ ಕಟ್ಟೆಚ್ಚರ- 89 ಮಂದಿ ಬಂಧನ

ವಿವಾದಾತ್ಮಕ ವಿಡಿಯೊ ಸ್ಟೇಟಸ್ ಸೃಷ್ಟಿಸಿದ ಅವಾಂತರ:

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 2:54 IST
Last Updated 18 ಏಪ್ರಿಲ್ 2022, 2:54 IST
ಗಲಭೆ ನಡೆದ ಹಳೇ ಹುಬ್ಬಳ್ಳಿ ಪ್ರದೇಶದಲ್ಲಿ ಪೊಲೀಸರು ಭಾನುವಾರ ಪಥ ಸಂಚಲನ ನಡೆಸಿದರು – ಪ್ರಜಾವಾಣಿ ಚಿತ್ರ
ಗಲಭೆ ನಡೆದ ಹಳೇ ಹುಬ್ಬಳ್ಳಿ ಪ್ರದೇಶದಲ್ಲಿ ಪೊಲೀಸರು ಭಾನುವಾರ ಪಥ ಸಂಚಲನ ನಡೆಸಿದರು – ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಯುವಕನೊಬ್ಬ ವಾಟ್ಸ್ಆ್ಯಪ್‌ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದ ವಿವಾದಾತ್ಮಕ ವಿಡಿಯೊದಿಂದಾಗಿ ಶನಿವಾರ ರಾತ್ರಿ ಬಿಗುವಿನ ಸ್ಥಿತಿ ತಲೆದೋರಿದ್ದ ಹುಬ್ಬಳ್ಳಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಗಲಭೆಯು ಇಡೀ ನಗರವನ್ನು ಉದ್ವಿಗ್ನ ಗೊಳಿಸಿದೆ. ಮೇಲ್ನೋಟಕ್ಕೆ ಪರಿಸ್ಥಿತಿ ತಣ್ಣಗಾದಂತೆ ಕಂಡರೂ ಬಿಗುವಿನ ಸ್ಥಿತಿಯೇ ಇದೆ.

ಮುನ್ನೆಚ್ಚರಿಕೆ ಕ್ರಮವಾಗಿ ನಗರದಾದ್ಯಂತಏಪ್ರಿಲ್ 20ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಘಟನೆಗೆ ಕಾರಣವಾದ ಆರೋಪಿ, ಆನಂದನಗರ ನಿವಾಸಿ ಅಭಿಷೇಕ ಹಿರೇಮಠ ಹಾಗೂ ನಂತರ ನಡೆದ ಗಲಭೆಗೆ ಸಂಬಂಧಿಸಿದಂತೆ ಪಾಲಿಕೆಯ 77ನೇ ವಾರ್ಡ್‌ನ ಎಐಎಂಐಎಂ ಪಕ್ಷದ ಸದಸ್ಯೆ ಹುಸೇನಬಿ ನಾಲತವಾಡ ಅವರ ಪತಿ ಇರ್ಫಾನ್ನಾಲತವಾಡ ಸೇರಿದಂತೆ 89 ಮಂದಿಯನ್ನು ಪೊಲೀಸರುಭಾನುವಾರ ಬಂಧಿಸಿದ್ದಾರೆ.

ಗಲಭೆಯಲ್ಲಿ 12 ಪೊಲೀಸರು ಹಾಗೂ ಇಬ್ಬರು ಗೃಹ ರಕ್ಷಕ ಸಿಬ್ಬಂದಿ ಗಾಯಗೊಂಡಿದ್ದಾರೆ. ಗಲಭೆಯಲ್ಲಿ ಭಾಗಿಯಾಗಿದ್ದವರ ಪತ್ತೆಗೆ 8 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಗಲಭೆ, ಅಹಿತಕರ ಘಟನೆಗಳು ನಡೆದಿದ್ದ ಇಂಡಿ ಪಂಪ್ ವೃತ್ತ ಸೇರಿದಂತೆ, ಕೋಮು ಸೂಕ್ಷ್ಮ ಪ್ರದೇಶಗಳು, ಪ್ರಮುಖ ವೃತ್ತಗಳಲ್ಲಿ ಪೊಲೀಸರು ಪಥ ಸಂಚಲನ ನಡೆಸಿ ಕಟ್ಟೆಚ್ಚರ ವಹಿಸಿದ್ದಾರೆ.

ಠಾಣೆ, ದೇವಸ್ಥಾನ, ಆಸ್ಪತ್ರೆಗೂ ಕಲ್ಲು: ಶನಿವಾರ ರಾತ್ರಿ ಪೊಲೀಸ್ ಠಾಣೆಯನ್ನು ಸುತ್ತುವರಿದಿದ್ದ ಕೆಲ ದುಷ್ಕರ್ಮಿಗಳು ಕಾಂಪೌಂಡ್ ಮೇಲೆ ಹತ್ತಿದ್ದಾರೆ. ಕೆಲವರು ಠಾಣೆಗೆ ನುಗ್ಗಲು ಯತ್ನಿಸಿ ಕಲ್ಲು ತೂರಿದ್ದಾರೆ. ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಸಹ ಹಾಕಿದ್ದಾರೆ.

ಠಾಣೆಯಿಂದ ಅನತಿ ದೂರದಲ್ಲಿರುವ ದಿಡ್ಡಿ ಓಣಿಯ ಹನುಮಂತ ದೇವಸ್ಥಾನಕ್ಕೂ ಕಲ್ಲುಗಳನ್ನು ತೂರಿ, ಕಿಟಕಿಗಳಿಗೆ ಹಾನಿಮಾಡಿದ್ದಾರೆ.

ಸಮೀಪದ ಆಸ್ಪತ್ರೆ, ಜಯದೇವ ಇಂಗ್ಲಿಷ್ ಮಾಧ್ಯಮ ಶಾಲೆ, ಅಂಗಡಿಗಳು, ತಳ್ಳುಗಾಡಿಗಳು ಹಾಗೂ ಮನೆಗಳತ್ತಲೂ ಕಿಡಿಗೇಡಿಗಳು ಕಲ್ಲು ತೂರಿದ್ದರಿಂದ ಗಾಜು, ಕಿಟಕಿ ಹಾಗೂ ಹೆಂಚುಗಳಿಗೆ ಹಾನಿಯಾಗಿದೆ. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಎಂಟು ಸುತ್ತು ಗುಂಡು ಹಾರಿಸಿ ಅಶ್ರವಾಯು ಸಿಡಿಸಿದರು.

ಘಟನಾ ಸ್ಥಳದಲ್ಲಿ ಬೆಳಿಗ್ಗೆ ಒಂದು ಟ್ರಾಕ್ಟರ್‌ನಷ್ಟು ಕಲ್ಲುಗಳು ಹಾಗೂ ಚಪ್ಪಲಿಗಳು ಬಿದ್ದಿದ್ದವು. ಗಲಭೆ ಹಾಗೂ ಕಲ್ಲು ತೂರಾಟದ ವಿಡಿಯೊ ಹಾಗೂ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳು ಇದೀಗ ಹರಿದಾಡುತ್ತಿವೆ. ಘಟನಾ ಸ್ಥಳ ಹಾಗೂ ಸುತ್ತಮುತ್ತ ನಿಲ್ಲಿಸಿದ್ದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು, ಮಾಲೀಕರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿಡಿಯೊಗಳು, ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಆಧರಿಸಿ ಗಲಭೆಯಲ್ಲಿ ಭಾಗಿಯಾದವರನ್ನು ವಶಕ್ಕೆ ಪಡೆದಿದ್ದಾರೆ.

12 ಪೊಲೀಸರಿಗೆ ಗಾಯ: ‘ಗಲಭೆ ನಿಯಂತ್ರಿಸುತ್ತಿದ್ದ ಪೂರ್ವ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್ ಎನ್‌.ಸಿ.ಕಾಡದೇವರ, ಕಾನ್‌ಸ್ಟೆಬಲ್ ಗುರುಪಾದಪ್ಪ ಸ್ವಾದಿ ಅವರು ಗಾಯಾಳುಗಳಲ್ಲಿ ಸೇರಿದ್ದಾರೆ. ಕಾಡದೇವರ ಜೊತೆಗೆ ಇಬ್ಬರು ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗೆ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ’ ಎಂದು ಪೊಲೀಸ್ ಕಮಿಷನರ್ ಲಾಭೂರಾಮ್ ಸುದ್ದಿಗಾರರಿಗೆ ತಿಳಿಸಿದರು.

‘ಘಟನೆಯಲ್ಲಿ 12 ಪೊಲೀಸ್ ವಾಹನಗಳು, ಸ್ಥಳದಲ್ಲಿದ್ದ ಇತರ ವಾಹನಗಳಿಗೆ ಹಾನಿಯಾಗಿದೆ. ಸಾರ್ವಜನಿಕರ ಆಸ್ತಿಪಾಸ್ತಿಗಳಿಗೂ ಹಾನಿಯಾಗಿದೆ. ಬಂದೋಬಸ್ತ್‌ಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಿದ್ದು, ಗಲಭೆ ನಡೆಸಿದವರು ಹಾಗೂ ಘಟನೆ ಹಿಂದಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಯಂದಿರ ಅಳಲು: ಗಲಭೆಗೆ ಸಂಬಂಧ ಪೊಲೀಸರು ಬಂಧಿಸಿರುವ ಹಾಗೂ ವಶಕ್ಕೆ ಪಡೆದಿರುವ ಆರೋಪಿಗಳ ತಾಯಂದಿರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿ, ‘ನಮ್ಮ ಮಕ್ಕಳು ಅಮಾಯಕರಾಗಿದ್ದು, ಪೊಲೀಸರು ವಿನಾ ಕಾರಣ ಎಳೆದುಕೊಂಡು ಬಂದಿದ್ದಾರೆ. ಅವರನ್ನು ಬಿಟ್ಟು ಬಿಡಿ’ ಎಂದು ಮನವಿ ಮಾಡಿದರು.

ಪೊಲೀಸ್ ವಶದಲ್ಲಿರುವ ಕೆಲಯುವಕರ ಸಹೋದರಿಯರು ಸಹ ಠಾಣೆ ಬಳಿ ಬಂದು ಅಳುತ್ತಾ, ಸಹೋದರರನ್ನು ಬಿಡುವಂತೆ ಗೋಗರೆಯುತ್ತಿದ್ದ ದೃಶ್ಯವೂ ಕಂಡುಬಂತು.

ಠಾಣೆಗೆ ಕಾಂಗ್ರೆಸ್, ಎಐಎಂಐಎಂ ಹಾಗೂ ಮುಸ್ಲಿಂ ಮುಖಂಡರು ಭೇಟಿ ನೀಡಿ,ಅಮಾಯಕರ ಬದಲು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಹನುಮಂತ ದೇವಸ್ಥಾನದ ಮೇಲೆ ಕಲ್ಲು ತೂರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಸಮುದಾಯದ ಮುಖಂಡರು ಆಗ್ರಹಿಸಿದರು.

‘ರಾಜಕೀಯ ಬಣ್ಣ ಕೊಡುವ ಅಗತ್ಯವಿಲ್ಲ’
ಹೊಸಪೇಟೆ (ವಿಜಯನಗರ):
‘ಹುಬ್ಬಳ್ಳಿಯ ಘಟನೆಗೆ ರಾಜಕೀಯ ಬಣ್ಣ ಕೊಡುವ ಅಗತ್ಯವಿಲ್ಲ. ಇದನ್ನು ಕಾನೂನು ಸುವ್ಯವಸ್ಥೆ ಘಟನೆಯಾಗಿ ನೋಡಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಭಾನುವಾರ ಪ್ರತಿಕ್ರಿಯಿಸಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಚೋದನಕಾರಿಯಾಗಿ ಪೊಲೀಸ್‌ ಠಾಣೆ ಎದುರು ಬಂದು ಗಲಾಟೆ ಮಾಡಿ, ಪೊಲೀಸರಿಗೂ ಏಟು ಬೀಳುವ ರೀತಿ ಹಲವರು ನಡೆದುಕೊಂಡಿದ್ದಾರೆ. ಹಳೇ ಹುಬ್ಬಳ್ಳಿಯ ವಿವಿಧ ಭಾಗಗಳಲ್ಲಿ ಕಲ್ಲು ತೂರಾಟ ನಡೆಸಿದ್ದು ತೀವ್ರ ಅಕ್ಷಮ್ಯ’ ಎಂದು ಹೇಳಿದರು.

‘ಈ ಘಟನೆ, ಪ್ರಚೋದನೆ ಹಿಂದೆ ಇರುವವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ದೊಡ್ಡ ಪ್ರಮಾಣದಲ್ಲಿ ಜನ ಠಾಣೆಗೆ ಬಂದಿದ್ದಾರೆ ಎಂದರೆ ಇದನ್ನು ವ್ಯವಸ್ಥಿತವಾಗಿ ಮಾಡಿರುವಂತೆ ಕಾಣುತ್ತದೆ’ ಎಂದರು.

ಸುಮ್ಮನೆ ಬಿಡುವುದಿಲ್ಲ: ಗೃಹ ಸಚಿವ
‘ಪೊಲೀಸರು ಸ್ವಲ್ಪ ಎಚ್ಚರ ತಪ್ಪಿದ್ದರೂ ಬೆಂಗಳೂರಿನ ಕೆ.ಜೆ. ಹಳ್ಳಿ, ಡಿ.ಜೆ. ಹಳ್ಳಿ ಘಟನೆಯಂತೆ ಆಗುತ್ತಿತ್ತು. ಕಾನೂನು ಕೈಗೆ ತೆಗೆದುಕೊಂಡವರನ್ನು ಸುಮ್ಮನೆ ಬಿಡುವುದಿಲ್ಲ. ಎಡಿಜಿಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು. ಬಂಧಿತರ ಹಿನ್ನೆಲೆ ಪರಿಶೀಲಿಸಲಾಗುತ್ತಿದೆ’ ಎಂದುಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದರು. ಹುಬ್ಬಳ್ಳಿಗೆ ಭೇಟಿ ನೀಡಿದ್ದ ಅವರು, ‘ಆರೋಪಿ ವಿರುದ್ಧ ದೂರು ಕೊಟ್ಟ ನಂತರವೂ ಇದಕ್ಕಿದ್ದಂತೆ ಸಾವಿರಾರು ಮಂದಿ ಬಂದು ಹಿಂಸಾಚಾರ ನಡೆಸಿದ್ದು ಅಕ್ಷಮ್ಯ. ಆದಾಗ್ಯೂ ಕಡಿಮೆ ಸಂಖ್ಯೆಯ ಪೊಲೀಸರು ಅವರನ್ನು ಹಿಮ್ಮೆಟ್ಟಿಸಿದ್ದಾರೆ. ಅನೇಕರಿಗೆ ಪೆಟ್ಟಾಗಿವೆ, ವಾಹನಗಳೂ ಜಖಂ ಆಗಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.