ADVERTISEMENT

ಮಾನವ-ವನ್ಯಜೀವಿ ಸಂಘರ್ಷ | ವನ್ಯಜೀವಿ ವಿಭಾಗಕ್ಕೆ ಪೂರ್ಣ ಪ್ರಮಾಣದ ಮುಖ್ಯಸ್ಥರಿಲ್ಲ

ವಿಜಯಕುಮಾರ್ ಎಸ್.ಕೆ.
Published 23 ಡಿಸೆಂಬರ್ 2022, 21:45 IST
Last Updated 23 ಡಿಸೆಂಬರ್ 2022, 21:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಒಂದೆಡೆ ಮಾನವ- ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ವನ್ಯಜೀವಿ ಸಂರಕ್ಷಣೆಯಲ್ಲಿ ಅತ್ಯುನ್ನತ ಹುದ್ದೆಯಾಗಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರ
(ಪಿಸಿಸಿಎಫ್‌) ಹುದ್ದೆ ಪ್ರಭಾರ ಉಸ್ತುವಾರಿಯಲ್ಲಿದೆ.

ಪಿಸಿಸಿಎಫ್‌ ಆಗಿದ್ದ ವಿಜಯ ಕುಮಾರ್ ಗೋಗಿ ಅವರು ನ.30ರಂದು ನಿವೃತ್ತಿಯಾಗಿದ್ದು, ಆ ಸಂದರ್ಭದಲ್ಲಿ ಅಭಿವೃದ್ಧಿ ವಿಭಾಗದ ಪಿಸಿಸಿಎಫ್‌ ಅವರಿಗೆ ಈ ಹುದ್ದೆಯನ್ನೂ ಹೆಚ್ಚುವರಿಯಾಗಿ ವಹಿಸಲಾಗಿದೆ. ಕಾಡಾನೆ, ಚಿರತೆ, ಕರಡಿ, ಹುಲಿ ಸೇರಿ ವನ್ಯಜೀವಿಗಳ ಸಂಘರ್ಷದ ಘಟನೆಗಳು ನಿತ್ಯವೂ ವರದಿಯಾಗುತ್ತಿದ್ದು, ಈ ಸಂದರ್ಭದಲ್ಲಿ ವನ್ಯಜೀವಿ ವಿಭಾಗಕ್ಕೆ ಪೂರ್ಣ ಪ್ರಮಾಣದ ಮುಖ್ಯಸ್ಥರು ಇಲ್ಲದಿದ್ದರೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವುದು ಕಷ್ಟ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಉಮೇಶ್ ಕತ್ತಿ ನಿಧನದ ಬಳಿಕ ಅರಣ್ಯ ಖಾತೆ ಮುಖ್ಯಮಂತ್ರಿ ಅವರ ಬಳಿಯೇ ಉಳಿದುಕೊಂಡಿದೆ. ಇನ್ನೊಂ ದೆಡೆ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಆನೆ ಯೋಜನೆ) ಹುದ್ದೆಯನ್ನೂ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ
(ವನ್ಯಜೀವಿ) ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ.

ADVERTISEMENT

ಹಲವು ಜಿಲ್ಲೆಗಳಲ್ಲಿ ವನ್ಯಜೀವಿ ಗಳಿಂದ ಬೆಳೆಹಾನಿ ಪ್ರಕರಣಗಳು ವರದಿಯಾಗುತ್ತಲೇ ಇವೆ. ಗುರುವಾರ ಉತ್ತರ ಕನ್ನಡ ಜಿಲ್ಲೆಯ ಜಗಲಪೇಟ್ ಬಳಿ ಚಿರತೆಯ ಶವ ಅನುಮಾನಾಸ್ಪದ ರೀತಿಯಲ್ಲಿ ಸಿಕ್ಕಿದ್ದರೆ, ಹಿಂದಿನ ವಾರ ಇದೇ ಜಿಲ್ಲೆಯ ಬರ್ಚಿ ಬಳಿ ಹುಲಿಯ ಶವ ದೊರೆತಿತ್ತು. ಹುಲಿಯ ಕಾಲು ಹಾಗೂ ತಲೆಯ ಭಾಗಗಳನ್ನು ದುಷ್ಕರ್ಮಿಗಳು ಕದ್ದೊಯ್ದಿರುವ ಪ್ರಕರಣ ವರದಿಯಾಗಿದೆ. ಕೆಲವೇ ದಿನಗಳ ಹಿಂದೆ ಬಿಳಿಗಿರಿ ರಂಗನಾಥಸ್ವಾಮಿದೇವಾಲಯ(ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಹುಲಿಯೊಂದು ಮೃತಪಟ್ಟಿತ್ತು.

ಎರಡು ವಾರಗಳಹಿಂದಷ್ಟೇ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಅಪಘಾತದಲ್ಲಿ ಆನೆಯೊಂದು ಮೃತಪಟ್ಟಿದೆ. ಕಾಂಗ್ರೆಸ್‌ ಮುಖಂಡ ಎಸ್‌.ಎಸ್. ಮಲ್ಲಿಕಾರ್ಜುನ ಅವರ ತೋಟದ ಮನೆಯಲ್ಲಿ ವನ್ಯಜೀವಿಗಳು ಪತ್ತೆಯಾದರೆ, ಹಾಸನದಲ್ಲಿ ವನ್ಯಜೀವಿ ಅಂಗಾಂಗಗಳನ್ನು ಮಾರುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಚಿರತೆಯೊಂದು ಉರುಳಿಗೆ ಸಿಲುಕಿ ಎರಡು ವಾರಗಳ ಹಿಂದೆ ಮೃತಪಟ್ಟಿದೆ. ಬೆಂಗಳೂರು ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದೆ. ವನ್ಯಜೀವಿ ಮತ್ತು ಮಾನವ ನಡುವಿನ ಸಂಘರ್ಷ ತಾರಕದಲ್ಲಿರುವ ಸಂದರ್ಭದಲ್ಲಿ ವನ್ಯಜೀವಿ ವಿಭಾಗಕ್ಕೆ ಪೂರ್ಣ ಪ್ರಮಾಣದ ಮುಖ್ಯಸ್ಥರೇ ಇಲ್ಲದಿದ್ದರೆ, ನಿಭಾಯಿಸುವುದು ಕಷ್ಟ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ‘‍ಪ್ರಜಾವಾಣಿ’ಗೆ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯೆಗೆ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೆದ್ ಅಖ್ತರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸ
ಲಾಯಿತು. ಅವರು ಸಂಪರ್ಕಕ್ಕೆ ಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.