ADVERTISEMENT

ನಾನು ಮಾಂಸಾಹಾರಿ... ಮಾಂಸ ತಿನ್ನುವೆ, ತಪ್ಪೇನು? ಸಿದ್ದರಾಮಯ್ಯ ಪ್ರಶ್ನೆ

ಇಂತಹದ್ದೇ ತಿನ್ನು ಎಂದು ದೇವರು ಹೇಳಿದ್ದಾರೆಯೇ? ಎಂದು ಪ್ರಶ್ನಿಸಿದ ಕಾಂಗ್ರೆಸ್‌ ನಾಯಕ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2022, 12:53 IST
Last Updated 21 ಆಗಸ್ಟ್ 2022, 12:53 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಚಿಕ್ಕಬಳ್ಳಾಪುರ: ‘ನಾನು ಮಾಂಸಾಹಾರಿ. ಮಾಂಸ ತಿನ್ನುವೆ, ತಪ್ಪೇನು? ನಿಮ್ಮ ಆಹಾರ ಕ್ರಮ ನಿಮ್ಮದು, ನಮ್ಮ ಆಹಾರ ಕ್ರಮ ನಮ್ಮದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಡಿಕೇರಿಗೆ ಭೇಟಿ ನೀಡಿದ್ದ ದಿನ ಮಧ್ಯಾಹ್ನ ಗೆಸ್ಟ್‌ಹೌಸ್‌ನಲ್ಲಿ ಊಟ ಮಾಡಿದ್ದೆ. ಸಂಜೆ ದೇಗುಲಕ್ಕೆ ಹೋಗಿದ್ದೆ. ಇಂತಹದ್ದೇ ತಿನ್ನು ಎಂದು ದೇವರು ಹೇಳಿದ್ದಾರೆಯೇ? ರಾತ್ರಿ ಮಾಂಸ ತಿಂದು ಬೆಳಿಗ್ಗೆ ದೇಗುಲಕ್ಕೆ ಹೋಗಬಹುದು. ಮಧ್ಯಾಹ್ನ ತಿಂದು ಸಂಜೆ ಹೋಗಬಾರದೆ ಎಂದು ಪ್ರಶ್ನಿಸಿದರು.

ಬಿಜೆಪಿಯವರಿಗೆ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ. ಎಲ್ಲಿ ಚೆನ್ನಾಗಿದೆಯೊ ಅಲ್ಲಿ ವಿಷ ಹಾಕುವರು. ಮೊಟ್ಟೆ ಎಸೆದ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತರ ಎಂದು ಬಿಜೆಪಿಯವರು ಬಲವಂತವಾಗಿ ಹೇಳಿಸಿದ್ದಾರೆ. ಆತ ಆರ್‌ಎಸ್‌ಎಸ್‌ನವನು. ಇದು ಸರ್ಕಾರಿ ಪ್ರಾಯೋಜಿತ ದಾಳಿ ಎಂದು ಹೇಳಿದರು.

ADVERTISEMENT

ಬಿಜೆಪಿಯವರು ಟಿಪ್ಪುವನ್ನು ವಿರೋಧಿಸುತ್ತಾರೆ. ಬಿ.ಎಸ್.ಯಡಿಯೂರಪ್ಪ ಮತ್ತು ಜಗದೀಶ ಶೆಟ್ಟರ್ ಟಿಪ್ಪು ಬಗ್ಗೆ ಏನು ಹೇಳಿದ್ದಾರೆ ಎಂದು ನಾನು ತೋರಿಸಲಾ. ಆ ಸಂದರ್ಭದಲ್ಲಿ ಇವರ ವಿರುದ್ಧ ಏಕೆ ಪ್ರತಿಭಟಿಸಲಿಲ್ಲ. ಯಡಿಯೂರಪ್ಪ ಟಿಪ್ಪು ಪೇಟ ಹಾಕಿಕೊಂಡು ಖಡ್ಗ ಹಿಡಿದುಕೊಂಡಿದ್ದರು. ಆಗ ಕೆ.ಜೆ.ಬೋಪಯ್ಯ,ಪ್ರಲ್ಹಾದ ಜೋಶಿ ಎಲ್ಲಿ ಹೋಗಿದ್ದರು. ಬಿಜೆಪಿಯವರು ಡೋಂಗಿಗಳು ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.