ADVERTISEMENT

ಕಾಂಗ್ರೆಸ್ ತ್ಯಜಿಸಿ, ಕುಣಿಗಲ್‌ ಕ್ಷೇತ್ರದಿಂದ ಸ್ಪರ್ಧಿಸುವೆ: ಮುದ್ದಹನುಮೇಗೌಡ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 8:29 IST
Last Updated 1 ಸೆಪ್ಟೆಂಬರ್ 2022, 8:29 IST
ಡಿ.ಕೆ ಶಿವಕುಮಾರ್‌ ಜತೆ ಮುದ್ದಹನುಮೇಗೌಡ ಚರ್ಚೆ
ಡಿ.ಕೆ ಶಿವಕುಮಾರ್‌ ಜತೆ ಮುದ್ದಹನುಮೇಗೌಡ ಚರ್ಚೆ    

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕುಣಿಗಲ್ ಕ್ಷೇತ್ರದಿಂದ ಕಣಕ್ಕಿಳಿಯಲು ಮುಂದಾಗಿರುವ ಮಾಜಿ ಸಂಸದ ಮುದ್ದಹನುಮೇಗೌಡ, ಕಾಂಗ್ರೆಸ್‌ ತ್ಯಜಿಸಲು ನಿರ್ಧರಿಸಿದ್ದಾರೆ.

ಅದಕ್ಕೂ ಮೊದಲು ಗುರುವಾರ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪಕ್ಷದಿಂದ ತಮ್ಮನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಇಬ್ಬರನ್ನೂ ಭೇಟಿ ಮಾಡಿದ ಬಳಿಕ ಮಾತನಾಡಿದ ಮುದ್ದಹನುಮೇಗೌಡ, ‘ಪಕ್ಷ ತೊರೆಯುವ ನಿರ್ಧಾರ ಮಾಡಿದ್ದೇನೆ. ಮುಂದೆ ಕುಣಿಗಲ್ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ. ನನ್ನ ನಿರ್ಧಾರ ಅಚಲವಾಗಿದೆ’ ಎಂದರು.

ADVERTISEMENT

‘ಪಕ್ಷ ತೊರೆಯುವ ನಿರ್ಧಾರ ಮಾಡಬೇಡಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಪಕ್ಷದಿಂದ ಬಿಡುಗಡೆ ಮಾಡಿ ಎಂದು ನಾನು ಕೇಳಿದ್ದೇನೆ. ಇಷ್ಟು ವರ್ಷ ನಡೆದ ರಾಜಕೀಯ ಧೋರಣೆಗಳು ಈಗಿನ ಪರಿಸ್ಥಿತಿಗೆ ಕಾರಣ’ ಎಂದರು.

‘ಪಕ್ಷ ಬಿಡಬೇಕಾದರೆ ನನ್ನ ಕಾರಣ ಇರಬೇಕು ಇಲ್ಲವೇ ಪಕ್ಷದಿಂದ ಆಗಿರಬೇಕು. ಅದು ನನ್ನ ಕಡೆಯಿಂದ ಆಗಿದ್ದರೆ ಪಕ್ಷ ಸ್ಪಷ್ಟವಾಗಿ ಹೇಳಬೇಕು. ಒಂದು ರಾಷ್ಟ್ರೀಯ ಪಕ್ಷ ಬಿಡಲು ಬಲವಾದ ಕಾರಣದಿಂದ ಇರಬೇಕು ತಾನೇ? ನಾಯಕರನ್ನ ಭೇಟಿ ಮಾಡಿ ನನ್ನ ಸ್ಪಷ್ಟ ನಿರ್ಧಾರ ತಿಳಿಸಿದ್ದೇನೆ’ ಎಂದರು.

‘ರಾಜ್ಯಸಭಾ ಚುನಾವಣೆ ವೇಳೆ ರಣದೀಪ್ ಸಿಂಗ್ ಸುರ್ಜೇವಾಲ ದೂರವಾಣಿ ಕರೆ ಮಾಡಿ ಪಕ್ಷದಲ್ಲೇ ಇರುವಂತೆ ಹೇಳಿದ್ದರು. ಬಳಿಕ ಏನನ್ನೂ ಮಾತನಾಡಿಲ್ಲ. ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡಲು ಬಯಸುವುದಿಲ್ಲ. ಇವತ್ತೇ ರಾಜೀನಾಮೆ ಪತ್ರವನ್ನು ಕಳುಹಿಸುತ್ತೇನೆ. ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡಲು ಈ ರೀತಿ ಮಾಡುತ್ತಿಲ್ಲ‘ ಎಂದರು.

‘1989ರಲ್ಲಿ ಕಾಂಗ್ರೆಸ್ ‘ಬಿ’ ಪಾರಂ ಕೊಟ್ಟು ನಂತರ ಬೇರೆಯವರಿಗೆ ಕೊಟ್ಟಿದ್ದರು. ನಂತರ 2019ರಲ್ಲಿ ಹಾಲಿ ಸಂಸದನಾಗಿದ್ದರೂ ನಿಲ್ಲಲು ಅವಕಾಶ ಕೊಡಲಿಲ್ಲ. ನಾಲ್ಕು ಬಾರಿ ಚುನಾವಣೆಗೆ ಸ್ಪರ್ಧೆ ಮಾಡುವುದನ್ನು ತಪ್ಪಿಸಲಾಗಿದೆ. ನಾನು ಅತ್ಯಂತ ಕ್ರಿಯಾಶೀಲನಾಗಿ ಪಕ್ಷ ಸಂಘಟನೆ ಮಾಡಿದ್ದೇನೆ. ಪಕ್ಷಕ್ಕೆ ನನ್ನದೇ ಆದ ಅಳಿಲು ಸೇವೆ ಸಲ್ಲಿಸಿದ್ದೇನೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನನ್ನ ಸೇವೆಯೂ ಇದೆ. ನನ್ನ ಕ್ರಿಯಾಶೀಲ ರಾಜಕೀಯ ನಿಂತಿಲ್ಲ’ ಎಂದರು.

‘ಹಲವು ವರ್ಷಗಳ ಹಿಂದೆಯೇ ನಾನು ಕುಣಿಗಲ್ ಕ್ಷೇತ್ರದ ಶಾಸಕನಾಗಿದ್ದೆ. ಮುಂದಿನ ಚುನಾವಣೆಗೆ ಅಲ್ಲಿಯೇ ಸ್ಪರ್ಧಿಸಬೇಕೆಂದು ಜನ ಬಯಸಿದ್ದಾರೆ. ಅತೀ ಶೀಘ್ರದಲ್ಲಿ ಒಳ್ಳೆಯ ನಿರ್ಧಾರ ಬರುತ್ತೇನೆ’ ಎಂದರು.

ಬಿಜೆಪಿಯ ‘ಆಪರೇಷನ್ ಕಮಲ’ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಾನು ಏನೂ ಅಧಿಕಾರದಲ್ಲಿ ಇದ್ದೇನಾ ಆಪರೇಷನ್ ಮಾಡಲು’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.