ADVERTISEMENT

ಪಾಕಿಸ್ತಾನದ ವಿರುದ್ಧ ಯುದ್ಧ ಬೇಡ ಎಂದಿಲ್ಲ: ಸಿಎಂ ಸಿದ್ದರಾಮಯ್ಯ

ವಿಪಕ್ಷಗಳು ತಮ್ಮ ಹೇಳಿಕೆ ತಿರುಚಿವೆ: ಸಿದ್ದರಾಮಯ್ಯ ತರಾಟೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 22:59 IST
Last Updated 27 ಏಪ್ರಿಲ್ 2025, 22:59 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ದೇವನಹಳ್ಳಿ: ‘ಪಾಕಿಸ್ತಾನದ ಮೇಲೆ ಯುದ್ಧ ಬೇಡ ಎಂದು ನಾನು ಹೇಳಿಲ್ಲ. ಅನಿವಾರ್ಯವಾದರೆ ಯುದ್ಧಕ್ಕೂ ಸಿದ್ಧ. ಯುದ್ಧ ಅಂತಿಮ‌ ಆಯ್ಕೆಯೇ ಹೊರತು, ಏಕೈಕ ಆಯ್ಕೆ ಅಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

‘ಮೈಸೂರಿನಲ್ಲಿ ನಾನು ಹೇಳಿದ್ದು ಇದನ್ನೇ. ಆದರೆ, ಬಿಜೆಪಿಯವರು ಅದನ್ನು ತಿರುಚಿ, ಪಾಕಿಸ್ತಾನದ ವಿರುದ್ಧ ಸಿದ್ದರಾಮಯ್ಯ ಯುದ್ಧ ಬೇಡ ಅನ್ನುತ್ತಿದ್ದಾರೆ ಎಂದು ಅಪಪ್ರಚಾರ ಆರಂಭಿಸಿದ್ದಾರೆ’ ಎಂದು ವಿರೋಧ ಪಕ್ಷದವ ರನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

ಬೈರದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸರ್ಕಾರದ ಎರಡನೇ ವರ್ಷದ ಸಾಧನಾ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಭಾರತ ಬುದ್ಧ ಮತ್ತು ಬಸವಣ್ಣನ ನಾಡು. ನಾವು ಶಾಂತಿಪ್ರಿಯರು. ಯಾರ ಮೇಲೂ ಅನಗತ್ಯವಾಗಿ ಕಾಲು ಕೆರೆದುಕೊಂಡು ಯುದ್ಧಕ್ಕೆ ದಂಡೆತ್ತಿ ಹೋಗುವುದಿಲ್ಲ. ಆದರೆ, ನಮ್ಮನ್ನು ಕೆಣಕಿದರೆ ಸುಮ್ಮನೇ ಕೂರಲ್ಲ. ಅನಿವಾರ್ಯವಾದರೆ ಪಾಕಿಸ್ತಾನದ ವಿರುದ್ಧವೂ ಯುದ್ಧಕ್ಕೆ ಹಿಂಜರಿಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ದೇಶದ ಏಕತೆ ಮತ್ತು ಸಾರ್ವಭೌಮತೆಗೆ ಧಕ್ಕೆಯಾದರೆ ಯುದ್ಧ ಅನಿವಾರ್ಯ. ಪಾಕಿಸ್ತಾನವೇ ಆಗಲಿ ಇನ್ನಾವುದೇ ದೇಶವಾಗಲಿ ಯುದ್ಧಕ್ಕೆ ಭಾರತ ಸಿದ್ಧ. ರಾಷ್ಟ್ರದ ಅಖಂಡತೆ ಮತ್ತು ಸಮಗ್ರತೆಗೆ ಕಳಂಕ ತಂದರೆ ಸುಮ್ಮನೆ ಕೂರುವ ಪ್ರಶ್ನೇಯೇ ಇಲ್ಲ. ಇದರಲ್ಲಿ ಯಾವುದೇ ರಾಜಿ  ಇಲ್ಲ. ದೇಶದ ನೆಲ, ಜಲ ಮತ್ತು ಜೀವಗಳಿಗೆ ಕಂಟಕ ತರುವ ಯಾರೇ ಆದರೂ ಅವರನ್ನು ಸುಮ್ಮನೆ ಬಿಡುವುದಿಲ್ಲ. ಅವರು ಎಷ್ಟೇ ಶಕ್ತಿಶಾಲಿಯಾದರೂ ಬಗ್ಗು ಬಡಿಯುತ್ತೇವೆ’ ಎಂದು ಗುಡುಗಿದರು.

‘ಭಯೋತ್ಪಾದನೆಯಂತಹ ವಿಧ್ವಂಸಕ ಕೃತ್ಯವನ್ನು ಯಾರಿಂದಲೂ ಸಹಿಸಲು ಸಾಧ್ಯವಿಲ್ಲ. ಉಗ್ರರನ್ನು ಮಟ್ಟ ಹಾಕಿ, ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತು ಹಾಕಬೇಕು. ಭಾರತೀಯರ ರಕ್ಷಣೆಯ ವಿಚಾರದಲ್ಲಿ ರಾಜಿ ಇಲ್ಲ. ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ಯಾವುದೇ ಮುಲಾಜಿಲ್ಲದೆ ಕಟುವಾದ ಶಬ್ದಗಳಲ್ಲಿ ಖಂಡಿಸುತ್ತೇನೆ’ ಎಂದು ಸ್ಪಷ್ಟಪಡಿಸಿದರು.

‘ಅನಿವಾರ್ಯ ಸಂದರ್ಭ ಎದುರಾದರೆ ಯುದ್ಧ ಮಾಡಿ ದೇಶದ ಸಾರ್ವಭೌಮತ್ವ ಕಾಪಾಡಿಕೊಳ್ಳುವುದು ಭಾರತಕ್ಕೆ ಗೊತ್ತಿದೆ. ಇದನ್ನು ಭಾರತ ಪ್ರತಿ ಬಾರಿ ಸಾಬೀತು ಮಾಡಿರುವುದನ್ನು ಇತಿಹಾಸ ಪುಟ, ಪುಟಗಳೂ ಹೇಳುತ್ತಿವೆ’ ಎಂದರು.

ಯುದ್ಧ ಬೇಡವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಶಾಂತಿ ದೃಷ್ಟಿಯಿಂದಷ್ಟೇ. ಆ ಹೇಳಿಕೆಯನ್ನು ನಾವು ದೌರ್ಬಲ್ಯ ಎಂದು ಅರ್ಥೈಸಿಕೊಳ್ಳಬಾರದು
ಜಿ.ಪರಮೇಶ್ವರ, ಗೃಹ ಸಚಿವ
ಪುಲ್ವಾಮಾದಲ್ಲಿ 40 ಸೈನಿಕರ ಬಲಿ ತೆಗೆದುಕೊಂಡ ಉಗ್ರರ ದಾಳಿಯ ನಂತರವಾದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದ್ದರೆ ಇಂದು ಪಹಲ್ಗಾಮ್ ಘಟನೆ ನಡೆಯುತ್ತಿರಲಿಲ್ಲ.
ಸಿದ್ದರಾಮಯ್ಯ, ಮುಖ್ಯಮಂತ್ರಿ
ಪಾಕಿಸ್ತಾನವು ಉಗ್ರರ ಮೂಲಕ ಭಾರತದ ಮೇಲೆ ದಾಳಿ ಮಾಡುತ್ತಿದ್ದರೂ ಅವರ ವಿರುದ್ಧ ಯುದ್ಧ ಮಾಡಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದು ಅಕ್ಷಮ್ಯ ಅಪರಾಧ. ಅವರು ದೇಶದ ಕ್ಷಮೆ ಕೇಳಬೇಕು. ಅಲ್ಪಸಂಖ್ಯಾತರ ಓಲೈಕೆಗಾಗಿ ಪಾಕಿಸ್ತಾನ ಪರ ಮಾತನಾಡುವುದು ಸರಿಯಲ್ಲ
–ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಹಿಂದೂಗಳನ್ನು ಗುರಿ ಮಾಡಿ ದಾಳಿ ನಡೆಸಿದರೂ ಸಿದ್ದರಾಮಯ್ಯ ಹೀಗೆ ಹೇಳುತ್ತಾರೆಂದರೆ ಅವರೊಬ್ಬ ಮುಸ್ಲಿಂ ಏಜೆಂಟ್, ಪಾಕಿಸ್ತಾನದ ಏಜೆಂಟ್‌.
ಬಸನಗೌಡ ಪಾಟೀಲ ಯತ್ನಾಳ, ಶಾಸಕ
ತಮ್ಮ (ಸಿದ್ದರಾಮಯ್ಯ) ಬಾಲಿಶ ಹೇಳಿಕೆಗಳಿಂದ ಈಗ ರಾತ್ರೋರಾತ್ರಿ ಪಾಕಿಸ್ತಾನದಲ್ಲಿ ವರ್ಲ್ಡ್‌ ಫೇಮಸ್‌ ಆಗಿ ಬಿಟ್ಟಿದ್ದೀರಿ; ಅಭಿನಂದನೆಗಳು. ಮುಂದೆಂದಾದರೂ ತಾವು ಪಾಕಿಸ್ತಾನಕ್ಕೆ ಭೇಟಿ ಕೊಟ್ಟರೆ ತಮಗೆ ರಾಜಾತಿಥ್ಯ ಗ್ಯಾರಂಟಿ‌
ಆರ್‌.ಅಶೋಕ, ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.