ಬೆಂಗಳೂರು: ‘ತಮ್ಮ ಹೆಸರಿಗೆ ಆಸ್ತಿ ಬರೆಯಿಸಿಕೊಂಡು ಚಿಕಿತ್ಸೆ ನೆಪದಲ್ಲಿ ವೃದ್ಧ ಪೋಷಕರನ್ನು ಆಸ್ಪತ್ರೆಯಲ್ಲಿ ಬಿಟ್ಟು ಮಕ್ಕಳು ನಾಪತ್ತೆಯಾಗುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿವೆ. ಅಂತಹ ಪೋಷಕರು ತಮ್ಮ ಮಕ್ಕಳ ಪರವಾಗಿ ಮಾಡಿರುವ ವಿಲ್ ಅಥವಾ ಆಸ್ತಿ ವರ್ಗಾವಣೆಗಳನ್ನು ರದ್ದುಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದು ಉನ್ನತ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ ವಿವಿಧ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಿದ್ದಾರೆ.
‘ಇಂತಹ ಪ್ರಕರಣಗಳು ಕಂಡುಬಂದ ತಕ್ಷಣವೇ ಸಂಬಂಧಪಟ್ಟ ಕಂದಾಯ ಉಪ ವಿಭಾಗಾಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣ ನಿರ್ದೇಶಕರು ದೂರು ನೀಡಬೇಕು. ಪೋಷಕರು ಕೂಡ ತಮ್ಮ ಮಕ್ಕಳ ಪರವಾಗಿ ಮಾಡಿದ ವಿಲ್ ಅಥವಾ ಆಸ್ತಿ ವರ್ಗಾವಣೆಯನ್ನು ರದ್ದುಗೊಳಿಸಬೇಕು’ ಎಂದು ಸಚಿವರು ನಿರ್ದೇಶನ ನೀಡಿದ್ದಾರೆ.
ಆಸ್ತಿಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡ ಮಕ್ಕಳು ತಮ್ಮ ಪೋಷಕರನ್ನು ಚಿಕಿತ್ಸೆ ನೆಪದಲ್ಲಿ ಬಿಟ್ಟು ಹೋಗುತ್ತಿದ್ದಾರೆ. ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಐಎಂಎಸ್) ಒಂದರಲ್ಲೇ 150ಕ್ಕೂ ಹೆಚ್ಚು ಹಿರಿಯ ನಾಗರಿಕರನ್ನು ಮಕ್ಕಳು ತೊರೆದ ಪ್ರಕರಣಗಳು ನಡೆದಿದೆ. ಇತರ ವೈದ್ಯಕೀಯ ಸಂಸ್ಥೆಗಳಲ್ಲಿ ಇಂತಹ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ವಿವಿಧ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಸದಸ್ಯರ ಜೊತೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡ ಸಚಿವರು, ಜನ್ಮ ನೀಡಿದ ತಂದೆ-ತಾಯಂದಿರನ್ನೇ ಅನಾಥರನ್ನಾಗಿ ಮಾಡುತ್ತಿರುವ ಮಕ್ಕಳ ಅಮಾನವೀಯ ಕೃತ್ಯಗಳಿಗೆ ತಡೆ ಹಾಕಬೇಕು ಎಂದು ಸೂಚಿಸಿದ್ದಾರೆ.
‘ನೋಡಿಕೊಳ್ಳಲು ಆಗದೆ ಮಕ್ಕಳು ನಮ್ಮನ್ನು ತೊರೆದಿದ್ದಾರೆ. ಕೆಲವರು ಆರ್ಥಿಕ ಸಂಕಷ್ಟಗಳಿಂದ ಬಿಟ್ಟು ಹೋಗಿದ್ದಾರೆ. ಆಸ್ತಿಗಳನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡ ನಂತರ ತಮ್ಮ ಪೋಷಕರನ್ನು ಮಕ್ಕಳು ಆಸ್ಪತ್ರೆಗೆ ಸೇರಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಊಟ, ವಸತಿ, ಆಶ್ರಯ ಉಚಿತವಾಗಿ ಸಿಗುತ್ತದೆ ಎಂಬ ಕಾರಣಕ್ಕೆ ನಮ್ಮನ್ನು ಇಲ್ಲಿ ಬಿಟ್ಟುಹೋಗಿದ್ದಾರೆ ಎಂದು ಪರಿತ್ಯಕ್ತ ಪೋಷಕರು ಹೇಳಿಕೊಂಡಿದ್ದಾರೆ. ಇಂಥ ಕೆಲವು ಹಿರಿಯ ನಾಗರಿಕರಿಗೆ ಬೆಳಗಾವಿ ಮತ್ತು ಸುತ್ತಮುತ್ತಲಿನ ವೃದ್ಧಾಶ್ರಮಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. ಇನ್ನೂ ಅನೇಕರು ಆಸ್ಪತ್ರೆಗಳಲ್ಲಿಯೇ ಇದ್ದಾರೆ’ ಎಂದು ಬಿಐಎಂಎಸ್ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.