ADVERTISEMENT

ಆದಾಯಕ್ಕಿಂತ ಹೆಚ್ಚು ಆಸ್ತಿ: 15 ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 3:15 IST
Last Updated 24 ನವೆಂಬರ್ 2021, 3:15 IST
ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿದರು.    

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ 15 ಅಧಿಕಾರಿಗಳ ಮನೆ, ಕಚೇರಿ ಹಾಗೂ ಅವರ ನಿಕಟವರ್ತಿಗಳ ಮನೆಗಳ ಮೇಲೆ ಬುಧವಾರ ಬೆಳಿಗ್ಗೆಯೇ ದಾಳಿ ಮಾಡಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶೋಧ ನಡೆಸುತ್ತಿದೆ.

ಮಂಗಳೂರು ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್‌ ಕೆ.ಎಸ್‌. ಲಿಂಗೇಗೌಡ, ಕಾವೇರಿ ನೀರಾವರಿ ನಿಮಗದ ಮಂಡ್ಯದ ಹೇಮಾವತಿ ಎಡದಂಡೆ ಕಾಲುವೆ ಕಾರ್ಯನಿರ್ವಾಹಕ ಎಂಜಿನಿಯರ್‌ ಶ್ರೀನಿವಾಸ್‌ ಕೆ., ದೊಡ್ಡಬಳ್ಳಾಪುರದ ಕಂದಾಯ ನಿರೀಕ್ಷಕ ಲಕ್ಷ್ಮೀನರಸಿಂಹಯ್ಯ, ಬೆಂಗಳೂರು ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದ ವಾಸುದೇವ್‌, ಬೆಂಗಳೂರಿನ ನಂದಿನ ಡೇರಿಯ ಪ್ರಧಾನ ವ್ಯವಸ್ಥಾಪಕ ಬಿ. ಕೃಷ್ಣಾ ರೆಡ್ಡಿ, ಗದಗ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ. ರುದ್ರಪ್ಪ, ಸವದತ್ತಿಯ ಸಹಕಾರ ಅಭಿವೃದ್ಧಿ ಅಧಿಕಾರಿ ಎ.ಕೆ. ಮಾಸ್ತಿ, ಗೋಕಾಕದ ಹಿರಿಯ ಮೋಟಾರು ವಾಹನ ನಿರೀಕ್ಷಕ ಸದಾಶಿವ ಮರಿಲಿಂಗಣ್ಣನವರ್‌, ಬೆಳಗಾವಿಯ ಹೆಸ್ಕಾಂ ಕಚೇರಿಯ ಸಿ ದರ್ಜೆ ಸಿಬ್ಬಂದಿ ನತಾಜಿ ಹೀರಾಜಿ ಪಾಟೀಲ್‌, ಬಳ್ಳಾರಿಯ ನಿವೃತ್ತ ಉಪ ನೋಂದಣಾಧಿಕಾರಿ ಶಿವಾನಂದ ಮೇಲೆ ಎಸಿಬಿ ದಾಳಿ ಮಾಡಿದೆ.

ಯಲಹಂಕ ಸರ್ಕಾರಿ ಆಸ್ಪತ್ರೆಯ ಫಿಸಿಯೋಥೆರಪಿ ತಜ್ಞ ರಾಜಶೇಖರ್‌, ಬಿಬಿಎಂಪಿಯ ಮುಖ್ಯ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಪ್ರಥಮ ದರ್ಜೆ ಸಹಾಯಕ ಮಾಯಣ್ಣ ಎಂ., ಸಕಾಲ ಸೇವೆಗಳ ವಿಭಾಗದಲ್ಲಿರುವ ಕೆಎಎಸ್‌ ಅಧಿಕಾರಿ ಎಲ್‌.ಸಿ. ನಾಗರಾಜ್‌, ಬಿಬಿಎಂಪಿ ಯಶವಂತಪುರ ವಿಭಾಗ ಕಚೇರಿಯ ಡಿ ದರ್ಜೆ ಸಿಬ್ಬಂದಿ ಜಿ.ವಿ. ಗಿರಿ, ಲೋಕೋಪಯೋಗಿ ಇಲಾಖೆಯ ಜೇವರ್ಗಿ ಉಪ ವಿಭಾಗದ ಕಿರಿಯ ಎಂಜಿನಿಯರ್‌ ಎಂ.ಎಸ್‌. ಬಿರಾದಾರ್‌ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲೂ ಶೋಧ ನಡೆಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

15 ಮಂದಿಯ ವಿರುದ್ಧವೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದಿಂದ ಶೋಧನಾ ವಾರೆಂಟ್‌ ಪಡೆದು ಕಾರ್ಯಾಚರಣೆ ನಡೆಸಲಾಗುತ್ತಿದೆ. ಏಕಕಾಲಕ್ಕೆ 60 ಸ್ಥಳಗಳ ಮೇಲೆ ದಾಳಿ ಮಾಡಲಾಗಿದೆ. ಸಂಸ್ಥೆಯ ಎಂಟು ಎಸ್‌ಪಿಗಳು, 100 ಅಧಿಕಾರಿಗಳು ಮತ್ತು 300 ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.

ಆರೋಪಿತ ಸರ್ಕಾರಿ ಅಧಿಕಾರಿಗಳು, ನೌಕರರ ಮನೆಗಳು ಮತ್ತು ಅವರ ನಿಕಟವರ್ತಿಗಳ ಮನೆಗಳಲ್ಲಿ ಸ್ಥಿರಾಸ್ತಿ ಒಡೆತನದ ದಾಖಲೆಗಳು, ಬ್ಯಾಂಕ್‌ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳು, ಚಿನ್ನಾಭರಣ, ವಾಹನಗಳ ವಿವರಗಳನ್ನು ಸಂಗ್ರಹಿಸುವ ಕೆಲಸ ಮುಂದುವರಿದಿದೆ.

ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.