
ಜಿ.ಪರಮೇಶ್ವರ
ಬೆಂಗಳೂರು: ‘ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಿ ಗಡಿಪಾರು ಮಾಡುತ್ತಿದ್ದೇವೆ. ಮನೆ ಬಾಡಿಗೆಗೆ ನೀಡುವಾಗ ದಾಖಲೆಗಳನ್ನು ಪರಿಶೀಲಿಸುವಂತೆ ಸೂಚನೆ ನೀಡಲಾಗಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಾಂಗ್ಲಾ ವಲಸಿಗರ ವಿಚಾರದಲ್ಲಿ ಸರ್ಕಾರ ಕಠಿಣವಾಗಿದೆ. ಕೇಂದ್ರ ಸರ್ಕಾರವು ಗಡಿಯನ್ನು ಬಿಗಿಗೊಳಿಸಬೇಕು. ಹಣ ಕೊಟ್ಟು ಒಳಗೆ ಬರುತ್ತಾರೆಂದರೆ ಗಡಿ ಪ್ರದೇಶದಲ್ಲಿ ಸರಿಯಾಗಿ ಕೆಲಸ ಆಗುತ್ತಿಲ್ಲ ಅನಿಸುತ್ತಿದೆ. ಈ ಬಗ್ಗೆ ರಕ್ಷಣಾ ಇಲಾಖೆ ಕ್ರಮ ತೆಗೆದುಕೊಳ್ಳಬೇಕು’ ಎಂದರು.
‘ಮಹಿಳೆಯರ ವಾಸಕ್ಕೆ ದೇಶದ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಬೆಂಗಳೂರು ನಗರ ಮೊದಲನೇ ಸ್ಥಾನದಲ್ಲಿರುವುದು ಹೆಮ್ಮೆಯ ವಿಚಾರ’ ಎಂದರು.
‘ಸುರಕ್ಷತೆ, ತಂತಜ್ಞಾನ, ಮೂಲಸೌಕರ್ಯ ಮತ್ತಿತರ ಮಾನದಂಡಗಳನ್ನು ಆಧರಿಸಿ ಚೆನ್ನೈ ಮೂಲದ ಅವತಾರ್ ಗ್ರೂಪ್ ಪ್ರಕಟಿಸಿರುವ ‘ಭಾರತದಲ್ಲಿ ಮಹಿಳೆಯರಿಗಾಗಿ ಅತ್ಯುತ್ತಮ ನಗರಗಳ’ ಪಟ್ಟಿಯಲ್ಲಿ ಬೆಂಗಳೂರು ನಗರ 53.29 ಅಂಕ ಪಡೆದು ಮೊದಲನೇ ಸ್ಥಾನದಲ್ಲಿದೆ’ ಎಂದರು.
‘ನ್ಯಾಯ ಒದಗಿಸುವುದರಲ್ಲಿ ಈ ಹಿಂದೆಯೂ ಕರ್ನಾಟಕ ಪೊಲೀಸ್ ಸಮರ್ಥವಾಗಿ ಕೆಲಸ ಮಾಡಿದೆ. ಆದರೆ, ವಿರೋಧ ಪಕ್ಷದವರು ದಿನನಿತ್ಯ ಬೆಂಗಳೂರಿನ ಕುರಿತು ಟೀಕೆ ಮಾಡುತ್ತಾರೆ. ಈ ವರದಿ ಅವರಿಗೆ ಉತ್ತರವಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.