ADVERTISEMENT

ಮೀಸಲಾತಿ ಹೆಚ್ಚಳಕ್ಕೆ ಸುಗ್ರಿವಾಜ್ಞೆ | ಸಚಿವ ಸಂಪುಟ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2022, 20:07 IST
Last Updated 20 ಅಕ್ಟೋಬರ್ 2022, 20:07 IST
   

ಬೆಂಗಳೂರು: ಪರಿಶಿಷ್ಟ ಜಾತಿ (ಎಸ್‌.ಸಿ) ಮತ್ತು ಪಂಗಡಗಳ (ಎಸ್‌.ಟಿ) ಮೀಸಲಾತಿ ಪ್ರಮಾಣವನ್ನು ಶೇ 6 ರಷ್ಟು ಹೆಚ್ಚಿಸುವ ನಿರ್ಧಾರವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸಂಪುಟದ ನಿರ್ಧಾರವನ್ನು ರಾಜ್ಯಪಾಲರ ಅಂಕಿತಕ್ಕಾಗಿ ಶುಕ್ರವಾರ ಕಳುಹಿಸಲಾಗುವುದು. ಅವರ ಒಪ್ಪಿಗೆ ಸಿಕ್ಕಿದ ಬಳಿಕ ಕಾನೂನು ಜಾರಿ ಆಗಲಿದೆ ಎಂದುಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

‘ನಮ್ಮ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪಟ್ಟಿಗೆ ಹೆಚ್ಚಿನ ಜಾತಿಗಳು ಸೇರಿವೆ. ಮೊದಲಿಗೆ ಪರಿಶಿಷ್ಟ ಜಾತಿಯಲ್ಲಿ 6 ಜಾತಿಗಳು ಇದ್ದವು. ಈಗ ಅದು 103 ಕ್ಕೆ ಹೆಚ್ಚಿದೆ. ಪರಿಶಿಷ್ಟ ಪಂಗಡದಲ್ಲಿ 2 ರಿಂದ 3 ಜಾತಿಗಳು ಇದ್ದವು, ಈಗ 56 ಜಾತಿಗಳಿವೆ. ಮೀಸಲಾತಿ ಹೆಚ್ಚಳಕ್ಕೆ ಇದನ್ನೇ ಸಮರ್ಥನೆಯನ್ನಾಗಿ ಬಳಸಿಕೊಳ್ಳಲಾಗುವುದು.ಎಲ್ಲರಿಗೂ ಸೂಕ್ತ ಪ್ರಾತಿನಿಧ್ಯ ನೀಡಬೇಕಾಗುತ್ತದೆ. ಇದಕ್ಕಾಗಿ ಮೀಸಲಾತಿ ಹೆಚ್ಚಿಸುವುದು ಅನಿವಾರ್ಯ ಎಂಬುದನ್ನು ಹೇಳಬೇಕಾಗುತ್ತದೆ’ ಎಂದು ಅವರು ಹೇಳಿದರು.

ADVERTISEMENT

‘ಸಂವಿಧಾನದ ಒಂಬತ್ತನೇ ಪರಿಚ್ಛೇದ ಅಡಿ ಮೀಸಲಾತಿ ಪ್ರಮಾಣ ಹೆಚ್ಚಿಸುವುದನ್ನು ಕೇಳುವುದಕ್ಕೂ ಮೊದಲು ಇತರ ಸಮುದಾಯಗಳ ಮೀಸಲಾತಿ ಬೇಡಿಕೆಗಳನ್ನು ಪರಿಗಣಿಸಬೇಕಾಗುತ್ತದೆ. ಮೊದಲಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಿಸಿ, ಉಳಿದದ್ದು ಬಳಿಕ ನೋಡೋಣ ಎಂಬ ತೀರ್ಮಾನಕ್ಕೆ ಬರಲಾಯಿತು’ ಎಂದು ಹೇಳಿದರು.

‘ತಮಿಳುನಾಡುಒಂಬತ್ತನೇ ಪರಿಚ್ಛೇದ ಅಡಿ ಶೇ 69 ರಷ್ಟು ಮೀಸಲಾತಿ ನೀಡಿದೆ. ಇದರ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ದಾಖಲಾಗಿದೆ. ಆದರೆ, ಸುಪ್ರೀಂಕೋರ್ಟ್‌ ಮೀಸಲಾತಿಗೆ ತಡೆ ನೀಡಿಲ್ಲ. ಇದೇ ರೀತಿ ಹಲವು ರಾಜ್ಯಗಳು ಶೇ 50 ಕ್ಕೂ ಹೆಚ್ಚು ಮೀಸಲಾತಿ ನೀಡಿದ್ದು, ಇವುಗಳ ಪ್ರಕರಣಗಳೂ ಇತ್ಯರ್ಥವಾಗಿಲ್ಲ’ ಎಂದು ಮಾಧುಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.