ADVERTISEMENT

Ind–Pak Tensions: ಸೇನಾ ಪಡೆಗೆ ಬೆಂಬಲ ಸೂಚಿಸಿ ಕಾಂಗ್ರೆಸ್‌ನಿಂದ ತಿರಂಗಾ ಯಾತ್ರೆ

​ಪ್ರಜಾವಾಣಿ ವಾರ್ತೆ
Published 9 ಮೇ 2025, 7:24 IST
Last Updated 9 ಮೇ 2025, 7:24 IST
   

ಬೆಂಗಳೂರು: ಉಗ್ರರ ವಿರುದ್ಧ ‘ಆಪರೇಷನ್‌ ಸಿಂಧೂರ’ ಹೆಸರಿನಲ್ಲಿ ಸಮರ ಸಾರಿರುವ ಭಾರತೀಯ ಸೇನಾ ಪಡೆಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಕೆ.ಆರ್. ವೃತ್ತದಿಂದ ಮ್ಯೂಸಿಯಂ ರಸ್ತೆಯ ಚಿನ್ನಸ್ವಾಮಿ ಸ್ಟೇಡಿಯಂ ವೃತ್ತದ ಮಿನ್ಸ್ ಸ್ಕ್ವೇರ್‌ವರೆಗೆ ಶುಕ್ರವಾರ ‘ತಿರಂಗಾ ಯಾತ್ರೆ’ ನಡೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಯಾತ್ರೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಚ್‌.ಕೆ. ಪಾಟೀಲ್, ಎಂ.ಸಿ. ಸುಧಾಕರ್, ದಿನೇಶ್ ಗುಂಡೂರಾವ್‌, ಕೃಷ್ಣ ಭೈರೇಗೌಡ, ರಾಮಲಿಂಗಾ ರೆಡ್ಡಿ, ಕೆ.ಜೆ. ಜಾರ್ಜ್ ಸೇರಿದಂತೆ ಬಹುತೇಕ ಸಚಿವರು, ಪಕ್ಷದ ನಾಯಕರು, ಕಾಂಗ್ರೆಸ್ ಕಾರ್ಯಕರ್ತರು ದೇಶ ಧ್ವಜ ಹಿಡಿದು ಹೆಜ್ಜೆ ಹಾಕಿದರು.

ಈ ವೇಳೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ, ‘ನಾವು ನಮ್ಮ ಸೈನಿಕರ ಪರ ಇದ್ದೇವೆ. ಅದಕ್ಕಾಗಿ ಈ ಯಾತ್ರೆ ಹಮ್ಮಿಕೊಂಡಿದ್ದೇವೆ’ ಎಂದರು.

ADVERTISEMENT

‘ಭದ್ರತೆಗೆ ಸಂಬಂಧಿಸಿದಂತೆ ಉತ್ತರ ಭಾರತದ ರಾಜ್ಯಗಳಿಗೆ ಕೊಟ್ಟಿರುವ ಸೂಚನೆಗಳನ್ನೇ ನಮಗೂ ಕೇಂದ್ರ ಕೊಟ್ಟಿದೆ. ನಾವು ಆರಂಭದಿಂದಲೂ ಎಲ್ಲ ಜಿಲ್ಲೆಗಳ ಎಸ್‌ಪಿ‌ಗಳಿಗೆ ಮುನ್ನೆಚ್ಚರಿಕೆ ಸೂಚನೆ ನೀಡಿದ್ದೇವೆ. ಮಾಹಿತಿಗಳನ್ನು ಸಂಗ್ರಹಿಸಲು ತಿಳಿಸಿದ್ದವೆ. ಸ್ಲೀಪರ್ ಸೆಲ್‌ಗಳ ಮೇಲೂ ನಿಗಾ ಇಡಲು ಸೂಚಿಸಲಾಗಿದೆ. ಸ್ಥಳೀಯ ಪೊಲೀಸರಿಗೂ ಎಚ್ಚರಿಕೆ ವಹಿಸುವಂತೆ ಸೂಚನೆ ಕೊಡಲಾಗಿದೆ. ಜಲಾಶಯಗಳು, ಅಣೆಕಟ್ಟುಗಳು, ಪ್ರಮುಖ ಸ್ಥಳಗಳಿಗೆ ಭದ್ರತೆ ಕೊಟ್ಟಿದ್ದೇವೆ’ ಎಂದರು.

‘ರಾಜ್ಯದಲ್ಲಿ ಹೆಚ್ಚುವರಿ ಭದ್ರತೆ ಬಗ್ಗೆ ಮುಖ್ಯಮಂತ್ರಿ ಜೊತೆಯಲ್ಲೂ ಚರ್ಚೆ ಮಾಡುತ್ತೇನೆ. ಸಂಪುಟ ಸಭೆಯಲ್ಲೂ ಭದ್ರತೆ ಬಗ್ಗೆ ಪ್ರಸ್ತಾಪ ಆಗಬಹುದು’ ಎಂದರು.

ಡಿ.ಕೆ. ಶಿವಕುಮಾರ್ ಮಾತನಾಡಿ, ‘ಇಡೀ ರಾಜ್ಯದಲ್ಲಿ ನಾವೆಲ್ಲರೂ ಒಂದಾಗಿದ್ದೇವೆ, ಒಟ್ಟಾಗಿದ್ದೇವೆ ಎಂಬ ಸಂದೇಶವನ್ನು ಭಾರತದ ಯೋಧರಿಗೆ ಕಳುಹಿಸಬೇಕು. ಕೇಂದ್ರ ಸರ್ಕಾರದ ನಿರ್ಧಾರದ ಪರ ನಾವೆಲ್ಲರೂ ನಿಲ್ಲಬೇಕು. ದೇಶವನ್ನು ಉಳಿಸೋಣ, ಯೋಧರಿಗೆ ಗೌರವ ಕೊಡೋಣ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.