ADVERTISEMENT

ಮೈಕ್ರೊಲೈಟ್ ಹೆಲಿಕಾಪ್ಟರ್ ಪೈಲಟ್ ಪರವಾನಗಿ ಪಡೆದ ರಾಜ್ಯದ ಮೊದಲಿಗ ಕ್ಯಾ.ಶರ್ಮ ನಿಧನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 14:09 IST
Last Updated 18 ಫೆಬ್ರುವರಿ 2026, 14:09 IST
<div class="paragraphs"><p>ಕ್ಯಾಪ್ಟನ್ ಅರವಿಂದ ಶರ್ಮ (ಬಲ)</p></div>

ಕ್ಯಾಪ್ಟನ್ ಅರವಿಂದ ಶರ್ಮ (ಬಲ)

   

ಬೆಂಗಳೂರು: ಮೈಕ್ರೊಲೈಟ್ (ಪುಟ್ಟದಾದ ಹಗುರ) ಹೆಲಿಕಾಪ್ಟರ್ ಪೈಲಟ್ ಪರವಾನಗಿ ಪಡೆದ ರಾಜ್ಯದ ಮೊದಲ ಪೈಲಟ್ ಎಂಬ ಹೆಗ್ಗಳಿಕೆ ಹೊಂದಿದ್ದ ಕರ್ನಾಟಕ ಹೈಕೋರ್ಟ್ ವಕೀಲ, ಕ್ಯಾಪ್ಟನ್ ಅರವಿಂದ ಶರ್ಮ (58) ಬೆಂಗಳೂರಿನ ಆಸ್ಪತ್ರೆಯಲ್ಲಿ ಬುಧವಾರ ನಸುಕಿನಲ್ಲಿ ಹೃದಯಾಘಾತದಿಂದ ನಿಧನರಾದರು.

ಅವರಿಗೆ ಪತ್ನಿ ಹಾಗೂ ಒಬ್ಬ ಪುತ್ರ ಇದ್ದಾರೆ. ಅರವಿಂದ ಶರ್ಮ 1969ರ ಮಾರ್ಚ್ 21ರಂದು ಬೆಂಗಳೂರಿನಲ್ಲಿ ಜನಿಸಿದ್ದರು. ‘ಬಿಷಪ್‌ ಕಾಟನ್‌ ಬಾಯ್ಸ್‌’ನಲ್ಲಿ ಶಾಲಾ ಶಿಕ್ಷಣ ಪೂರೈಸಿದ್ದರು. ಬಿಎಂಎಸ್ ಕಾಲೇಜಿನಿಂದ ಕಂಪ್ಯೂಟರ್‌ ಸೈನ್ಸ್‌ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ನಂತರ ಮೈಸೂರಿನ ‘ಶಾರದಾ’ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಹಾಗೂ ಬೆಂಗಳೂರಿನ ಆರ್.ವಿ ಕಾಲೇಜಿನಲ್ಲಿ ಸ್ನಾತಕೋತ್ತರ ಕಾನೂನು ಪದವಿ ಪಡೆದಿದ್ದರು.

ADVERTISEMENT

ದಿವಂಗತ ಐಎಎಸ್‌ ಅಧಿಕಾರಿ ಜೆ.ಪಿ.ಶರ್ಮ ಅವರ ಪುತ್ರರೂ ಆಗಿದ್ದ ಅರವಿಂದ ಶರ್ಮ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಹೈಕೋರ್ಟ್‌ ವಕೀಲರಾಗಿ ವೃತ್ತಿ ನಡೆಸುತ್ತಿದ್ದರು. ರಕ್ಷಣಾ ಇಲಾಖೆ ಮತ್ತು ಸಶಸ್ತ್ರ ಬಲ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಪರಿಣತಿ ಹೊಂದಿದ್ದ ಅವರು ಹೈಕೋರ್ಟ್‌ನಲ್ಲಿ ‘ಸಂಡೇ ಕ್ಲಬ್‌’ ಸ್ಥಾಪಿಸಿದ್ದರು. ಈ ಮೂಲಕ ಫಾಲಿ ಎಸ್‌.ನಾರಿಮನ್‌ರಂತಹ ಹಿರಿಯ ವಕೀಲರು ಮತ್ತು ನಿವೃತ್ತ ನ್ಯಾಯಮೂರ್ತಿಗಳಿಂದ ಪ್ರಚಲಿತ ಕಾನೂನು ವಿದ್ಯಮಾನಗಳ ವಿಚಾರ ಮಂಥನದ ಬೌದ್ಧಿಕ ಪಂಕ್ತಿಗೆ ನಾಂದಿ ಹಾಡಿದ್ದರು.

ಸಾಹಸ ಪ್ರವೃತ್ತಿ ಹೊಂದಿದ್ದ ಅವರು 90ರ ದಶಕದಲ್ಲಿ ಜಕ್ಕೂರು ಬಳಿ ಲಘು ವಿಮಾನ ಹಾರಾಟ ತರಬೇತಿ ನೀಡುವ ಕೇಂದ್ರವೊಂದನ್ನು ತೆರೆದಿದ್ದರು. ಇತ್ತೀಚೆಗೆ ಮೈಸೂರಿನಲ್ಲಿ ‘ರಾಯಲ್‌ ಮೈಸೂರು ಸೇಲಿಂಗ್ ಕ್ಲಬ್‌’ ಸ್ಥಾಪನೆ ಮಾಡುವ ಮೂಲಕ ಹಾಯಿದೋಣಿಯ ಸೇವಾ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದರು.

ಅರವಿಂದ ಶರ್ಮ ಮತ್ತು ಮಾಜಿ ಶಾಸಕ ಮಹಿಮ ಪಟೇಲ್‌ ಮೈಕ್ರೊಲೈಟ್‌ ಹೆಲಿಕಾಪ್ಟರ್‌ನಲ್ಲಿ ‘ಭಾರತ ಪರಿಕ್ರಮ’ ನಡೆಸುವ ಉದ್ದೇಶದೊಂದಿಗೆ 1996ರಲ್ಲಿ ಬೆಂಗಳೂರಿನಿಂದ ತಮ್ಮ ‘ಗಗನ ಯಾತ್ರೆ’ ಆರಂಭಿಸಿದ್ದರು. ಆದರೆ, ಅವರಿದ್ದ ಉಭಯ ನಿಯಂತ್ರಣದ ಲಘು ವಿಮಾನ ಎಂಜಿನ್ ದೋಷಕ್ಕೆ ತುತ್ತಾದ ಪರಿಣಾಮ ತುಮಕೂರಿನ ಬಳಿಯ ಕೆಸ್ತೂರಿನ ಗದ್ದೆಯಲ್ಲಿ ತುರ್ತು ಭೂ ಸ್ಪರ್ಶ ಮಾಡಿತ್ತು. ಇಬ್ಬರೂ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದರು.

‘ಗುರುವಾರ (ಫೆ.19) ಸಂಜೆ 4 ಗಂಟೆಗೆ ವಿಲ್ಸನ್‌ ಗಾರ್ಡನ್‌ನಲ್ಲಿರುವ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ’ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಂಪರ್ಕಕ್ಕೆ ಕುಟುಂಬದ ಸದಸ್ಯರ ಫೋನ್‌ ಸಂಖ್ಯೆ: ಪ್ರತಾಪ್‌–9035098733 ಮತ್ತು ನಿತಿನ್ ಕುನ್ನೂಲ್‌ 9035003434.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.