ADVERTISEMENT

ಕೆನಡಾದಲ್ಲಿ ಗುಂಡೇಟಿಗೆ ಕನ್ನಡಿಗ ಬಲಿ: ಒಬ್ಬನೇ ಮಗನನ್ನು ಕಳೆದುಕೊಂಡ ತಂದೆ–ತಾಯಿ

ಮಹಾಂತೇಶ್.ಎಂ.ನೆಗಳೂರ
Published 10 ಫೆಬ್ರುವರಿ 2026, 0:30 IST
Last Updated 10 ಫೆಬ್ರುವರಿ 2026, 0:30 IST
<div class="paragraphs"><p>ಚಂದನ್‌</p></div>

ಚಂದನ್‌

   

ನೆಲಮಂಗಲ: ‘ಮದುವೆ ಮಾಡಿಕೊ ಎಂದು ನಾವು ಹೇಳುತ್ತಿದ್ದೆವು. ಕೆಲವೇ ತಿಂಗಳಲ್ಲಿ ಮದುವೆ ಮಾಡುವ ಆಲೋಚನೆಯೂ ಇತ್ತು. ಆದರೆ, ಇಂದು ಅವನ ಸಾವಿನ ಸುದ್ದಿ ಕೇಳಿ ಸಿಡಿಲು ಬಡಿದಂತಾಗಿದೆ....’

ಕೆನಡಾದಲ್ಲಿ ಗುಂಡಿನ ದಾಳಿಗೆ ಬಲಿಯಾದ ಚಂದನ್‌ ಅವರ ತಂದೆ ನಂದನ್‌ಕುಮಾರ್‌ ಅವರು ಮಾತುಗಳಿವು. ಚಂದನ್‌ ಅವರ ತಂದೆ–ತಾಯಿ ತ್ಯಾಮಗೊಂಡ್ಲುವಿನಲ್ಲಿ ವಾಸವಿದ್ದಾರೆ.

ADVERTISEMENT

ಶಾಲಾ ಶಿಕ್ಷಕರಾಗಿ ನಿವೃತ್ತರಾದ ನಂದನ್‌ ಕುಮಾರ್‌ ದಂಪತಿಯ ಒಬ್ಬನೇ ಮಗ ಚಂದನ್‌. ಆತ ದೂರದ ದೇಶದಲ್ಲಿ ಹತ್ಯೆಗೀಡಾಗಿದ್ದಾನೆ ಎಂದು ತಿಳಿದು ತಂದೆ–ತಾಯಿ ಕಂಗಾಲಾಗಿದ್ದಾರೆ. ತಾಯಿ ಏನೂ ಮಾತನಾಡದೆ, ಕಣ್ಣೀರಾಗಿದ್ದಾರೆ. ಮನೆಯಲ್ಲಿ ದುಃಖ ಮಡುಗಟ್ಟಿದೆ.

‘ಭಾನುವಾರ ರಾತ್ರಿ ಕೆನಡಾ ಪೊಲೀಸರು ಕರೆ ಮಾಡಿ ಇಂಗ್ಲಿಷ್‌ನಲ್ಲಿ ಮಾತನಾಡಿದ್ದಾರೆ. ನನಗೆ ಅದು ಅರ್ಥವಾಗದಿದ್ದನ್ನು ತಿಳಿದ ಅವರು, ಕನ್ನಡ ಬರುವ ಸ್ಥಳೀಯರ ಮೂಲಕ ಮಗನ ಸಾವಿನ ವಿಷಯ ತಿಳಿಸಿದರು. ವಿಷಯ ತಿಳಿದು ನಮಗೆ ದಿಕ್ಕೇ ತೋಚದಂತಾಯಿತು’ ಎಂದು ನಂದನ್‌ಕುಮಾರ್ ಹೇಳಿದರು.

‘ಆರು ವರ್ಷಗಳಿಂದ ಎಲ್‌ ಆ್ಯಂಡ್‌ ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಚಂದನ್‌ಗೆ ಮದುವೆ ಮಾಡಿಕೊ ಎಂದು ಹೇಳುತ್ತಲೇ ಇದ್ದೆವು. ಇತ್ತೀಚೆಗೆ ಅದಕ್ಕೆ ಒಪ್ಪಿಕೊಂಡಿದ್ದ. ಕೆಲವೇ ತಿಂಗಳಲ್ಲಿ ಮದುವೆ ಮಾಡಲು ಯೋಚಿಸುತ್ತಿದ್ದೆವು. ಆದರೆ, ಈಗ ಅವನ ಸಾವಿನ ಸುದ್ದಿ ಕೇಳಿ ನಮಗೆ ಸಿಡಿಲು ಬಡಿದಂತಾಗಿದೆ. ಆರು ತಿಂಗಳ ಹಿಂದೆ ಬಂದಿದ್ದ. ಏಪ್ರಿಲ್‌ನಲ್ಲಿ ಮತ್ತೆ ಬರುತ್ತೇನೆ ಎಂದು ತಿಳಿಸಿದ್ದ. ಅಲ್ಲಿ ಕೆಲಸ ಬಿಟ್ಟು ಇಲ್ಲಿಗೇ ಬಂದುಬಿಡು ಎಂದು ಹಲವು ಬಾರಿ ಹೇಳಿದ್ದೆ’ ಎಂದು ನೆನಪಿಸಿಕೊಂಡರು.

‘ಮೃತದೇಹವನ್ನು ಶೀಘ್ರ ಕಳುಹಿಸಿಕೊಡುವ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು ಎಂದು ಪ್ರಧಾನಿ ಮೋದಿ ಅವರನ್ನು ಕೇಳಿಕೊಳ್ಳುತ್ತೇನೆ. ನಮ್ಮ ಭೂಮಿಯಲ್ಲೇ ಅವನ ಅಂತ್ಯ ಸಂಸ್ಕಾರ ನಡೆಯಬೇಕು’ ಎಂದರು.

ಮೃತ ಚಂದನ್‌ ತಂದೆ ನಂದಕುಮಾರ್‌
ಚಂದನ್‌ ಮನೆಯಲ್ಲಿ ಸಂಬಂಧಿಗಳು

ಮೃತ ಚಂದನ್‌ ಅವರ ಮನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.