ADVERTISEMENT

ಇಂದಿರಾ ಕ್ಯಾಂಟೀನ್‌ ಗ್ರಾಹಕರ ಸಂಖ್ಯೆ ಗಣನೀಯ ಇಳಿಕೆ

ಲಾಕ್‌ಡೌನ್‌ ವೇಳೆ ಸಂಘ ಸಂಸ್ಥೆಗಳಿಂದ ಉಚಿತ ಆಹಾರ ವಿತರಣೆ ಪರಿಣಾಮ

​ಪ್ರಜಾವಾಣಿ ವಾರ್ತೆ
Published 1 ಮೇ 2020, 22:10 IST
Last Updated 1 ಮೇ 2020, 22:10 IST
   
""

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಆಹಾರ ವಿತರಣೆ ಸ್ಥಗಿತಗೊಳಿಸಿದ ಬಳಿಕ ಗ್ರಾಹಕರ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದೆ.

ಲಾಕ್‌ಡೌನ್‌ ಜಾರಿಗೆ ಮುನ್ನ ಇಂದಿರಾ ಕ್ಯಾಂಟೀನ್‌ಗಳಲ್ಲಿ ನಿತ್ಯ ಸರಾಸರಿ 1.60 ಲಕ್ಷ ಮಂದಿ ಊಟ ಮಾಡುತ್ತಿದ್ದರು. ಈಗ ಈ ಪ್ರಮಾಣ 66 ಸಾವಿರಕ್ಕೆ ಇಳಿದಿದೆ.

ಮಾ.23ರಿಂದ ರಾಜ್ಯದಾದ್ಯಂತ ಲಾಕ್‌ಡೌನ್‌ ಮಾಡಿದಾಗ ಇಂದಿರಾ ಕ್ಯಾಂಟೀನ್‌ಗಳನ್ನೂ ಎರಡು ದಿನ ಮುಚ್ಚಲಾಯಿತು. ನಿರ್ಗತಿಕರು, ವಲಸೆ ಕಾರ್ಮಿಕರಿಗೆ ಆಹಾರ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದರಿಂದ ಸರ್ಕಾರ ಮಾರ್ಚ್‌ 25ರಿಂದ ಏ.04ರವರೆಗೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತವಾಗಿ ಆಹಾರ ವಿತರಿಸಿತು. ಈ ಅವಧಿಯಲ್ಲಿ ಈ ಕ್ಯಾಂಟೀನ್‌ಗಳಲ್ಲಿ ಊಟ ಮಾಡುವವರ ಸಂಖ್ಯೆ ದುಪ್ಪಟ್ಟಾಗಿತ್ತು.

ADVERTISEMENT

ಸರ್ಕಾರ ಏ.5ರಿಂದ ಈ ಕ್ಯಾಂಟೀನ್‌ಗಳಲ್ಲಿ ಉಚಿತ ಆಹಾರ ವಿತರಣೆಯನ್ನು ನಿಲ್ಲಿಸಿತು. ಮತ್ತೆ ಹಣ ಕೊಟ್ಟು ಊಟ ಮಾಡಬೇಕಾಗಿ ಬಂದ ಬಳಿಕ ಗ್ರಾಹಕರ ಸಂಖ್ಯೆಯೂ ಇಳಿಯುತ್ತಾ ಸಾಗಿದೆ.

ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಆಹಾರ ಪೂರೈಕೆ ನಿಲ್ಲಿಸಿದ ಬಳಿಕ ಸರ್ಕಾರೇತರ ಸಂಸ್ಥೆಗಳ ಮೂಲಕ ಉಚಿತ ಆಹಾರ ಪಡೆಯುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆ ಕಂಡಿದೆ. ನಾಲ್ಕು ದಿನಗಳ ಹಿಂದೆ ವಲಸೆ ಕಾರ್ಮಿಕರು ಊರಿಗೆ ಮರಳಲು ಅವಕಾಶ ಕಲ್ಪಿಸಿದ ಬಳಿಕ ಸರ್ಕಾರೇತರ ಸಂಸ್ಥೆಗಳ ಮೂಲಕ ವಿತರಿಸುವ ಆಹಾರದ ಪೊಟ್ಟಣಗಳ ಪ್ರಮಾಣವೂ ಇಳಿಕೆ ಕಂಡಿದೆ.

‘ಲಾಕ್‌ಡೌನ್‌ ಬಳಿಕ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಸಮಾಜಸೇವಕರು ವಲಸೆ ಕಾರ್ಮಿಕರಿಗೆ, ನಿರಾಶ್ರಿತರಿಗೆ, ಬಡವರಿಗೆ, ಕೊಳೆಗೇರಿ ನಿವಾಸಿಗಳಿಗೆ ಉಚಿತವಾಗಿ ಊಟ ವಿತರಿಸುತ್ತಿದ್ದಾರೆ. ವಿಪ್ರೊ ಸಂಸ್ಥೆಯೊಂದೇ ನಿತ್ಯ 1.5 ಲಕ್ಷಕ್ಕೂ ಅಧಿಕ ಮಂದಿಯ ಹಸಿವು ತಣಿಸುತ್ತಿದೆ. ಊಟಕ್ಕೆ ಇಂದಿರಾ ಕ್ಯಾಂಟೀನನ್ನು ಅವಲಂಬಿಸಿದ್ದ ಬಹುತೇಕರಿಗೆ ಉಚಿತ ಆಹಾರ ಸಿಗುತ್ತಿದೆ. ಹಾಗಾಗಿ ಅವರು ಕ್ಯಾಂಟೀನ್‌ಗಳತ್ತ ಮುಖ ಮಾಡುತ್ತಿಲ್ಲ’ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಆಟೊಚಾಲಕರು, ಕಡಿಮೆ ಸಂಬಳಕ್ಕೆ ಕಂಪನಿಗಳಲ್ಲಿ, ಕಚೇರಿಗಳಲ್ಲಿ, ದುಡಿವವರು, ದಿನಗೂಲಿ ಕಾರ್ಮಿಕರಲ್ಲಿ ಬಹುತೇಕರು ಊಟಕ್ಕೆ ಇಂದಿರಾ ಕ್ಯಾಂಟೀನ್‌ಗಳನ್ನೇ ನೆಚ್ಚಿಕೊಂಡಿದ್ದರು. ಇವರೆಲ್ಲ ಈಗ ಮನೆಯಲ್ಲೇ ಉಳಿಯಬೇಕಾಗಿದೆ. ಬಡವರೇ ಹೆಚ್ಚಾಗಿ ನೆಲೆಸಿರುವ ಪ್ರದೇಶಗಳಿಗೆ, ಬಿಬಿಎಂಪಿ ಹಾಗೂ ಕಾರ್ಮಿಕ ಇಲಾಖೆಯಿಂದ ಇದುವರೆಗೆ ಆಹಾರ ಸಾಮಗ್ರಿಗಳ 1.76 ಲಕ್ಷ ಕಿಟ್‌ ವಿತರಿಸಲಾಗಿದೆ. ಇದಲ್ಲದೇ ಅನೇಕ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಕೂಡಾ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ಉಚಿತವಾಗಿ ಹಂಚುತ್ತಿದ್ದಾರೆ. ಇಂದಿರಾ ಕ್ಯಾಂಟೀನ್‌ಗಳ ಗ್ರಾಹಕರ ಸಂಖ್ಯೆ ಕುಸಿಯುವುದಕ್ಕೆ ಇದು ಕೂಡಾ ಕಾರಣ’ ಎಂದು ಅವರು ವಿವರಿಸಿದರು.

‘ನಮ್ಮ ಕ್ಯಾಂಟೀನಲ್ಲಿ ಬೆಳಿಗ್ಗೆ ಹೊತ್ತು 150ರಿಂದ 200 ಮಂದಿ ಊಟ ಮಾಡುತ್ತಿದ್ದರು. ಉಚಿತವಾಗಿ ಆಹರ ವಿತರಿಸಲು ಶುರು ಮಾಡಿದ ಬಳಿಕ 400ರಿಂದ 450 ಮಂದಿ ಊಟ ಮಾಡಲು ಬರುತ್ತಿದ್ದರು. ಈಗ 100 ಮಂದಿ ಬಂದರೆ ಹೆಚ್ಚು’ ಎಂದು ಮರಿಯಪ್ಪನ ಪಾಳ್ಯದ ಮೆಟ್ರೊ ನಿಲ್ದಾಣದ ಬಳಿಯ ಇಂದಿರಾ ಕ್ಯಾಂಟೀನ್‌ ಸಿಬ್ಬಂದಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.