ADVERTISEMENT

‘ಕೈ’ಯೊಳಗಿನ ಗೊಂದಲಗಳಿಗೆ ತೆರೆ?

ಸೆ. 1,2ಕ್ಕೆ ಕಾಂಗ್ರೆಸ್‌ ನಾಯಕರ ಸಭೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2018, 19:30 IST
Last Updated 28 ಆಗಸ್ಟ್ 2018, 19:30 IST
   

ಬೆಂಗಳೂರು: ‘ಮತ್ತೆ ನಾನೇ ಮುಖ್ಯಮಂತ್ರಿಯಾಗುತ್ತೇನೆ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಯಿಂದ ಸೃಷ್ಟಿಯಾದ ಗೊಂದಲ, ಸಮ್ಮಿಶ್ರ ಸರ್ಕಾರ ಪತನಗೊಂಡು ಯಡಿಯೂರಪ್ಪ ನೇತೃತ್ವದ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ಗುಸುಗುಸು ಬೆನ್ನಲ್ಲೇ, ಸೆ. 1 ಮತ್ತು 2ರಂದು ನಡೆಯಲಿರುವ ಕಾಂಗ್ರೆಸ್‌ ರಾಜ್ಯ ನಾಯಕರ ಸಭೆ ಮಹತ್ವ ಪಡೆದಿದೆ.

ಮುಂಬರುವ ಲೋಕಸಭೆ ಚುನಾವಣೆಯ ಸಿದ್ಧತೆ ಕುರಿತು ಚರ್ಚಿಸಲು ಈ ಸಭೆ ಕರೆಯಲಾಗಿದೆ ಎಂದು ಕೆಪಿಸಿಸಿ ಹೇಳಿಕೊಂಡಿದ್ದರೂ, ಪ್ರಸಕ್ತ ವಿದ್ಯಮಾನಗಳು, ಸಚಿವರ ಕಾರ್ಯವೈಖರಿ, ಸಂಪುಟ ವಿಸ್ತರಣೆ ಸೇರಿದಂತೆ ರಾಜಕೀಯ ವಲಯದಲ್ಲಿ ಸದ್ಯ ಸದ್ದು ಮಾಡುತ್ತಿರುವ ವಿಷಯಗಳ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯುವ ಸಾಧ್ಯತೆ ಇದೆ.

ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ಸಿದ್ದರಾಮಯ್ಯ ಸೆ. 3ರಿಂದ ಯುರೋಪ್‌ ಪ್ರವಾಸಕ್ಕೆ ತೆರಳಲಿದ್ದಾರೆ. ಕೆಲವು ಸಚಿವರು, ಶಾಸಕರು ಕೂಡ ವಿದೇಶ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ. ಈ ಕಾರಣಗಳಿಗೆ ಈ ಸಭೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ADVERTISEMENT

ಲೋಕಸಭೆ ಚುನಾವಣೆ ಗಮನದಲ್ಲಿಟ್ಟು ಜೆಡಿಎಸ್‌ ಜೊತೆ ಕೈ ಜೋಡಿಸಿ ಮೈತ್ರಿ ಸರ್ಕಾರ ರಚಿಸಲು ಪಕ್ಷದ ಹೈಕಮಾಂಡ್ ನಿರ್ಧರಿಸಿತ್ತು. ಸಚಿವಾಕಾಂಕ್ಷಿ ಶಾಸಕರ ಅಸಮಾಧಾನ, ಬಣ ರಾಜಕೀಯದ ಬೇಗುದಿಗೆ ಸರ್ಕಾರ ಬಲಿಯಾಗಲಿದೆ ಎಂಬ ವದಂತಿಗಳು ಮತ್ತಷ್ಟು ರೆಕ್ಕೆಪುಕ್ಕ ಪಡೆದುಕೊಳ್ಳದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ರಾಜ್ಯ ನಾಯಕರ ಜೊತೆ ವೇಣುಗೋಪಾಲ್‌ ಚರ್ಚೆ ನಡೆಸಲಿದ್ದಾರೆ. ಆ ಮೂಲಕ, ರಾಜಕೀಯ ಅನಿಶ್ಚಿತತೆಗೆ ಅಂತ್ಯ ಹಾಡಲಿದ್ದಾರೆ ಎನ್ನಲಾಗಿದೆ.

ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರಕ್ಕೆ ಇದೇ 30ಕ್ಕೆ ನೂರು ದಿನ ತುಂಬಲಿದೆ. ಈ ಮಧ್ಯೆ, ಸಚಿವ ಸ್ಥಾನ ಸಿಗದೆ ಸಮಾಧಾನಗೊಂಡಿರುವ ಹಿರಿಯ ಶಾಸಕರು, ಸಂಪುಟ ಸೇರಲು ಒತ್ತಡ ಹಾಕುತ್ತಿದ್ದಾರೆ. ನಿಗಮ ಮಂಡಳಿಗಳಿಗೆ ನೇಮಕ ಮಾಡುವಂತೆಯೂ ಒತ್ತಡವಿದೆ. ಈ ಬಗ್ಗೆಯೂ ಸಭೆಯಲ್ಲಿ ವಿಷಯ ಪ್ರಸ್ತಾಪವಾಗುವ ಸಾಧ್ಯತೆ ಇದೆ.

ಅಭದ್ರವಲ್ಲ, ಸುಭದ್ರ: ಪರಮೇಶ್ವರ

ಬೆಂಗಳೂರು: ‘ಮೈತ್ರಿ ಸರ್ಕಾರ ಅಭದ್ರವಲ್ಲ; ಸುಭದ್ರವಾಗಿದೆ. ಈ ಬಗ್ಗೆ ಯಾವುದೇ ಆತಂಕ ಬೇಡ’ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಪುನರುಚ್ಚರಿಸಿದ್ದಾರೆ. ಶ್ರಾವಣ ನಂತರ ಸರ್ಕಾರ ಪತನವಾಗಲಿದೆ ಎಂಬ ಯಡಿಯೂರಪ್ಪ ಮಾತುಗಳಿಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ ಅವರು,‘ನೋಡೋಣ... ಶ್ರಾವಣದ ಬಳಿಕ ಭಾದ್ರಪದ, ನಂತರ ಕಾರ್ತಿಕ... ಹೀಗೆ ಬರುತ್ತದೆ’ ಎಂದು ವ್ಯಂಗ್ಯವಾಗಿ ಹೇಳಿದರು.

‘ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಸಚಿವರ ಕಾರ್ಯವೈಖರಿಯ ಮೌಲ್ಯಮಾಪನ ಮಾಡಬೇಕು ಎಂದು ವರಿಷ್ಠರು ಸೂಚಿಸಿದ್ದಾರೆ. ಅದರಂತೆ, ಆಂತರಿಕ ಮೌಲ್ಯಮಾಪನ ನಡೆಯುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.