ADVERTISEMENT

ಒಳ ಮೀಸಲಾತಿ: ನಾಗಮೋಹನ್ ದಾಸ್ ಆಯೋಗಕ್ಕೆ ಹೊಣೆ ನಿಗದಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2024, 17:48 IST
Last Updated 3 ಡಿಸೆಂಬರ್ 2024, 17:48 IST
<div class="paragraphs"><p>ವಿಧಾನ ಸೌಧ</p></div>

ವಿಧಾನ ಸೌಧ

   

(ಸಾಂಕೇತಿಕ ಚಿತ್ರ)

ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ಸೂಕ್ತ ಶಿಫಾರಸುಗಳೊಂದಿಗೆ ವರದಿ ಸಲ್ಲಿಸಲು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ ದಾಸ್‌ ಅಧ್ಯಕ್ಷತೆಯ ಏಕ ಸದಸ್ಯ ಆಯೋಗಕ್ಕೆ ನಿಯಮ ಮತ್ತು ನಿಬಂಧನೆಗಳನ್ನು ನಿಗದಿಪಡಿಸಿ ಸಮಾಜ ಕಲ್ಯಾಣ ಇಲಾಖೆಯು ಆದೇಶಿಸಿದೆ.

ADVERTISEMENT

ಆಯೋಗಕ್ಕೆ ನಿಗದಿ ಮಾಡಿರುವ ಹೊಣೆಗಾರಿಕೆಯನ್ನು ನಿಭಾಯಿಸಲು ಅನುಕೂಲವಾಗುವಂತೆ ಕಚೇರಿ ವ್ಯವಸ್ಥೆ, ವಾಹನ, ಸಿಬ್ಬಂದಿ ಮತ್ತು ಇತರ ವ್ಯವಸ್ಥೆಗಳನ್ನು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಒದಗಿಸಿಕೊಡಲಿದ್ದಾರೆ ಎಂದು ಆದೇಶ ಹೇಳಿದೆ.

ವರದಿ ಸಿದ್ದಪಡಿಸಲು ಅಗತ್ಯವಿರುವ ದಾಖಲೆಗಳನ್ನು ಮತ್ತು ಪುರಾವೆಗಳನ್ನು ವಿಚಾರಣಾ ಆಯೋಗಕ್ಕೆ, ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಸಲ್ಲಿಸಬೇಕು ಮತ್ತು ಅಗತ್ಯ ಸಹಕಾರ ನೀಡಬೇಕು ಎಂದು ಸೂಚಿಸಿದೆ. ಸಮಾಜ ಕಲ್ಯಾಣ ಇಲಾಖ ಆಯುಕ್ತರನ್ನು ಆಯೋಗದ ಸಂಚಾಲಕರಾಗಿ ಮತ್ತು ಇಂದಿರಾಗಾಂಧ ವೃತ್ತಿ ತರಬೇತಿ ಕೇಂದ್ರದ ಹೆಚ್ಚುವರಿ ನಿರ್ದೇಶಕಿ ಅವರನ್ನು ಆಯೋಗದ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ನಿಯಮ ಮತ್ತು ನಿಬಂಧನೆಗಳಲ್ಲಿ ಉಲ್ಲೇಖಿಸಲಾದ ಎಲ್ಲ ಅಂಶಗಳ ಬಗ್ಗೆ ದತ್ತಾಂಶಗಳು ಮತ್ತು ಅಗತ್ಯ ಶಿಫಾರಸುಗಳನ್ನು ನೀಡಬೇಕು. ಆಯೋಗವು ಅಧಿಕಾರ ವಹಿಸಿಕೊಂಡ 60 ದಿನಗಳ ಒಳಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ.

ನಿಯಮ ನಿಬಂಧನೆಗಳು

* ರಾಜ್ಯದಲ್ಲಿ ಲಭ್ಯವಿರುವ ದತ್ತಾಂಶ ಮತ್ತು 2011ರ ಜನಗಣತಿ ಆಧಾರದಲ್ಲಿ, ಪರಿಶಿಷ್ಟ ಜಾತಿಗಳಲ್ಲಿ ವೈಜ್ಞಾನಿಕ ಮತ್ತು ತರ್ಕಬದ್ಧ ಒಳ ಮೀಸಲಾತಿ ನೀಡುವ ಬಗ್ಗೆ ಪರಿಶೀಲನೆ

* ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶಾತಿಯಲ್ಲಿ ಪರಿಶಿಷ್ಟ ಜಾತಿಗಳ ಉಪ ಗುಂಪುಗಳಲ್ಲಿ ‘ಅಂತರ್‌ಹಿಂದುಳಿದಿರುವಿಕೆ’ ಗುರುತಿಸುವುದು ಮತ್ತುಇದಕ್ಕಾಗಿ ದತ್ತಾಂಶ ಸಂಗ್ರಹ

* ಸುಪ್ರೀಂ ಕೋರ್ಟ್‌ನ ಆದೇಶದಂತೆ ಒಳ ಮೀಸಲಾತಿಗಾಗಿ, ಮೀಸಲಾತಿ ಪ್ರಮಾಣ ನಿಗದಿಪಡಿಸುವ ಬಗ್ಗೆ ಪರಿಶೀಲನೆ

* ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಎಂಬ ಹೆಸರುಗಳಷ್ಟೇ ರಾಜ್ಯದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿದೆ. ಜನಸಂಖ್ಯೆಯನ್ನೂ ಹೀಗೇ ವಿಂಗಡಿಸಲಾಗಿದೆ. ಈ ಮೂರೂ ಹೆಸರುಗಳ ಅಡಿ ಇರುವ ಉಪ ಜಾತಿಗಳ ಹೆಸರು ಮತ್ತು ಅವುಗಳ ಜನಸಂಖ್ಯೆಯ ದತ್ತಾಂಶಗಳ ಸಂಗ್ರಹ

* ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಯ ಪರಿಣಾಮಕಾರಿ ಅನುಷ್ಠಾನ ವಿಧಾನದ ಪರಿಶೀಲನೆ

* ಪರಿಶಿಷ್ಟ ಜಾತಿಗಳ ವಿವಿಧ ಉಪ ಗುಂಪುಗಳು ಮೀಸಲಾತಿಯ ಪ್ರಯೋಜನವನ್ನು ಸಮಾನವಾಗಿ ಪಡೆಯುತ್ತಿವೆಯೇ ಎಂಬುದರ ಪರಿಶೀಲನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.