
ಸಾಂದರ್ಭಿಕ ಚಿತ್ರ
ಬೆಂಗಳೂರು: ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳನ್ನು ಪ್ರವರ್ಗ ಎ, ಪ್ರವರ್ಗ ಬಿ, ಪ್ರವರ್ಗ ಸಿ ಎಂದು ವರ್ಗೀಕರಿಸಿ, ಒಳ ಮೀಸಲಾತಿ ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದರೂ ಅದಕ್ಕೆ ಪೂರಕವಾಗಿ ಜಾತಿ ಪ್ರಮಾಣಪತ್ರ ವಿತರಿಸಲು ಅಗತ್ಯವಾದ ‘ತಂತ್ರಾಂಶ’ವನ್ನು ರಾಜ್ಯ ಸರ್ಕಾರ ಇನ್ನೂ ಅಭಿವೃದ್ಧಿಪಡಿಸಿಲ್ಲ. ಹೀಗಾಗಿ, ಸರ್ಕಾರಿ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಾಧಿಕಾರಗಳು ಅಧಿಸೂಚನೆ ಹೊರಡಿಸಲು ತೊಡಕಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಇದೇ 6ರಿಂದ ವೈದ್ಯಕೀಯ ಸ್ನಾತಕೋತ್ತರ (ಎಂಡಿ) ಕೋರ್ಸ್‌ಗಳ ಸೀಟು ಹಂಚಿಕೆಗೆ ಕೌನ್ಸೆಲಿಂಗ್ ಆರಂಭಿಸಲಿದೆ. ಪ್ರವರ್ಗವಾರು ಜಾತಿ ಪ್ರಮಾಣಪತ್ರ ವಿತರಣೆ ಆರಂಭವಾಗದೇ ಇದ್ದರೆ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಎಂಡಿ ಸೀಟು ಹಂಚಿಕೆಗೆ ಸಮಸ್ಯೆ ಆಗಲಿದೆ.
ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು, ಜಾತಿ ಪಟ್ಟಿಯಲ್ಲಿರುವ 101 ಜಾತಿಗಳ ಪೈಕಿ 98 ಜಾತಿಗಳನ್ನು ಪ್ರವರ್ಗ ಎ (16 ಜಾತಿಗಳು), ಪ್ರವರ್ಗ ಬಿ (19 ಜಾತಿಗಳು), ಪ್ರವರ್ಗ ಸಿ (63 ಜಾತಿಗಳು) ಎಂದು ವರ್ಗೀಕರಿಸಿ ಆಗಸ್ಟ್ 25ರಂದೇ ಸರ್ಕಾರ ಆದೇಶ ಹೊರಡಿಸಿದೆ. ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ ಸಮುದಾಯದವರು ತಮ್ಮ ಮೂಲ ಜಾತಿ ನಮೂದಿಸಿ ‘ಪ್ರವರ್ಗ ಎ’ ಅಥವಾ ‘ಪ್ರವರ್ಗ ಬಿ’ ಅಡಿ ಮೀಸಲಾತಿ ಸೌಲಭ್ಯ ಪಡೆಯಬಹುದು. ಮೂಲ ಜಾತಿ ನಮೂದಿಸದವರು ಪ್ರಮಾಣಪತ್ರ ಸಲ್ಲಿಸಿ ‘ಪ್ರವರ್ಗ ಎ’ ಅಥವಾ ‘ಪ್ರವರ್ಗ ಬಿ’ ಅಡಿ ಜಾತಿ ಪ್ರಮಾಣಪತ್ರ ಪಡೆಯಬಹುದು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.
ಈ ಆದೇಶಕ್ಕೆ ಪೂರಕವಾಗಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಳ ಮೀಸಲಾತಿ ಅನ್ವಯಿಸಲು, ಜಾತಿ ಪ್ರಮಾಣಪತ್ರ ನೀಡಲು ಕ್ರಮ ವಹಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿ ಸಮಾಜ ಕಲ್ಯಾಣ ಇಲಾಖೆ ಅ.8ರಂದು ಸುತ್ತೋಲೆ ಹೊರಡಿಸಿದೆ. ಒಳ ಮೀಸಲು ಸೌಲಭ್ಯ ಪಡೆಯಲು ಪರಿಶಿಷ್ಟ ಜಾತಿಯವರು ಸಂಬಂಧಪಟ್ಟ ಪ್ರವರ್ಗ ನಮೂದಿಸಿ ಹೊಸತಾಗಿ ಜಾತಿ ಪ್ರಮಾಣಪತ್ರ ಪಡೆಯಬೇಕು. ಜಾತಿಗಳನ್ನು ಪ್ರವರ್ಗ ಎ, ಬಿ, ಸಿ ಎಂದು ವರ್ಗೀಕರಿಸಿರುವಂತೆ, ಆಯಾ ಜಾತಿಗಳಿಗೆ ಸಂಬಂಧಿಸಿದ ಪ್ರವರ್ಗವನ್ನು ಅಟಲ್‌ಜೀ ಜನಸ್ನೇಹಿ ಕೇಂದ್ರದ ತಂತ್ರಾಂಶದಲ್ಲಿ ಅಳವಡಿಸಬೇಕಿದೆ. ಆದರೆ, ಈ ಆದೇಶ ಹೊರಡಿಸಿ ಒಂದು ತಿಂಗಳಾಗುತ್ತಾ ಬಂದರೂ ತಂತ್ರಾಂಶದಲ್ಲಿ ಅಳವಡಿಸುವ ಕೆಲಸ ಆಗಿಲ್ಲ. ಹೀಗಾಗಿ ಪ್ರವರ್ಗವಾರು ಜಾತಿ ಪ್ರಮಾಣಪತ್ರ ನೀಡುವ ಪ್ರಕ್ರಿಯೆ ಆರಂಭ ಆಗಿಲ್ಲ.
ಎಕೆ, ಎಡಿ, ಎಎ ಗೊಂದಲ: ಒಳ ಮೀಸಲಾತಿ ಕಲ್ಪಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ನೇತೃತ್ವದ ಆಯೋಗ ನಡೆಸಿದ ಸಮೀಕ್ಷೆಯ ಸಂದರ್ಭದಲ್ಲಿ ಮೂಲ ಜಾತಿಯನ್ನು ತಿಳಿಸದೆ ಆದಿ ಕರ್ನಾಟಕ (ಎಕೆ), ಆದಿ ದ್ರಾವಿಡ (ಎಡಿ), ಆದಿ ಆಂಧ್ರ (ಎಎ) ಎಂದು ನಮೂದಿಸಿರುವ ಈ ಮೂರು ಸಮುದಾಯಗಳು ಪ್ರವರ್ಗ ಎ ಅಥವಾ ಪ್ರವರ್ಗ ಬಿ ಅಡಿ ಮೀಸಲಾತಿ ಪಡೆಯಬಹುದು ಎಂದು ಸರ್ಕಾರ ಹೇಳಿದೆ. ಆಯೋಗ ನಡೆಸಿದ ಸಮೀಕ್ಷೆಯಲ್ಲಿ ಎಕೆ (1,47,199), ಎಡಿ (3,20,641), ಎಎ (7,114) ಎಂದು ಒಟ್ಟು 4,74,954 ಕುಟುಂಬಗಳು ಬರೆಸಿವೆ. ಮೂಲ ಜಾತಿ ತಿಳಿಸದ ಈ ಸಮುದಾಯವರು ಪ್ರವರ್ಗ ಎ ಅಥವಾ ಪ್ರವರ್ಗ ಬಿ ಆಯ್ಕೆ ಮಾಡಿ ಪ್ರಮಾಣಪತ್ರದ ಜೊತೆ ಜಾತಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ. ಆದರೆ, ಮೂಲ ಜಾತಿ ತಿಳಿಸದವರಿಗೆ ಅವರು ಸಲ್ಲಿಸುವ ಪ್ರಮಾಣಪತ್ರದಲ್ಲಿ ಘೋಷಿಸಿರುವ ಪ್ರವರ್ಗವನ್ನು ನಮೂದಿಸಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವ ವಿಚಾರವು ಗೊಂದಲಕ್ಕೆ ಕಾರಣವಾಗಿದೆ.
ಪ್ರವರ್ಗವಾರು ಜಾತಿ ಪ್ರಮಾಣಪತ್ರ ವಿತರಣೆ ವಿಳಂಬಕ್ಕೆ ಸಂಬಂಧಿಸಿದಂತೆ ವಿವರಣೆ ಪಡೆಯಲು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ರಾಕೇಶ್ ಕುಮಾರ್ ಅವರಿಗೆ ಕರೆ ಮಾಡಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.
ಪರಿಶಿಷ್ಟ ಜಾತಿಯಲ್ಲಿ ಪ್ರವರ್ಗವಾರು ಜಾತಿ ಪ್ರಮಾಣಪತ್ರ ವಿತರಿಸಲು ಅಗತ್ಯವಾದ ತಂತ್ರಾಂಶ ಇನ್ನೂ ಸಿದ್ಧವಾಗಿಲ್ಲ. ಈ ವಿಷಯವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದೇನೆಎಚ್. ಆಂಜನೇಯ ಮಾಜಿ ಸಚಿವ
ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ಸೀಟು ಹಂಚಿಕೆಗೆ ಇದೇ 6ರಿಂದ ಕೌನ್ಸೆಲಿಂಗ್ ಆರಂಭವಾಗಲಿದೆ. ಪ್ರವರ್ಗವಾರು ಜಾತಿ ಪ್ರಮಾಣಪತ್ರ ಸಲ್ಲಿಸದಿದ್ದರೆ ಎಸ್‌ಸಿ ಸೀಟು ಹಂಚಿಕೆ ಸಾಧ್ಯ ಇಲ್ಲಎಚ್. ಪ್ರಸನ್ನ ಕಾರ್ಯನಿರ್ವಾಹಕ ನಿರ್ದೇಶಕ ಕೆಇಎ
ಎಂ.ಡಿ ಸೀಟು ಹಂಚಿಕೆ ಕಗ್ಗಂಟು
ಸಂವಿಧಾನದ ಪರಿಚ್ಛೇದ 15 ಮತ್ತು 16ರ ಅನ್ವಯ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗದ ನಿರ್ದೇಶನದಂತೆ ವೈದ್ಯಕೀಯ ಸ್ನಾತಕೋತ್ತರ (ಎಂ.ಡಿ) ಸೀಟುಗಳ ಹಂಚಿಕೆಗೆ ಇದೇ 6ರಿಂದ ಕೌನ್ಸೆಲಿಂಗ್ ಆರಂಭಿಸಬೇಕಿದೆ. ರಾಜ್ಯದಲ್ಲಿ 2400 ಎಂ.ಡಿ ಸೀಟುಗಳಿವೆ. ಈ ಪೈಕಿ ಶೇ 17ರಷ್ಟು ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾಗಿದೆ. ಅವುಗಳನ್ನು ಪ್ರವರ್ಗವಾರು ವರ್ಗೀಕರಿಸಿ ಹಂಚಿಕೆ ಮಾಡಬೇಕಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಪ್ರವರ್ಗ ಎ ಪ್ರವರ್ಗ ಬಿ ಪ್ರವರ್ಗ ಸಿ ಎಂದು ವರ್ಗೀಕರಿಸಿ ಸೀಟ್ ಮ್ಯಾಟ್ರಿಕ್ಸ್ ನೀಡಿದರೂ ಪ್ರವರ್ಗವಾರು ಜಾತಿ ಪ್ರಮಾಣಪತ್ರವನ್ನು (ಆರ್‌ಡಿ ಸಂಖ್ಯೆ ಸಹಿತ) ಅಭ್ಯರ್ಥಿಗಳು ಸಲ್ಲಿಸದೇ ಇದ್ದರೆ ಸೀಟು ಹಂಚಿಕೆ ಮಾಡಲು ಸಾಧ್ಯ ಇಲ್ಲ. ವೈದ್ಯಕೀಯ ಶಿಕ್ಷಣ ಇಲಾಖೆ ನೀಡಿದ ಸೀಟ್ ಮ್ಯಾಟ್ರಿಕ್ಸ್‌ಗೆ ಅನುಗುಣವಾಗಿ ಕೌನ್ಸೆಲಿಂಗ್ ನಡೆಸಬಹುದು. ಆದರೆ ದಾಖಲೆಗಳ ಪರಿಶೀಲನೆಗೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಪ್ರವರ್ಗವಾರು ಜಾತಿ ಪ್ರಮಾಣಪತ್ರವನ್ನು ನೀಡಲೇಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದರು.
ಇಲಾಖೆಗಳ ನಡುವೆ ಸಮನ್ವಯ ಕೊರತೆ
‘ಒಳ ಮೀಸಲಾತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಮತ್ತು ಕಂದಾಯ ಇಲಾಖೆಯ ನಡುವೆ ಸಮನ್ವಯ ಇಲ್ಲದೇ ಇರುವುದರಿಂದ ಪ್ರವರ್ಗವಾರು ಜಾತಿ ಪ್ರಮಾಣಪತ್ರ ವಿತರಣೆ ವಿಳಂಬವಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ‘ಸಚಿವ ಸಂಪುಟದ ನಿರ್ಣಯದಂತೆ ಒಳ ಮೀಸಲಾತಿ ಜಾರಿಗೊಳಿಸಿ ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ. ‘ಪರಿಷ್ಕೃತ ಮೀಸಲಾತಿ ರೋಸ್ಟರ್’ ಅನ್ನು ಈಗಾಗಲೇ ಪ್ರಕಟಿಸಿರುವ ಡಿಪಿಎಆರ್ ವಿವಿಧ ಇಲಾಖೆಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ನೇಮಕಾತಿ ಪ್ರಾಧಿಕಾರಗಳಿಗೆ ಸೂಚನೆ ನೀಡಿದೆ. ಆಯಾ ಜಾತಿಗಳಿಗೆ ಸಂಬಂಧಿಸಿದ ಪ್ರವರ್ಗವನ್ನು ಅಟಲ್‌ಜೀ ಜನಸ್ನೇಹಿ ಕೇಂದ್ರದ ತಂತ್ರಾಂಶದಲ್ಲಿ ಅಳವಡಿಸಿಕೊಂಡು ಜಾತಿ ಪ್ರಮಾಣಪತ್ರದಲ್ಲಿ ನಮೂದಿಸಲು ಕ್ರಮ ತೆಗೆದುಕೊಳ್ಳುವಂತೆ ಕಂದಾಯ ಇಲಾಖೆಗೆ ಸಮಾಜ ಕಲ್ಯಾಣ ಇಲಾಖೆ ಸೂಚಿಸಿದೆ. ಆದರೆ ಕಂದಾಯ ಇಲಾಖೆಯ ಮೂಲಕ ತಂತ್ರಾಂಶ ಅಭಿವೃದ್ಧಿ ಆಗಿಲ್ಲ’ ಎಂದೂ ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.