ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ ಕುರಿತು ಶಿಫಾರಸು ಮಾಡಲು ರಾಜ್ಯ ಸರ್ಕಾರ ರಚಿಸಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ನೇತೃತ್ವದ ಏಕಸದಸ್ಯ ಆಯೋಗವು ಶಿಫಾರಸುಗಳನ್ನು ಒಳಗೊಂಡ ತನ್ನ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ಸಲ್ಲಿಸಿದೆ.
ರಾಜ್ಯದಾದ್ಯಂತ ಮೇ 5 ರಿಂದ ಜುಲೈ 6 ರವರೆಗೆ ನಡೆದ ಸಮೀಕ್ಷೆಯಲ್ಲಿ ಸಂಗ್ರಹಿಸಿದ ಮತ್ತು ಸರ್ಕಾರದ ವಿವಿಧ ಇಲಾಖೆ, ನಿಗಮ– ಮಂಡಳಿಗಳಿಂದ ಸಂಗ್ರಹಿಸಿದ ದತ್ತಾಂಶವನ್ನು ವಿಶ್ಲೇಷಿಸಿ, ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದಂತೆ ಪರಿಶಿಷ್ಟ ಜಾತಿ ಒಳ ಜಾತಿಗಳನ್ನು ವರ್ಗೀಕರಿಸಿ ಲಭ್ಯವಿರುವ ಮೀಸಲಾತಿಯನ್ನು ಆಯೋಗ ಹಂಚಿದೆ.
ವರದಿ, ಸಮೀಕ್ಷೆಯ ದತ್ತಾಂಶ ಮತ್ತು ಅನುಬಂಧಗಳು ಒಟ್ಟು ಸೇರಿ ಸುಮಾರು 1,765 ಪುಟಗಳು ಮತ್ತು ಆರು ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ನೀಡಿದೆ.
ವರದಿ ಸಲ್ಲಿಸಿದ ಸಂದರ್ಭದಲ್ಲಿ ಸಚಿವರಾದ ಜಿ. ಪರಮೇಶ್ವರ್, ಎಚ್.ಸಿ. ಮಹದೇವಪ್ಪ, ಕೆ.ಎಚ್. ಮುನಿಯಪ್ಪ, ಶಿವರಾಜ ತಂಗಡಗಿ, ಆರ್.ಬಿ. ತಿಮ್ಮಾಪುರ್, ಪ್ರಿಯಾಂಕ್ ಖರ್ಗೆ ಮುಂತಾದವರು ಇದ್ದರು.
ವರದಿ ಸಲ್ಲಿಸಿದ ಬಳಿಕ ಮಾತನಾಡಿದ ನಾಗಮೋಹನ್ ದಾಸ್, ‘ಒಳಮೀಸಲಾತಿಗೆ ಮತ್ತಷ್ಟು ದತ್ತಾಂಶ ಬೇಕಿತ್ತು. ಹೀಗಾಗಿ, ರಾಜ್ಯ ಸರ್ಕಾರ ಹೊಸ ಸಮೀಕ್ಷೆಗೆ ಅವಕಾಶ ನೀಡಿತ್ತು. 60 ದಿನಗಳಲ್ಲಿ ಸಮೀಕ್ಷೆ ಮಾಡಿದ್ದೇವೆ. ಒಟ್ಟು 27 ಲಕ್ಷ ಕುಟುಂಬಗಳು ಸಮೀಕ್ಷೆಯಲ್ಲಿ ಭಾಗವಹಿಸಿವೆ. ಇದನ್ನು ಪರೀಶಿಲನೆ ಮಾಡಿ ವರದಿಯ ದತ್ತಾಂಶವನ್ನು ನೀಡಿದ್ದೇವೆ’ ಎಂದರು.
‘ಈ ವರದಿ ಸರ್ಕಾರದ ಆಸ್ತಿ. ಅದರಲ್ಲಿ ಏನಿದೆ? ಒಪ್ಪುವುದು, ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಷಯ’ ಎಂದೂ ಹೇಳಿದರು.
ಮುಖ್ಯಮಂತ್ರಿ ಮಾತನಾಡಿ, ‘ಆಯೋಗವು ಒಳ ಮೀಸಲಾತಿ ಕುರಿತ ವರದಿ ನೀಡಿದೆ. ಅದರಲ್ಲಿ ಏನಿದೆ ಎಂದು ಇನ್ನೂ ನೋಡಿಲ್ಲ. ಇದೇ 7ರಂದು ಸಚಿವ ಸಂಪುಟ ಸಭೆಯಿದೆ. ಅದರಲ್ಲಿ ವರದಿಯನ್ನು ಮಂಡಿಸಿ ಚರ್ಚೆ ಮಾಡುತ್ತೇವೆ’ ಎಂದರು.
ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಾನದಂಡ ಅನ್ವಯ ಮೀಸಲಾತಿ ಹಂಚಿಕೆ:
ಒಳ ಮೀಸಲಾತಿ ವರ್ಗೀಕರಣಕ್ಕೆ ಜಾತಿಗಳ ಶೈಕ್ಷಣಿಕ ಹಿಂದುಳಿದಿರುವಿಕೆ, ಸರ್ಕಾರಿ ಉದ್ಯೋಗದಲ್ಲಿ ಅಗತ್ಯ ಪ್ರಾತಿನಿಧ್ಯದ ಕೊರತೆ, ಸಾಮಾಜಿಕ ಹಿಂದುಳಿದಿರುವಿಕೆಯ ಮಾನದಂಡಗಳನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆ ಮಾನದಂಡಗಳ ಆಧಾರದಲ್ಲಿಯೇ ಮೀಸಲಾತಿಯನ್ನು ಹಂಚಿಕೆ ಮಾಡಲಾಗಿದೆ ಎಂದು ಆಯೋಗ ವಿವರಿಸಿದೆ.
ಒಳಮೀಸಲಾತಿ ಆಗ್ರಹಿಸಿ ನ್ಯಾಯಾಲಯಗಳ ಒಳಗೆ ಮತ್ತು ಹೊರಗೆ ದಲಿತ ಸಂಘಟನೆಗಳು ಕಳೆದ 30 ವರ್ಷಗಳಿಂದ ಹೋರಾಟ ನಡೆಸುತ್ತಲೇ ಬಂದಿವೆ. 2024ರ ಆಗಸ್ಟ್ 1ರಂದು ದವಿಂದರ್‌ಸಿಂಗ್ ಪ್ರಕರಣದಲ್ಲಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ‘ಉಪವರ್ಗೀಕರಣ ಮಾಡಲು ಸಂವಿಧಾನದ ಅನುಚ್ಛೇದ 14ರಲ್ಲಿ ಅವಕಾಶವಿದೆ. ಉಪವರ್ಗೀಕರಣ ಸಾಮಾಜಿಕ ನ್ಯಾಯದ ವಿಸ್ತರಣೆಯಾಗಿದೆ. ರಾಜ್ಯ ಸರ್ಕಾರಕ್ಕೆ ಒಳಮೀಸಲಾತಿ ನೀಡುವ ಅಧಿಕಾರವಿದೆ. ಉಪವರ್ಗೀಕರಣ ಮಾಡಿದರೆ ಮೀಸಲಾತಿ ಅನುಭವಿಸುತ್ತಿರುವ ಯಾರನ್ನೂ ಹೊರಗಿಡುವುದಿಲ್ಲ. ಅಗತ್ಯ ದತ್ತಾಂಶ ಸಂಗ್ರಹಿಸಿ ಒಳಜಾತಿಗಳ ವರ್ಗೀಕರಣ ಮಾಡಬೇಕು’ ಎಂದು ಹೇಳಿದೆ.
ಈ ಕಾರಣಕ್ಕೆ ರಾಜ್ಯ ಸರ್ಕಾರ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕ ಸದಸ್ಯ ಆಯೋಗವನ್ನು ಸರ್ಕಾರ ರಚಿಸಿತ್ತು. ರಾಜ್ಯದಲ್ಲಿ ನಿಖರವಾದ ದತ್ತಾಂಶ ಇಲ್ಲದ ಕಾರಣ ಹೊಸತಾಗಿ ಸಮೀಕ್ಷೆ ನಡೆಸಬೇಕೆಂದು 2025ರ ಮಾರ್ಚ್ 27ರಂದು ಆಯೋಗವು ಮಧ್ಯಂತರ ವರದಿ ಸಲ್ಲಿಸಿತ್ತು. ಅದೇ ದಿನ ನಡೆದ ಸಚಿವ ಸಂಪುಟ ಅಭೆಯಲ್ಲಿ ಮಧ್ಯಂತರ ವರದಿಯನ್ನು ಒಪ್ಪಿ, ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಲು ನಿರ್ಣಯ ಕೈಗೊಂಡಿತ್ತು.
ಆಯೋಗದ ಅಧ್ಯಕ್ಷರಾಗದ ಎಚ್.ಎನ್. ನಾಗಮೋಹನ್‌ದಾಸ್ ಅವರು ಯಾವುದೇ ಸಂಭಾವನೆ ಅಥವಾ ಗೌರವಧನ ಪಡೆಯಲಿಲ್ಲ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.