ADVERTISEMENT

International Labour Day 2025: ಸಿಎಂ, ಡಿಸಿಎಂ ಸೇರಿ ಗಣ್ಯರಿಂದ ಶುಭಾಶಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಮೇ 2025, 5:37 IST
Last Updated 1 ಮೇ 2025, 5:37 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಗಣ್ಯರು ಶುಭಾಶಯಗಳನ್ನು ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ನಾಡಿನ ಸಮಸ್ತ ಶ್ರಮಜೀವಿಗಳಿಗೆ ಕಾರ್ಮಿಕ ದಿನದ ಶುಭಾಶಯಗಳು. ನಮ್ಮ ಸರ್ಕಾರ ನಿಮ್ಮೊಂದಿಗೆ ಸದಾ ಇರಲಿದೆ ಎಂದು ಭರವಸೆ ನೀಡಿದ್ದಾರೆ.

ADVERTISEMENT

ದೇಶವೊಂದರ ಅಭಿವೃದ್ಧಿಯ ವೇಗವನ್ನು ನಿರ್ಧರಿಸುವುದು ದುಡಿಯುವ ಕೈಗಳ ಕ್ಷಮತೆ ಮತ್ತು ದಕ್ಷತೆ. ಹಗಲಿರುಳೆನ್ನದೆ ರಾಷ್ಟ್ರನಿರ್ಮಾಣದಲ್ಲಿ ಅರ್ಪಿಸಿಕೊಂಡಿರುವ ಕಾರ್ಮಿಕರ ಘನತೆಯ ಬದುಕು ಮತ್ತು ಕೆಲಸಕ್ಕೆ ತಕ್ಕ ಕೂಲಿಯ ಕೂಗಿಗೆ ನಾವು ದನಿಗೂಡಿಸೋಣ ಎಂದು ಹೇಳಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರ್ಮಿಕರ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.

ನಾವು ಪ್ರತಿದಿನ ಕ್ರಮಿಸುವ ರಸ್ತೆಗಳು, ಪ್ರವೇಶಿಸುವ ಕಟ್ಟಡಗಳು, ಉಣ್ಣುವ ಅನ್ನದ ಹಿಂದೆ ಕಾರ್ಮಿಕರ ಬೆವರಿನ ಹನಿ ಇದೆ. ಕಾರ್ಮಿಕರು ದೇಶದ ಪ್ರಗತಿಯ ಬೆನ್ನೆಲುಬು. ಕಠಿಣ ಪರಿಶ್ರಮ, ಘನತೆಯ ದುಡಿಮೆಯ ಮೂಲಕ ಅವರು ಹಾಕುವ ಪ್ರತಿಯೊಂದು ಅಡಿಪಾಯವೂ ನಮ್ಮ ಸುಂದರ ನಾಳೆಗಳನ್ನು ನಿರ್ಮಿಸುತ್ತದೆ. ನಮ್ಮ ಸರ್ಕಾರ ಸದಾ ಕಾರ್ಮಿಕರ ಪರವಾಗಿದ್ದು, ಅವರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ದುಡಿಮೆಯನ್ನೇ ದೇವರೆಂದು ಕಾಯಕ ತತ್ವವನ್ನು ಪಾಲಿಸುತ್ತಿರುವ ಎಲ್ಲಾ ಶ್ರಮಿಕ ಬಂಧುಗಳಿಗೂ ವಿಶ್ವ ಕಾರ್ಮಿಕರ ದಿನದ ಶುಭಾಶಯಗಳು ಎಂದು ಹೇಳಿದ್ದಾರೆ.

ಕಾರ್ಮಿಕ ದಿನಾಚರಣೆಯ ಶುಭಸಂದರ್ಭದಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 12,692 ಪೌರಕಾರ್ಮಿಕರ ಕೆಲಸವನ್ನು ಖಾಯಂಮಾತಿಗೊಳಿಸಿ, ಅವರಿಗೆ ಸೇವಾ ಖಾಯಂ ಪತ್ರ ವಿತರಿಸುವ ಮಹತ್ವಪೂರ್ಣವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ನಮ್ಮ ಸರ್ಕಾರ ಶ್ರಮಿಕರ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು, ಈ ಮೂಲಕ ನಗರವನ್ನು ಸ್ವಚ್ಛವಾಗಿಡುವ ಕೈಗಳಿಗೆ ಇನ್ನಷ್ಟು ಶಕ್ತಿಯನ್ನು ತುಂಬುತ್ತಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಾರ್ಮಿಕರ ದಿನದ ಸಂದೇಶದಲ್ಲಿ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಅವಿರತ ಕೊಡುಗೆ ನೀಡುತ್ತಿರುವ ಪ್ರತಿಯೊಬ್ಬ ಕಾರ್ಮಿಕರು ನಮಗೆ ಪ್ರಾತಃಸ್ಮರಣೀಯರೇ. ಅವರ ಶ್ರೇಯೋಭಿವೃದ್ಧಿಯೇ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕಾರ್ಮಿಕರ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.

ಸಮಸ್ತ ಕಾರ್ಮಿಕ ವರ್ಗಕ್ಕೆ ವಿಶ್ವ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು. ಪ್ರತಿಯೊಬ್ಬ ಕಾರ್ಮಿಕನೂ ದೇಶದ ಆಸ್ತಿ. ರಾಷ್ಟ್ರದ ಅಭಿವೃದ್ಧಿ ಮತ್ತು ಆರ್ಥಿಕತೆಯ ಬೆಳವಣಿಗೆಯಲ್ಲಿ ಕಾರ್ಮಿಕರ ಪಾಲು ಬಹು ದೊಡ್ಡದು. ದುಡಿಯುವ ಕೈಗಳನ್ನು ಗೌರವಿಸೋಣ, ಕಾರ್ಮಿಕರಿಗೆ ಬಲ ತುಂಬೋಣ ಎಂದು ಹೇಳಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಕಾಮಿರ್ಕರ ದಿನಾಚರಣೆಯ ಸಂದೇಶವನ್ನು ನೀಡಿದ್ದಾರೆ.

'ಶ್ರಮಮೇವ ಜಯತೇ'. ದೇಶದ ಅಭಿವೃದ್ಧಿಗಾಗಿ ಶ್ರಮವಹಿಸಿ ದುಡಿಯುತ್ತಿರುವ ಎಲ್ಲಾ ವರ್ಗದ ಶ್ರಮಿಕರಿಗೆ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ದೇಶದ ಅರ್ಥವ್ಯವಸ್ಥೆ ಉನ್ನತಿಯಡೆಗೆ ಕೊಂಡೊಯ್ಯುವುದಕ್ಕೆ ಹಗಲಿರುಳು ಶ್ರಮಿಸಿಸುತ್ತಿರುವ ಕಾರ್ಮಿಕರ ತ್ಯಾಗ, ಸೇವೆಯನ್ನು ಗೌರವಿಸೋಣ. ದುಡಿಯುವ ಕೈಗಳು ಎಂದಿಗೂ ಶ್ರೇಷ್ಠ ಎಂದು ಹೇಳಿದ್ದಾರೆ.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಕಾರ್ಮಿಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ್ದಾರೆ.

ದೇಶದ ಪ್ರಗತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರ ಪರಿಶ್ರಮವನ್ನು ಸ್ಮರಿಸುತ್ತಾ, ಕಾರ್ಮಿಕರ ಶ್ರಮವನ್ನು ಗುರುತಿಸಿ, ಗೌರವಿಸುವ ಸಲುವಾಗಿ ಪ್ರತಿ ವರ್ಷ ಮೇ 1 ರಂದು ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.