ADVERTISEMENT

ಅಂತರರಾಷ್ಟ್ರೀಯ ಯೋಗ ದಿನ | ಯೋಗದಿಂದ ನಿರೋಗ ಸಾಧ್ಯ; ಮೈಸೂರಿನಲ್ಲಿ ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜೂನ್ 2022, 3:03 IST
Last Updated 21 ಜೂನ್ 2022, 3:03 IST
ಅಂತರರಾಷ್ಟ್ರೀಯ ಯೋಗ ದಿನ ಪ್ರಯುಕ್ತ ಮೈಸೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾದರು (ಚಿತ್ರ ಕೃಪೆ – ಪ್ರಧಾನಿಯವರ ಟ್ವಿಟರ್ ಖಾತೆ)
ಅಂತರರಾಷ್ಟ್ರೀಯ ಯೋಗ ದಿನ ಪ್ರಯುಕ್ತ ಮೈಸೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾದರು (ಚಿತ್ರ ಕೃಪೆ – ಪ್ರಧಾನಿಯವರ ಟ್ವಿಟರ್ ಖಾತೆ)   

ಬೆಂಗಳೂರು: ಯೋಗದಿಂದ ನಿರೋಗಿಯಾಗಿರಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಮಂಗಳವಾರ ಹೇಳಿದರು.

ಅಂತರರಾಷ್ಟ್ರೀಯ ಯೋಗ ದಿನ (International Yoga Day) ಪ್ರಯುಕ್ತ ಮೈಸೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

‘ವಿಶ್ವದ ಜನತೆಗೆ 8ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು. ಈ ಸಂದರ್ಭದಲ್ಲಿ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ನನ್ನ ಪ್ರಣಾಮಗಳು. ಯೋಗ ಎನ್ನುವುದು ಇಂದು ವಿಶ್ವದಾದ್ಯಂತ ಜನಪ್ರಿಯವಾಗಿದೆ’ ಎಂದು ಅವರು ಹೇಳಿದರು.

ಯೋಗವು ಇಂದು ವಿಶ್ವದಾದ್ಯಂತ ವ್ಯಾಪಿಸಿದೆ. ಪ್ರಪಂಚದ ಮೂಲೆ ಮೂಲೆಗಳಲ್ಲಿಯೂ ಇಂದು ಯೋಗಾಭ್ಯಾಸ ಮಾಡಲಾಗುತ್ತಿದೆ. ಯೋಗದಿಂದ ವಿಶ್ವದ ಜನರೆಲ್ಲ ನಿರೋಗಿಯಾಗಿರಲು ಸಾಧ್ಯವಿದೆ ಎಂದು ಮೋದಿ ಹೇಳಿದರು.

ಯೋಗದಿಂದ ವಿಶ್ವ ಶಾಂತಿ ಸಾಧ್ಯವಿದೆ. ಈ ವರ್ಷದ ಯೋಗ ದಿನದ ಧ್ಯೇಯವೂ ಇದಕ್ಕೆ ಪೂರಕವಾಗಿಯೇ ಇದೆ. ನಮ್ಮ ಪೂರ್ವಜನರು, ಋಷಿ–ಮುನಿಗಳು ಯೋಗದಿಂದ ವಿಶ್ವಕ್ಕೆ ಶಾಂತಿ ಎಂದು ಪ್ರತಿಪಾದಿಸಿದ್ದರು. ಭಾರತ ಎಂದಿಗೂ ವಿಶ್ವದ ಶಾಂತಿಯನ್ನು ಬಯಸಿದ ದೇಶ. ಯೋಗದಿಂದ ಸಮಾಜಕ್ಕೆ, ವಿಶ್ವಕ್ಕೆ ಒಳಿತಾಗಲಿದೆ ಎಂದು ಮೋದಿ ಹೇಳಿದರು.

ಯೋಗ ಮಾರ್ಗದಲ್ಲಿ ಮುಂದುವರಿಯುವುದರಿಂದ ನೆಮ್ಮದಿ ಇದೆ. ನಾವೆಲ್ಲ ಯೋಗದ ಹಾದಿಯಲ್ಲಿ ಸಾಗೋಣ. ಯೋಗದಿಂದ ಉಂಟಾಗುವ ನೆಮ್ಮದಿಯ ಭಾವವನ್ನು ಸಂಭ್ರಮಿಸೋಣ ಎಂದು ಪ್ರಧಾನಿ ಕರೆ ನೀಡಿದರು.

‘ಸ್ವಾತಂತ್ರ್ಯದ‌ ಅಮೃತ ಮಹೋತ್ಸವದ ಅಂಗವಾಗಿ ದೇಶದ 75 ಚಾರಿತ್ರಿಕ ಸ್ಥಳಗಳಲ್ಲಿ ಸಾಮೂಹಿಕ ಯೋಗಾಭ್ಯಾಸ ನಡೆದಿದೆ. ಇತಿಹಾಸದಲ್ಲಿ ವಿಶೇಷ ಸ್ಥಾನವುಳ್ಳ ಮೈಸೂರು ಅರಮನೆ ಆವರಣದಲ್ಲಿ ನಡೆದಿರುವ ಯೋಗಾಭ್ಯಾಸವು ದೇಶದ ವೈವಿಧ್ಯತೆಯನ್ನು ಯೋಗದ ಒಂದೇ ಸೂತ್ರದಲ್ಲಿ ಕೂಡಿಸುತ್ತದೆ’ಎಂದು ಮೋದಿ ಹೇಳಿದರು.

ಇಡೀ‌ ವಿಶ್ವ ಇಂದು ಯೋಗ ವೃತ್ತದಲ್ಲಿ ಒಂದಾಗಿದೆ. ವಿವಿಧ ದೇಶಗಳಲ್ಲಿ‌ ಉದಯಿಸುವ ಸೂರ್ಯನ ಜೊತೆಗೆ, ಸೂರ್ಯಕಿರಣಗಳ‌ ಜೊತೆ ಜನ ಯೋಗದ ಮೂಲಕ ಒಂದಾಗುತ್ತಿದ್ದಾರೆ. ಯೋಗ ಜೀವನ ಶೈಲಿಯಷ್ಟೇ ಅಲ್ಲ. ಇದು ಜೀವನದ ದಾರಿ. ನಮ್ಮ ಹೃದಯ ಯೋಗದಿಂದ ಶುರುವಾದರೆ ಅದಕ್ಕಿಂತ ಒಳ್ಳೆಯ ಆರಂಭ ಇನ್ನೊಂದು ಇರಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದರು.

‘ಯೋಗವನ್ನು ಅರಿಯುವುದಷ್ಟೇ ಅಲ್ಲ, ಅದು ಜೀವನ ಭಾಗವಾಗಬೇಕು. ಯೋಗದಿನ ಮಾತ್ರವಲ್ಲ. ಎಲ್ಲ ದಿನವೂ ಯೋಗದ ಮೂಲಕ ಸ್ವಾಸ್ಥ್ಯ, ಸುಖ ಮತ್ತು ಶಾಂತಿಯನ್ನು ಅನುಭವಿಸಬೇಕು ಎಂದು‌ ಮೋದಿ ಸಲಹೆ ನೀಡಿದರು.

ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೈಸೂರಿನ ಯೋಗ ಕಾರ್ಯಕ್ರಮಕ್ಕೆ ಆಗಮಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮೆರುಗು ಹೆಚ್ಚಿಸಿದ್ದಾರೆ ಎಂದರು.

ಯೋಗ ದಿನಾಚರಣೆಯ ಜನಪ್ರಿಯತೆಯಲ್ಲಿ ಮೋದಿ ಅವರ ಪಾತ್ರ ಬಹಳ ದೊಡ್ಡದಾಗಿದೆ. ಅಂತರರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಅವರು ಇಲ್ಲಿಗೆ ಬರುವ ಮೂಲಕ ವಿಶ್ವ ಮಟ್ಟದಲ್ಲಿ ಮೈಸೂರು ಗಮನ ಸೆಳೆಯುವಂತೆ ಮಾಡಿದ್ದಾರೆ. ಯೋಗದಿಂದ ವಿಶ್ವವನ್ನು ಒಂದುಗೂಡಿಸಬಹುದು ಎಂಬ ಸಂದೇಶ ಸಾರಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.