ADVERTISEMENT

ಸಿ.ಎಂ ಸಿದ್ದರಾಮಯ್ಯಗೆ ತನಿಖೆಯ ಬಿಸಿ: ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 22:25 IST
Last Updated 25 ಸೆಪ್ಟೆಂಬರ್ 2024, 22:25 IST
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ   

ಬೆಂಗಳೂರು: ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆಯ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿ ಪ್ರಭಾವವಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಸೇರಿ ಐವರು ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಿ’ ಎಂದು ಜನ
ಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಮೈಸೂರು ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿಗೆ ಆದೇಶಿಸಿದೆ.

ಈ‌ ಸಂಬಂಧ ಮೈಸೂರಿನ ಸ್ನೇಹಮಯಿ ಕೃಷ್ಣ ದಾಖಲಿಸಿದ್ದ ಖಾಸಗಿ ದೂರಿನ ವಿಚಾರಣೆ ಆಲಿಸಿ ಕಾಯ್ದಿರಿಸಿದ್ದ ಆದೇಶವನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಬುಧವಾರ ಮಧ್ಯಾಹ್ನ ತೆರೆದ ನ್ಯಾಯಾಲಯದಲ್ಲಿ ಉಕ್ತಲೇಖನದ ಮೂಲಕ ದಾಖಲಿಸಿದರು.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ–1973ರ (ಸಿಆರ್‌ಪಿಸಿ) ಕಲಂ 156 (3)ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಬೇಕು’ ಎಂದು ಸೂಚಿಸಿದರು.

ADVERTISEMENT

‘ಈ ಕ್ರಿಮಿನಲ್‌ ಪ್ರಕರಣದ ತನಿಖೆ ನಡೆಸಿ ಅಂತಿಮ ವರದಿಯನ್ನು (ದೋಷಾರೋಪ ಪಟ್ಟಿ) ಕಲಂ 173ರ ಅಡಿಯಲ್ಲಿ ಮೂರು ತಿಂಗಳ ಒಳಗಾಗಿ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದು ನಿರ್ದೇಶಿಸಿದ ನ್ಯಾಯಾಧೀಶರು ವಿಚಾರಣೆ ಮುಂದೂಡಿದರು. ವಿಚಾರಣೆ ವೇಳೆ ಫಿರ್ಯಾದುದಾರ ಸ್ನೇಹಮಯಿ ಕೃಷ್ಣ ಹಾಜರಿದ್ದರು.

ಈ ಮೊದಲು ಸ್ನೇಹಮಯಿ ಕೃಷ್ಣ ಸೇರಿದಂತೆ ಒಟ್ಟು ಮೂವರು ಸಲ್ಲಿಸಿದ್ದ ಖಾಸಗಿ ದೂರಿನ ಪ್ರಾಥಮಿಕ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರು ಆದೇಶ ಕಾಯ್ದಿರಿಸಿದ್ದರು. ಏತನ್ಮಧ್ಯೆ, ರಾಜ್ಯಪಾಲರು ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ಕಲಂ 17ಎ ಅಡಿಯಲ್ಲಿ ತನಿಖೆಗೆ ಮಂಜೂರಾತಿ ನೀಡಿ ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಪ್ರಕಟಣೆಗೆ ಮಧ್ಯಂತರ ತಡೆ ನೀಡಿ ವಿಚಾರಣೆ ನಡೆಸಿತ್ತು. ಮಂಗಳವಾರವಷ್ಟೇ (ಸೆ.23) ರಿಟ್‌ ಅರ್ಜಿ ವಜಾಗೊಳಿಸಿದ್ದ ನ್ಯಾಯಪೀಠ, ‘ರಾಜ್ಯಪಾಲರ ಆದೇಶದ ಅನುಸಾರ ಸಿದ್ದರಾಮಯ್ಯ ವಿರುದ್ಧದ ಆರೋಪಗಳ ಬಗೆಗಿನ ತನಿಖೆಯ ಅಗತ್ಯವಿದೆ’ ಎಂದು ತೀರ್ಪು ನೀಡಿತ್ತು ಮತ್ತು ಸೆಷನ್ಸ್‌ ನ್ಯಾಯಾಲಯ ಕಾಯ್ದಿರಿಸಿದ್ದ ಆದೇಶಕ್ಕೆ ನೀಡಿದ್ದ ತಡೆಯನ್ನು ತೆರವುಗೊಳಿಸಿತ್ತು.  

ಹೀಗಾಗಿ, ಫಿರ್ಯಾದುದಾರ ಮೈಸೂರಿನ ಸ್ನೇಹಮಯಿ ಕೃಷ್ಣ ಬುಧವಾರ ಬೆಳಿಗ್ಗೆ ತಮ್ಮ ಪರವಾದ ಹಿರಿಯ ವಕೀಲೆ ಲಕ್ಷ್ಮಿ ಅಯ್ಯಂಗಾರ್ ಮುಖಾಂತರ ಹೈಕೋರ್ಟ್ ತೀರ್ಪಿನ ಪ್ರತಿಯನ್ನು ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರಿಗೆ ಸಲ್ಲಿಸಿ ಎಫ್‌ಐಆರ್ ದಾಖಲಿಸಲು ನಿರ್ದೇಶಿಸುವಂತೆ ಕೋರಿದರು.

ಕೆಲಕಾಲ ಲಕ್ಷ್ಮಿ ಅಯ್ಯಂಗಾರ್ ಅವರ ವಾದವನ್ನು ಕ್ಲುಪ್ತವಾಗಿ ಆಲಿಸಿದ ನ್ಯಾಯಾಧೀಶರು ಕೆಲವು ಸುಪ್ರೀಂ ಕೋರ್ಟ್‌ ತೀರ್ಪುಗಳು ಮತ್ತು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ತೀರ್ಪಿನ ಅನುಸಾರ ಖಾಸಗಿ ದೂರಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸೇರಿ ಇತರರ ವಿರುದ್ಧ; ಭಾರತೀಯ ದಂಡ ಸಂಹಿತೆ–1860ರ ಕಲಂ 120ಬಿ, 166, 403, 406, 420, 426, 465, 468, 340, 351, ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕಲಂ 9, 13 ಮತ್ತು ಆಸ್ತಿ ಬೇನಾಮಿ ವಹಿವಾಟು ಕಾಯ್ದೆ–1988ರ ಕಲಂ 3, 53, 54, ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ-2011ರ ಕಲಂ 3 ಮತ್ತು 4ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ಕ್ರಿಮಿನಲ್ ಪ್ರಕರಣದ ತನಿಖೆ ನಡೆಸುವಂತೆ ಆದೇಶಿಸಿದರು.

ಮುಂದಿನ ಪ್ರಕ್ರಿಯೆ ಏನು?

‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್ಐಆರ್ ದಾಖಲಿಸುವ ಮುನ್ನ ಪೊಲೀಸರು ಪ್ರಕರಣದ ಪ್ರಾಥಮಿಕ ವಿಚಾರಣೆ ನಡೆಸಬೇಕಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಪ್ರಾಥಮಿಕ ವಿಚಾರಣೆಯ ಪ್ರಮೇಯವೇ ಬರುವುದಿಲ್ಲ. ಯಾಕೆಂದರೆ ನ್ಯಾಯಾಲಯವೇ ಎಫ್‌ಐಆರ್ ದಾಖಲಿಸಿ ಎಂದಿರುವುದರಿಂದ ಎಫ್‌ಐಆರ್‌ ಮಾಡಲೇಬೇಕಾಗುತ್ತದೆ. ಈ ಸಮಯದಲ್ಲಿ ಸಾಕ್ಷ್ಯಾಧಾರ ಕಂಡುಬಂದರೆ ಆರೋಪಿಗಳನ್ನು ಬಂಧಿಸಬಹುದಾಗಿದೆ. ಈ ವೇಳೆ ಆರೋಪಿಗಳು ನಿರೀಕ್ಷಣಾ ಜಾಮೀನನ್ನೂ ಕೋರಬಹುದು’ ಎಂದು ಹೈಕೋರ್ಟ್‌ನ ಹಿರಿಯ ಕ್ರಿಮಿನಲ್‌ ವಕೀಲ ಸಿ.ಎಚ್‌.ಹನುಮಂತರಾಯ ಅಭಿಪ್ರಾಯ ಪಡುತ್ತಾರೆ.

ತನಿಖೆಗೆ ಹೆದರುವುದಿಲ್ಲ: ಸಿದ್ದರಾಮಯ್ಯ

‘ನಾನು ಯಾವುದೇ ತನಿಖೆಯನ್ನು ಎದುರಿಸಲು ತಯಾರಿದ್ದೇನೆ. ತನಿಖೆಗೆ ಹೆದರುವುದಿಲ್ಲ. ಕಾನೂನು ರೀತಿ ಹೋರಾಟ ನಡೆಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಎಫ್‌ಐಆರ್ ದಾಖಲಿಸಬಹುದು’ ಎಂದು ಆದೇಶ ನೀಡಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಅವರು, ‘ಮಂಗಳವಾರ ಹೈಕೋರ್ಟ್‌ ನೀಡಿದ ಆದೇಶದ ಅನ್ವಯ 17 ಎ ಪ್ರಕಾರ ತನಿಖೆ ಮಾಡಲು ಅನುಮತಿ ನೀಡಲಾಗಿದೆ. ಆದೇಶದ ಪ್ರತಿ ನನಗೆ ಸಿಕ್ಕಿಲ್ಲ. ಆದೇಶದ ಪ್ರತಿಯನ್ನು ಪೂರ್ತಿ ಓದಿದ ನಂತರ ಕಾನೂನು ತಜ್ಞರ ಜತೆ ಚರ್ಚಿಸಿ ಗುರುವಾರ ಪ್ರತಿಕ್ರಿಯೆ ನೀಡುತ್ತೇನೆ’ ಎಂದರು.

‘ಮೈಸೂರು ಲೋಕಾಯುಕ್ತಕ್ಕೆ ಪ್ರಕರಣವನ್ನು ಶಿಫಾರಸು ಮಾಡಲಾಗಿದೆ. ಮೈಸೂರಿನಲ್ಲಿಯೇ ದೂರು ನೀಡಲಾಗಿದ್ದು, ದೂರುದಾರರೂ ಮೈಸೂರಿನವರೇ. ಮುಡಾ ಕೂಡ ಅಲ್ಲಿಯೇ ಇರುವುದರಿಂದ ಮೈಸೂರಿಗೆ ಶಿಫಾರಸು ಮಾಡಿರಬೇಕು ಎಂದು ಭಾವಿಸಿದ್ದೇನೆ’ ಎಂದು ಹೇಳಿದರು. ‘ಮುಡಾ ಪ್ರಕರಣದ ತನಿಖೆಗೆ ಸರ್ಕಾರ ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಪಿ.ಎನ್‌.ದೇಸಾಯಿಯವರ ಆಯೋಗದ ತನಿಖೆ ಮುಂದುವರಿಯಲಿದೆಯೇ’ ಎಂಬ ಪ್ರಶ್ನೆಗೆ, ‘ನ್ಯಾಯಾಂಗ ತನಿಖೆ
ಮುಂದುವರಿಯುತ್ತದೆ’ ಎಂದು ಹೇಳಿದರು.

* ಎ–1 ಸಿದ್ದರಾಮಯ್ಯ 

* ಎ–2 ಬಿ.ಎಂ.ಪಾರ್ವತಿ
* ಎ–3 ಬಿ.ಎಂ. ಮಲ್ಲಿಕಾರ್ಜುನ ಸ್ವಾಮಿ 

* ಎ–4 ಜೆ.ದೇವರಾಜು l ಎ–5 ಇತರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.