ಬೆಂಗಳೂರು: ‘ಎಚ್.ಡಿ. ದೇವೇಗೌಡರು ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಯೇ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
‘ಕರ್ನಾಟಕದಿಂದ ಕಾಂಗ್ರೆಸ್ ಹೈಕಮಾಂಡ್‌ಗೆ ಹಣ ರವಾನೆಯಾಗುತ್ತಿದೆ’ ಎಂಬ ದೇವೇಗೌಡರ ಆರೋಪ ಕುರಿತು ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಅವರ ಆರೋಪ ನಿರಾಧಾರ. ರಾಜಕೀಯಕ್ಕಾಗಿ ಆರೋಪ ಮಾಡಬೇಕೆಂದು ಈ ರೀತಿ ಆಪಾದನೆ ಮಾಡಿದ್ದಾರೆ’ ಎಂದರು.
‘₹1,823 ಕೋಟಿ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ಎಐಸಿಸಿಗೆ ನೋಟಿಸ್ ನೀಡಿದೆ. ವಿರೋಧ ಪಕ್ಷಗಳ ಮೇಲೆ ದಾಳಿ ನಡೆಯುತ್ತಿದೆ. ನಾವು ಯಾರಿಗೂ ಹಣ ಕಟ್ಟುವ ಅಗತ್ಯವಿಲ್ಲ. ನಮ್ಮ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡು ಅದರಲ್ಲಿದ್ದ ಹಣವನ್ನು ಕದ್ದಿದ್ದಾರೆ. ನಮ್ಮ ಪಕ್ಷ 20ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲಲಿದೆ ಎಂಬುದು ಅವರಿಗೆ ಅರಿವಾಗಿದೆ. ಹೀಗಾಗಿ ಅಸೂಯೆಯಿಂದ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
‘ತಮ್ಮದೇ ಪಕ್ಷ ಇಟ್ಟುಕೊಂಡು ತಮ್ಮ ಕುಟುಂಬದವರನ್ನು ಬೇರೆ ಪಕ್ಷದಿಂದ ಕಣಕ್ಕಿಳಿಸುತ್ತಾರಾ? ಜೆಡಿಎಸ್ ಅಸ್ತಿತ್ವದಲ್ಲಿಲ್ಲ ಎಂಬುದನ್ನು ಅವರೇ ತೋರಿಸಿದ್ದಾರೆ. ಆ ಪಕ್ಷ ಇರಬೇಕು, ಪ್ರಬಲ ವಿರೋಧ ಪಕ್ಷವಾಗಬೇಕು ಎಂಬುದು ನಮ್ಮ ಆಸೆ. ಆದರೆ ಅವರೇ ತಮ್ಮ ಪಕ್ಷವನ್ನು ಬಿಜೆಪಿ ಜತೆ ವಿಲೀನ ಮಾಡಿಕೊಳ್ಳುತ್ತಿದ್ದಾರೆ. ದೇಶದ ಪ್ರಧಾನಿಯಾದವರು, ಎರಡು ಬಾರಿ ಮುಖ್ಯಮಂತ್ರಿಯಾದವರು ಇರುವ ಪಕ್ಷವನ್ನು ವಿಲೀನ ಮಾಡುತ್ತಿರುವುದನ್ನು ನೋಡಿ ಬೇಸರವಾಗುತ್ತಿದೆ’ ಎಂದು ಶಿವಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.