ADVERTISEMENT

ಐಟಿ ದಾಳಿ | ಮಂಗಳವಾರ ವಿಚಾರಣೆಗೆ ಹಾಜರಾಗುವೆ, ಪ್ರತಿಭಟನೆ ಬೇಡ: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 4:28 IST
Last Updated 12 ಅಕ್ಟೋಬರ್ 2019, 4:28 IST
ಜಿ.ಪರಮೇಶ್ವರ
ಜಿ.ಪರಮೇಶ್ವರ   

ಬೆಂಗಳೂರು:ಮನೆಯಲ್ಲಿ ಹಣ ಸಿಕ್ಕರೆ ಅದನ್ನು ನಾನು ಮುಚ್ಚಿಡಲು ಆಗಲ್ಲ. ಹಣವಿದ್ದರೆ ಅದಕ್ಕೆ ಪೂರಕ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಆದ್ದರಿಂದ, ಐಟಿ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವೆ ಎಂದು ಕಾಂಗ್ರೆಸ್ ಮುಖಂಡ ಜಿ.ಪರಮೇಶ್ವರ ಹೇಳಿದರು.

ಆದಾಯ ತೆರಿಗೆ ಇಲಾಖೆ(ಐಟಿ) ದಾಳಿ ನಡೆಸಿದ ಎರಡು ದಿನದ ಬಳಿಕ ಶನಿವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು,ಐಟಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ಮೆಡಿಕಲ್‌ ಕಾಲೇಜು ವಿದ್ಯಾರ್ಥಿಗಳ ದಾಖಲಾತಿ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.

‌ದಾಳಿ ನಡೆದ ದಿನ ಬೆಳಿಗ್ಗೆ ಐಟಿ ಅಧಿಕಾರಿಗಳು ಮನೆಗೆ ಬಂದಿದ್ದಾರೆ. ಆಗ ನಾನು ನನ್ನ ಕ್ಷೇತ್ರದಲ್ಲಿ ಕೆರೆಗೆ ಗಂಗಾ ಪೂಜೆಗೆ ಸಲ್ಲಿಸಲು ತೆರಳಿದ್ದೆ. ಕಾಲೇಜಿನ ಮೇಲೆ ಐಟಿ ದಾಳಿ ನಡೆದಿರುವ ಮಾಹಿತಿ ಬಂತು. ಐಟಿ ಅಧಿಕಾರಿಗಳು ಸರ್ಚ್ ವಾರಂಟ್‌ ನೀಡಿ ಈ ಬಗ್ಗೆ ತಿಳಿಸಿದರು.ಸಿದ್ಧಾರ್ಥ ಕಾಲೇಜಿನ ದಾಖಲಾತಿ ಪರಿಶೀಲನೆಗೆ ಬಂದಿದ್ದೇವೆ. ಆ ಸಂಸ್ಥೆಯಲ್ಲಿ ತಾವು ಪ್ರಮುಖರಾಗಿದ್ದೀರಿ. ಆದ್ದರಿಂದ, ಪರಿಶೀಲನೆ ನಡೆಸುತ್ತೇವೆ ಎಂದು ತಿಳಿಸಿದ ಅಧಿಕಾರಿಗಳು, ನನ್ನನ್ನು ಅಲ್ಲಿಂದ ಕರೆತಂದರು ಎಂದು ಪರಮೇಶ್ವರ ಮಾಹಿತಿ ನೀಡಿದರು.

ಅಧಿಕಾರಿಗಳು ಪಂಚನಾಮೆ ಮಾಡಿದ್ದಾರೆ. ನನ್ನ ಬಳಿ ಪಂಚನಾಮೆಯನ್ನೂ ಬರೆಸಿಕೊಂಡಿದ್ದಾರೆ. ಇಂದು ಬೆಳಿಗ್ಗೆ 11ಕ್ಕೆ ತುಮಕೂರಿನ ಎಂಜಿನಿಯರಿಂಗ್‌ ಕಾಲೇಜಿಗೆ ಬರುವಂತೆ ತಿಳಿಸಿದ್ದಾರೆ. ಅಲ್ಲಿಗೆ ಹೋಗುವೆ. ಮಂಗಳವಾರ ವಿಚಾರಣೆಗೆ ಬರುವಂತೆಯೂ ತಿಳಿಸಿದ್ದಾರೆ. ಅವರು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವೆ ಎಂದು ಅವರು ತಿಳಿಸಿದರು.

ತನಿಖೆ ಮುಗಿದ ಬಳಿಕ ಪ್ರತಿಕ್ರಿಯಿಸುವೆ

ಐಟಿ ದಾಳಿ ರಾಜಕೀಯ ಪ್ರೇರಿತವೇ? ಈ ಬಗ್ಗೆ ಏನು ಹೇಳುತ್ತೀರಿ? ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್‌, ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ವಿಚಾರಣೆ ಪೂರ್ಣಗೊಂಡ ಬಳಿಕ, ರಾಜಕೀಯ ಪ್ರೇರಿತವೇ ಅಥವಾ ಮತ್ತೇನೋ ಎಂಬುದನ್ನು ಸೂಕ್ತ ರೀತಿಯಲ್ಲಿತಿಳಿಸುವೆ ಎಂದರು.

ಬಂದ್‌, ಪ್ರತಿಭಟನೆ ಬೇಡ: ಕಾರ್ಯಕರ್ತರಲ್ಲಿ ಮನವಿ

ಕಾರ್ಯಕರ್ತರು ಕ್ಷೇತ್ರದಲ್ಲಿ ಬಂದ್‌ ಮಾಡುವುದು ಹಾಗೂ ಪ್ರತಿಭಟನೆ ಮಾಡುವುದು ಬೇಡ ಎಂದು ಹೇಳಿದ ಪರಮೇಶ್ವರ್‌, ಐಟಿ ಅಧಿಕಾರಿಗಳು ಕಾನೂನು ರೀತಿ ಕ್ರಮ ಕೈಗೊಂಡು ತನಿಖೆ, ವಿಚಾರಣೆ ನಡೆಸುತ್ತಾರೆ. ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.