ADVERTISEMENT

ಬೆಂಗಳೂರು: ಬಿಎಸ್‌ವೈ ಆಪ್ತ ಉಮೇಶ್‌ ಮನೆ ಮೇಲೆ ಐಟಿ ದಾಳಿ

ಬೃಹತ್‌ ನೀರಾವರಿ ಯೋಜನೆಗಳ ಗುತ್ತಿಗೆದಾರರ ಮನೆಗಳಲ್ಲೂ ಶೋಧ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 7:31 IST
Last Updated 7 ಅಕ್ಟೋಬರ್ 2021, 7:31 IST
   

ಬೆಂಗಳೂರು: ತೆರಿಗೆ ವಂಚನೆ, ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆಪ್ತ ಉಮೇಶ್‌ ಸೇರಿದಂತೆ ಹಲವರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ಬೆಳಿಗ್ಗೆ ದಾಳಿ ಮಾಡಿದ್ದು, ಶೋಧ ನಡೆಸುತ್ತಿದ್ದಾರೆ.

ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಶೋಧ ನಡೆಸಲಾಗುತ್ತಿದೆ. ಜಲ ಸಂಪನ್ಮೂಲ ಇಲಾಖೆಯ ಬೃಹತ್‌ ನೀರಾವರಿ ಯೋಜನೆಗಳ ಕಾಮಗಾರಿ ನಿರ್ವಹಿಸುತ್ತಿರುವ ಹಲವು ಗುತ್ತಿಗೆದಾರರ ಮೇಲೂ ಐ.ಟಿ ದಾಳಿ ನಡೆದಿದೆ. ಕೃಷ್ಣಾ ಭಾಗ್ಯ ಜಲ ನಿಗಮದ ಕಾಮಗಾರಿಗಳ ಗುತ್ತಿಗೆಯಲ್ಲಿ ಅವ್ಯವಹಾರ ನಡೆಸಿರುವ ಆರೋಪದ ಮೇಲೆ ಈ ದಾಳಿ ನಡೆದಿದೆ ಎಂಬ ಮಾಹಿತಿ ಲಭಿಸಿದೆ.

ಶಿವಮೊಗ್ಗ ಜಿಲ್ಲೆ ಆಯನೂರು ನಿವಾಸಿಯಾಗಿರುವ ಉಮೇಶ್‌, ಆರಂಭದಲ್ಲಿ ಕೆಲಕಾಲ ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ ಅವರ ಆಪ್ತ ಸಹಾಯಕನಾಗಿದ್ದರು. 2012ರಿಂದಲೂ ಯಡಿಯೂರಪ್ಪ ಅವರ ಆಪ್ತ ಸಹಾಯಕನಾಗಿದ್ದರು. ಯಡಿಯೂರಪ್ಪ ಮತ್ತು ಅವರ ಮಗ ಬಿ.ವೈ. ವಿಜಯೇಂದ್ರ ಅವರ ಅತ್ಯಾಪ್ತರಲ್ಲಿ ಉಮೇಶ್‌ ಒಬ್ಬರು.

ADVERTISEMENT

ಅಪಾರ ದಾಖಲೆ ವಶಕ್ಕೆ: ಉಮೇಶ್‌ ಮನೆಯಲ್ಲಿ ಅಪಾರ ಪ್ರಮಾಣದ ದಾಖಲೆಗಳನ್ನು ಐ.ಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಚೀಲಗಳಲ್ಲಿ ಮೂಟೆ ಕಟ್ಟಿ ದಾಖಲೆಗಳನ್ನು ಕೊಂಡೊಯ್ಯಲಾಗಿದೆ.

ಗುತ್ತಿಗೆದಾರರಿಗೆ ಸೇರಿದ ಸ್ಥಳಗಳಿಂದಲೂ ಬೃಹತ್‌ ಪ್ರಮಾಣದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಮುಂದುವರಿದಿದೆ.

ರಾಜಾಜಿನಗರದರಾಮಮಂದಿರ ಪ್ರದೇಶದಲ್ಲಿರುವ ಉಮೇಶ್ ಮನೆ, ನಾಗಸಂದ್ರದಲ್ಲಿ ಉಮೇಶ್ ಹೊಂದಿರುವ ಧವಳಗಿರಿ ಹೆಸರಿನ ಮನೆ, ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಲೆಕ್ಕ ಪರಿಶೋಧಕಿಯೊಬ್ಬರ ಮನೆ, ಗುತ್ತಿಗೆದಾರರಾದ ಡಿ.ವೈ. ಉಪ್ಪಾರ್, ಎ.ವೈ. ಕಟ್ಟೀಮನಿ ಅವರಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಯುತ್ತಿದೆ.

ಬೀದರ್ ನ ಗುತ್ತಿಗೆದಾರ ಸುರೇಶ್ ಕಣಜಿ, ಬೆಂಗಳೂರಿನ ಸಹಕಾರ ನಗರದಲ್ಲಿರುವ ಸಿಮೆಂಟ್ ಮತ್ತು ಕಬ್ಬಿಣ ಪೂರೈಕೆ ಮಾಡುವ ರಾಹುಲ್ ಎಂಟರ್ ಪ್ರೈಸಸ್ ಮೇಲೂ ಐ.ಟಿ ದಾಳಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.