ADVERTISEMENT

ಹೊಸ ಆಮ್ಲಜನಕ ಘಟಕಗಳ ಸ್ಥಾಪನೆ ಪ್ರೋತ್ಸಾಹಿಸಲು ಉತ್ತೇಜನ ಯೋಜನೆ: ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 26 ಮೇ 2021, 12:31 IST
Last Updated 26 ಮೇ 2021, 12:31 IST
ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌
ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌   

ಬೆಂಗಳೂರು: ‘ರಾಜ್ಯವನ್ನು ಆಮ್ಲಜನಕ ಉತ್ಪಾದನೆಯಲ್ಲಿ ಸ್ವಾವಲಂಬಿಗೊಳಿಸುವ ಉದ್ದೇಶದಿಂದ ನೂತನ ಆಮ್ಲಜನಕ ಘಟಕಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲು ಕೈಗಾರಿಕಾ ಇಲಾಖೆಯಿಂದ ಉತ್ತೇಜನ ಯೋಜನೆ ಜಾರಿಗೆ ತರಲು ಚಿಂತನೆ ನಡೆದಿದೆ’ ಎಂದು ರಾಜ್ಯದ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಉಸ್ತುವಾರಿ ಮತ್ತು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದರು.

ರಾಜ್ಯದಲ್ಲಿನ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದೊಂದಿಗೆ ನಡೆಸಿದ್ದ ಮಾತುಕತೆ ಸಫಲವಾಗಿದ್ದು, ರಾಜ್ಯಕ್ಕೆ ₹ 1,200 ಟನ್‌ ದ್ರವೀಕೃತ ಆಮ್ಲಜನಕ ಹಂಚಿಕೆ ಮಾಡಲಾಗಿದೆ. ಜೊತೆಗೆ ರಾಜ್ಯದಲ್ಲಿ ಉತ್ಪಾದನೆ ಆಗುವ ಆಮ್ಲಜನಕವನ್ನು ರಾಜ್ಯದಲ್ಲಿಯೇ ಬಳಸಿಕೊಳ್ಳುವಂತೆ ಕೇಂದ್ರ ಸರ್ಕಾರ ಅನುವು ಮಾಡಿ ಕೊಟ್ಟಿದೆ’ ಎಂದರು.

ಉತ್ತೇಜನ ಯೋಜನೆ: ‘ರಾಜ್ಯದಲ್ಲಿ ನೂತನ ಉತ್ಪಾದನಾ ಘಟಕಗಳನ್ನು ಆರಂಭಿಸಲು ಮುಂದಾಗುವ ಕೈಗಾರಿಕೋದ್ಯಮಿಗಳಿಗೆ ಆಕರ್ಷಕ ಉತ್ತೇಜನ ನೀಡಲು ಯೋಜನೆ ರೂಪಿಸುವಂತೆ ಕೈಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ವಿವರವಾದ ಮಾಹಿತಿ ನೀಡಲಾಗುವುದು’ ಎಂದರು.

ADVERTISEMENT

ಬಫರ್‌ ಸ್ಟಾಕ್‌ ಯೋಜನೆ: ‘ಜಿಲ್ಲೆಗಳಲ್ಲಿ ಆಮ್ಲಜನಕ ಬಫರ್‌ ಸ್ಟಾಕ್‌ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ಯೋಜನೆ ರೂಪಿಸಲು ಸೂಚನೆ ನೀಡಲಾಗಿದೆ. ಪ್ರತಿ ಜಿಲ್ಲೆಗಳಲ್ಲಿ 20 ಟನ್‌ ಸ್ಟೋರೇಜ್‌ ಸಾಮರ್ಥ್ಯ ಹೆಚ್ಚಿಸಿದರೆ ತುರ್ತು ಸಂಧರ್ಭಗಳಲ್ಲಿ ಬಳಸಿಕೊಳ್ಳಲು ಅನುಕೂಲ ಆಗಲಿದೆ’ ಎಂದರು.

‘ಆಯಾ ಜಿಲ್ಲೆಗಳಲ್ಲಿ ಇರುವ ಸಕ್ರಿಯಯ ಪ್ರಕರಣಗಳ ಆಧಾರದ ಮೇಲೆ ಆಮ್ಲಜನಕವನ್ನು ಹಂಚಿಕೆ ಮಾಡಲಾಗುತ್ತಿದೆ. ಪ್ರತಿ ದಿನ ಆಯಾ ಆಸ್ಪತ್ರೆಗಳಿಗೆ ನಿಗದಿಪಡಿಸಲಾಗಿರುವ ಪ್ರಮಾಣದಲ್ಲಿ ಆಮ್ಲಜನಕ ರವಾನೆ ಆಗುತ್ತಿರುವ ಬಗ್ಗೆ ಮಾಹಿತಿ ಪಡೆಯಳಲಾಗುತ್ತಿದೆ. ಕಳೆದ 5 ದಿನಗಳಲ್ಲಿ ಕ್ರಮವಾಗಿ 889.93, 855.21, 1062.71, 899.22 ಮತ್ತು 728.36 ಟನ್‌ ಆಮ್ಲಜನಕ ರಾಜ್ಯಕ್ಕೆ ದೊರಕಿದೆ. ಒಟ್ಟಾರೆಯಾಗಿ ಸರಾಸರಿಯಾಗಿ 887.08 ಟನ್‌ ಆಮ್ಲಜನಕ ದೊರೆತಿದೆ. ಕೇಂದ್ರ ಸಹಕಾರದಿಂದ 150 ಟನ್‌ ದ್ರವೀಕೃತ ಆಮ್ಲಜನಕ ಮಂಗಳೂರು ಬಂದರಿಗೆ ಬಂದು ತಲುಪಿದೆ. ಕೇಂದ್ರದ ಸಹಕಾರದಿಂದ ರೈಲುಗಳಲ್ಲಿ ರವಾನೆಯಾಗುತ್ತಿರುವ ಆಮ್ಲಜನಕದಿಂದ ರಾಜ್ಯದಲ್ಲಿ ಆಮ್ಲಜನಕ ಪರಿಸ್ಥಿತಿ ದಿನೇ ದಿನೇ ಸುಧಾರಿಸುತ್ತಿದೆ’ ಎಂದರು.

4 ಐಎಸ್‌ಓ ಟ್ಯಾಂಕರ್‌ಗಳ ರವಾನೆ: ‘ಒಡಿಶಾದ ಕಳಿಂಗಾ ನಗರದಿಂದ ಇನ್ನೂ ನಾಲ್ಕು ಟ್ಯಾಂಕರ್‌ಗಳು ಬರುವ ನಿರೀಕ್ಷೆ ಇದೆ. ಇದರಿಂದ ರಾಜ್ಯದಲ್ಲಿ ಟ್ಯಾಂಕರ್‌ಗಳ ಸಂಖ್ಯೆ ಹೆಚ್ಚಾಗಲಿದೆ. ಯಾದಗಿರಿ ಮತ್ತು ಕೋಲಾರದಲ್ಲಿ 500 ದ್ರವೀಕೃತ ಆಮ್ಲಜನಕ ಜನರೇಟರ್‌ ಕಾರ್ಯಾರಂಭವಾಗಿದೆ. ಕಲಬುರ್ಗಿ ಇಎಸ್‌ಐ ಆಸ್ಪತ್ರೆಯಲ್ಲಿ ಇಂಥ 1000 ಜನರೇಟರ್‌ ಪ್ಲಾಂಟ್ ಮೇ 22ರಿಂದ ಕಾರ್ಯಾರಂಭವಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.