ADVERTISEMENT

ಜಲ ಜೀವನ್‌ ಮಿಷನ್‌: ರಾಜ್ಯದಲ್ಲಿ 169 ಕಡೆ ಅಕ್ರಮ ಪತ್ತೆ; ಜಲಶಕ್ತಿ ಸಚಿವ ಪಾಟೀಲ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 13:53 IST
Last Updated 29 ಜನವರಿ 2026, 13:53 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ‘ಜಲ ಜೀವನ್‌ ಮಿಷನ್‌ ಯೋಜನೆಯಡಿ ಕರ್ನಾಟಕದಲ್ಲಿ 169 ಅಕ್ರಮಗಳು ನಡೆದಿರುವ ಬಗ್ಗೆ ವರದಿ ಬಂದಿದೆ’ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ತಿಳಿಸಿದರು. 

ಲೋಕಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಮಿಷನ್ ಅಡಿಯಲ್ಲಿ ಕಾಮಗಾರಿ ನಡೆಸಲು ರಾಜ್ಯ ಸರ್ಕಾರಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತದೆ. ರಾಜ್ಯ ಸರ್ಕಾರಗಳು ಟೆಂಡರ್ ಕರೆದು ಯೋಜನಾ ವರದಿಗಳನ್ನು ಸಿದ್ಧಪಡಿಸುತ್ತವೆ. ಕಾಮಗಾರಿ ಪ್ರಗತಿಯ ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸುತ್ತವೆ. ಅಕ್ರಮ ನಡೆದಲ್ಲಿ ರಾಜ್ಯ ಸರ್ಕಾರವೇ ಕ್ರಮ ಕೈಗೊಳ್ಳಬೇಕಿದೆ. ಕರ್ನಾಟಕದ ಪ್ರಕರಣಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ’ ಎಂದರು. 

ADVERTISEMENT

ಯೋಜನೆಯ ಅನುಷ್ಠಾನದಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ದೂರುಗಳ ಹಿನ್ನೆಲೆಯಲ್ಲಿ ದೇಶದಾದ್ಯಂತ 4,000ಕ್ಕೂ ಹೆಚ್ಚು ಜನರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಕಳಪೆ ಗುಣಮಟ್ಟದ ಕೆಲಸ, ಆರ್ಥಿಕ ಅಕ್ರಮ ಮತ್ತು ಅಸಮರ್ಪಕ ನೀರು ಸರಬರಾಜು ಆಗಿರುವ ಬಗ್ಗೆ ದೂರುಗಳು ಬಂದಿದ್ದವು ಎಂದರು. 

‘ಈ ಯೋಜನೆಯಡಿ ಕರ್ನಾಟಕಕ್ಕೆ ಇಲ್ಲಿಯವರೆಗೆ ₹28,623 ಕೋಟಿ ಹಂಚಿಕೆ ಮಾಡಲಾಗಿದೆ. ಇದರಲ್ಲಿ ₹11,760 ಕೋಟಿಯನ್ನು ರಾಜ್ಯಕ್ಕೆ ಬಿಡುಗಡೆ ಮಾಡಲಾಗಿದೆ. ರಾಜ್ಯ ಸರ್ಕಾರವು ₹11,097 ಕೋಟಿ ಬಳಸಿದೆ. ₹688 ಕೋಟಿಯನ್ನು ಇನ್ನಷ್ಟೇ ಬಳಸಬೇಕಿದೆ’ ಎಂದು ಅವರು ಮಾಹಿತಿ ನೀಡಿದರು. 

ಗೋವಿಂದ ಕಾರಜೋಳ, ‘ಚಿತ್ರದುರ್ಗ ಜಿಲ್ಲೆಯಲ್ಲಿನ ಅಕ್ರಮಗಳ ಕುರಿತು ಕರ್ನಾಟಕ ಸರ್ಕಾರವು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನನ್ನ ಸಂಸದೀಯ ಕ್ಷೇತ್ರದ ಅನೇಕ ಗ್ರಾಮಗಳಲ್ಲಿ ನಾನು ವೈಯಕ್ತಿಕವಾಗಿ ತಪಾಸಣೆ ನಡೆಸಿದ್ದು, ಶೇ 82.25 ಮನೆಗಳಲ್ಲಿ ನಲ್ಲಿ ಸಂಪರ್ಕಗಳನ್ನು ಸರಿಯಾಗಿ ಒದಗಿಸಲಾಗಿಲ್ಲ’ ಎಂದು ದೂರಿದರು. 

‘ಚಿತ್ರದುರ್ಗ ಜಿಲ್ಲೆಯಲ್ಲಿ ಸಂಪೂರ್ಣ ಪರಿಶೀಲನೆ ನಡೆಸಲು ಮತ್ತು ಕ್ಷೇತ್ರದ ಎಲ್ಲ ಮನೆಗಳಿಗೆ ಸುರಕ್ಷಿತ ಮತ್ತು ಗುಣಮಟ್ಟದ ಕುಡಿಯುವ ನೀರಿನ ಪೂರೈಕೆ ಖಚಿತಪಡಿಸಿಕೊಳ್ಳಲು ತಾಂತ್ರಿಕ ತಜ್ಞರ ತಂಡ ರಚಿಸಬೇಕು’ ಎಂದು ಅವರು ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.