ADVERTISEMENT

Jal Jeevan Mission: ₹16,863 ಕೋಟಿ ನೀಡಲು ನಕಾರ; ಸ್ವಂತ ಹಣ ಬಳಸಿ ಎಂದ ಕೇಂದ್ರ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 0:30 IST
Last Updated 19 ಡಿಸೆಂಬರ್ 2025, 0:30 IST
<div class="paragraphs"><p>ನೀರು</p></div>

ನೀರು

   

ನವದೆಹಲಿ: ಜಲ ಜೀವನ್‌ ಮಿಷನ್‌ನ (ಜೆಜೆಎಂ) ಮಾರ್ಗಸೂಚಿ ಪ್ರಕಾರ ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವ ಸಲ್ಲಿಸಲು ವಿಳಂಬ ಮಾಡಿರುವ ಕಾರಣ ನೀಡಿ ಕರ್ನಾಟಕಕ್ಕೆ ₹16,863 ಕೋಟಿ ಅನುದಾನ ನೀಡಲು ಕೇಂದ್ರ ಜಲಶಕ್ತಿ ಸಚಿವಾಲಯ ನಿರಾಕರಿಸಿದೆ. 

ಗ್ರಾಮೀಣ ‍ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಿರುವ ಈ ಯೋಜನೆಗೆ ಜಲಶಕ್ತಿ ಸಚಿವಾಲಯವು ರಾಜ್ಯಕ್ಕೆ 2019ರಿಂದ 2025ರ ಅವಧಿಗೆ ₹28,623 ಕೋಟಿ (ಕೇಂದ್ರದ ಪಾಲು) ಹಂಚಿಕೆ ಮಾಡಿತ್ತು. ಆದರೆ, ಈವರೆಗೆ ₹11,760 ಕೋಟಿ ಬಿಡುಗಡೆ ಮಾಡಿದೆ.

ADVERTISEMENT

ಬಾಕಿ ಅನುದಾನ ಬಿಡುಗಡೆಗೆ ಒತ್ತಾಯಿಸಿ ರಾಜ್ಯ ಸರ್ಕಾರವು ಪ್ರಧಾನಿ ಅವರಿಗೆ ಮನವಿ ಮಾಡಿತ್ತು ಹಾಗೂ ಸಚಿವಾಲಯಕ್ಕೆ ಪತ್ರ ಬರೆದಿತ್ತು. 

ಕೇಂದ್ರದ ಪಾಲಿನ ಅನುದಾನವನ್ನು ರಾಜ್ಯಕ್ಕೆ ಯಾಕೆ ನೀಡುತ್ತಿಲ್ಲ ಎಂಬ ಬಗ್ಗೆ ಜಲಶಕ್ತಿ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಲೋಕ ಸಭೆಯಲ್ಲಿ ಗುರುವಾರ ಸವಿಸ್ತಾರವಾದ ಉತ್ತರ ನೀಡಿದ್ದಾರೆ. ಕೋಲಾರ ಸಂಸದ ಎಂ. ಮಲ್ಲೇಶಬಾಬು ಕೇಳಿರುವ ಪ್ರಶ್ನೆಗೆ ಉತ್ತರ ನೀಡಿರುವ ಅವರು, ‘ಕೇಂದ್ರದ ನಿಧಿಯನ್ನು ಅನುಮೋದಿತ ಮಿಷನ್ ಅವಧಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ಕರ್ನಾಟಕ ಸರ್ಕಾರಕ್ಕೆ ಸ್ಪಷ್ಟಪಡಿಸಲಾಗಿದೆ. ರಾಜ್ಯ ಸರ್ಕಾರವು ಸ್ವಂತ ಸಂಪನ್ಮೂಲಗಳಿಂದ ಯೋಜನೆಯ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಲಹೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ. 

ಸಚಿವರ ಉತ್ತರದಲ್ಲೇನಿದೆ:

ಕೇಂದ್ರ ಸಚಿವ ಸಂಪುಟವು 2019-20ರಿಂದ 2023-24 ರವರೆಗೆ ಜಲ ಜೀವನ್ ಮಿಷನ್ ಅನುಷ್ಠಾನಕ್ಕೆ ಅನುಮೋದನೆ ನೀಡಿತ್ತು. ಈ ಅವಧಿಯಲ್ಲಿ, ರಾಜ್ಯ ಸರ್ಕಾರಗಳು ಯೋಜನೆ ರೂಪಿಸಿ ಅನುಮೋದನೆ ಪಡೆದು, ಅನುಷ್ಠಾನ ಮಾಡಬೇಕಿತ್ತು. ರಾಜ್ಯಗಳಲ್ಲಿ ಅನಗತ್ಯವಾಗಿ ಹಣ ಪೋಲಾಗುವುದನ್ನು ತಪ್ಪಿಸಲು ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಿಗೆ ‘ಸಮಯಕ್ಕೆ ಸರಿಯಾಗಿ ಹಣ ಪಾವತಿ’ ತತ್ವದ ಅಡಿಯಲ್ಲಿ ಹಣಕಾಸು ಸಚಿವಾಲಯದ ಸುತ್ತೋಲೆಗಳ ಪ್ರಕಾರ ಹಣ ಬಿಡುಗಡೆ ಮಾಡಲಾಗಿತ್ತು. 

ರಾಜ್ಯಕ್ಕೆ ₹28,623.89 ಕೋಟಿ ಹಂಚಿಕೆ ಮಾಡಲಾಗಿತ್ತು. ಆದರೆ, ಎಂಒಎಫ್ ಮತ್ತು ಜೆಜೆಎಂ ಮಾರ್ಗಸೂಚಿ ಪ್ರಕಾರ ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವಗಳನ್ನು ಸಲ್ಲಿಸಲು ವಿಳಂಬ ಮಾಡಿದ ಕಾರಣಕ್ಕೆ ರಾಜ್ಯವು ಮಿಷನ್ ಅವಧಿಯಲ್ಲಿ ₹11,760 ಕೋಟಿ ಮಾತ್ರ ಪಡೆದಿದೆ. ಕೇಂದ್ರ ಸಚಿವ ಸಂಪುಟವು ಅನುಮೋದಿಸಿದ ಕೇಂದ್ರದ ಪಾಲನ್ನು ಈವರೆಗೆ ನೀಡಲಾಗಿದೆ. 

ದೇಶದಲ್ಲಿ ಯೋಜನೆಯ ಪ್ರಗತಿ ಪರಿಗಣಿಸಿ 2028ರವರೆಗೆ ಮಿಷನ್‌ ವಿಸ್ತರಿಸುವುದಾಗಿ ಕೇಂದ್ರ ಹಣಕಾಸು ಸಚಿವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಯೋಜನೆಯ ವಿಸ್ತರಣೆಗೆ ಸಕ್ಷಮ
ಪ್ರಾಧಿಕಾರದಿಂದ ಅನುಮೋದನೆ ಪಡೆದ ನಂತರ ಮತ್ತು ಮಾರ್ಗಸೂಚಿ ಪ‍್ರಕಾರ ಕೇಂದ್ರದ ಅನುದಾನವನ್ನು ಅರ್ಹ ರಾಜ್ಯಗಳಿಗೆ ಬಿಡುಗಡೆ ಮಾಡಲು ಅವಕಾಶ ಇದೆ. 

ಭದ್ರಾ ಮೇಲ್ಡಂಡೆ: ವೆಚ್ಚದ ವಿವರ ಕೇಳಿದ ಜಲ ಆಯೋಗ 

ಭದ್ರಾ ಮೇಲ್ಡಂಡೆ ಯೋಜನೆಗೆ ಈವರೆಗೆ ಮಾಡಿರುವ ವೆಚ್ಚ ಯೋಜನೆಗೆ ಭವಿಷ್ಯದಲ್ಲಿ ಬೇಕಾಗುವ ಮೊತ್ತ ಯೋಜನೆಯ ನಕ್ಷೆ ಸೇರಿದಂತೆ ಸಮಗ್ರ ವಿವರ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಜಲ ಆಯೋಗ ಸೂಚಿಸಿದೆ. 

ಈ ಸಂಬಂಧ ಜಲಸಂಪನ್ಮೂಲ ಇಲಾಖೆಗೆ ಜಲ ಆಯೋಗವು ನವೆಂಬರ್‌ 28ರಂದು ಪತ್ರ ಬರೆದಿದೆ.  ಲೋಕಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಬಳ್ಳಾರಿ ಸಂಸದ ಇ.ತುಕಾರಾಂ ಕೇಳಿರುವ ಪ್ರಶ್ನೆಗೆ ಉತ್ತರ ನೀಡಿರುವ ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ ‘ಈ ಯೋಜನೆಯನ್ನು ಪ್ರಸ್ತುತ ಕೇಂದ್ರ ಸರ್ಕಾರದ ಯಾವುದೇ ಯೋಜನೆಯಡಿ ಸೇರಿಸಿಲ್ಲ. ಹಾಗಾಗಿ ಇಲ್ಲಿಯವರೆಗೆ ಯೋಜನೆಗೆ ಕೇಂದ್ರದಿಂದ ಯಾವುದೇ ಹಣ ಬಿಡುಗಡೆ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. 

₹16125.48 ಕೋಟಿ ಅಂದಾಜು ವೆಚ್ಚದ ಈ ಯೋಜನೆಯನ್ನು ಹಣಕಾಸು ಸಚಿವಾಲಯದ ಸಾರ್ವಜನಿಕ ಹೂಡಿಕೆ ಮಂಡಳಿ 2022ರ ಅಕ್ಟೋಬರ್‌ನಲ್ಲಿ ಮೌಲ್ಯಮಾಪನ ಮಾಡಿತ್ತು. ಪ್ರಸ್ತುತ ಯೋಜನೆಯ ಪರಿಷ್ಕೃತ ವೆಚ್ಚ ಮತ್ತು ಲಾಭ–ವೆಚ್ಚ ಅನುಪಾತದೊಂದಿಗೆ ಹೊಸ ಪ್ರಸ್ತಾವವನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.  ಭದ್ರಾ ಮೇಲ್ಡಂಡೆ ಯೋಜನೆಗೆ ಅಕ್ಟೋಬರ್ ಅಂತ್ಯದವರೆಗೆ ರಾಜ್ಯ ಸರ್ಕಾರ ₹11051 ಕೋಟಿ ವೆಚ್ಚ ಮಾಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.