ADVERTISEMENT

ಜಲಜೀವನ್‌ ಮಿಷನ್‌ | ರಾಜ್ಯಕ್ಕೆ ₹570 ಕೋಟಿಯಷ್ಟೇ ಬಿಡುಗಡೆ: ಪ್ರಭಾ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2025, 10:07 IST
Last Updated 21 ಮಾರ್ಚ್ 2025, 10:07 IST
ಪ್ರಭಾ ಮಲ್ಲಿಕಾರ್ಜುನ್‌
ಪ್ರಭಾ ಮಲ್ಲಿಕಾರ್ಜುನ್‌   

ನವದೆಹಲಿ: ಕರ್ನಾಟಕದಲ್ಲಿ ಜಲಜೀವನ್‌ ಮಿಷನ್‌ ಅನುಷ್ಠಾನಕ್ಕೆ ಕೇಂದ್ರ ಸರ್ಕಾರವು 2024–25ರಲ್ಲಿ ₹3804 ಕೋಟಿ ಹಂಚಿಕೆ ಮಾಡಿತ್ತು. ಆದರೆ, ₹570 ಕೋಟಿಯಷ್ಟೇ ಬಿಡುಗಡೆ ಮಾಡಿದೆ. ಇದರಿಂದಾಗಿ, ಯೋಜನೆ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಆಕ್ರೋಶ ವ್ಯಕ್ತಪಡಿಸಿದರು. 

ಲೋಕಸಭೆಯಲ್ಲಿ ಶುಕ್ರವಾರ ನಡೆದ ಜಲಶಕ್ತಿ ಸಚಿವಾಲಯದ ಬೇಡಿಕೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ರಾಜ್ಯ ಸರ್ಕಾರವು 2024–25ರಲ್ಲಿ ₹4977 ಕೋಟಿ ಖರ್ಚು ಮಾಡಿದೆ. ಅನುದಾನ ಬಿಡುಗಡೆಗೆ ಒತ್ತಾಯಿಸಿ ಹಲವು ಸಲ ಮನವಿ ಸಲ್ಲಿಸಿ ಹೋರಾಟ ಮಾಡಿದರೂ ಪ್ರಯೋಜನ ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 

‘ಜಲಜೀವನ್‌ ಮಿಷನ್‌ ಅನುಷ್ಠಾನದಲ್ಲಿ ಕರ್ನಾಟಕ 22ನೇ ಸ್ಥಾನದಲ್ಲಿದೆ. ಶೇ 80ರಷ್ಟು ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ ಒದಗಿಸಲಾಗಿದೆ ಎಂದು ಜಲಶಕ್ತಿ ಸಚಿವಾಲಯ ಹೇಳಿಕೊಳ್ಳುತ್ತಿದೆ. ಆದರೆ, ಶೇ 62ರಷ್ಟು ನಳ್ಳಿಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಟಲ್‌ ಭೂಜಲ ಯೋಜನೆಯ ಬಜೆಟ್‌ ಶೇ 57ರಷ್ಟು ಮಾತ್ರ ಬಳಕೆ ಆಗಿದೆ’ ಎಂದು ಅವರು ಗಮನ ಸೆಳೆದರು. 

ADVERTISEMENT

‘ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಮಧ್ಯ ಕರ್ನಾಟಕದ ನಾಲ್ಕು ಜಿಲ್ಲೆಗಳ 2 ಲಕ್ಷ ಹೆಕ್ಟೇರ್ ಭೂಮಿಗೆ ನೀರುಣಿಸಲಾಗುತ್ತದೆ. ಈ ಯೋಜನೆಗೆ ₹5300 ಕೋಟಿ ಅನುದಾನ ನೀಡುವುದಾಗಿ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಪ್ರಕಟಿಸಿತ್ತು. ಎರಡೂ ವರ್ಷ ಕಳೆದರೂ ನಯಾಪೈಸೆ ಅನುದಾನ ಬಿಡುಗಡೆ ಆಗಿಲ್ಲ’ ಎಂದು ಅವರು ದೂರಿದರು. 

‘ಮೇಕೆದಾಟು ಯೋಜನೆ ನಮ್ಮ ಹಕ್ಕು. ಕೇಂದ್ರ ಜಲಶಕ್ತಿ ಹಾಗೂ ಅರಣ್ಯ ಸಚಿವಾಲಯದ ಅನುಮೋದನೆಗೆ ಪ್ರಸ್ತಾವ ಸಲ್ಲಿಸಿ ಆರು ವ‌ರ್ಷಗಳು ಕಳೆದಿವೆ. ಅದೇ ರೀತಿ ಮಹಾದಾಯಿ ನ್ಯಾಯಮಂಡಳಿಯು ರಾಜ್ಯಕ್ಕೆ ನೀರು ಹಂಚಿಕೆ ಮಾಡಿದೆ.  ಪರಿಸರ ಇಲಾಖೆ ಅನುಮತಿ ನೀಡುತ್ತಿಲ್ಲ. ಗೋದಾವರಿ–ಕೃಷ್ಣಾ– ಕಾವೇರಿ ಜೋಡಣೆಯ ಯೋಜನೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಇದನ್ನು ಸರಿಪಡಿಸಬೇಕು’ ಎಂದು ಅವರು ಆಗ್ರಹಿಸಿದರು. 

‘ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಶೇ 70ರಷ್ಟು ನೀರು ಕಲುಷಿತಗೊಂಡಿದೆ. ಬಜೆಟ್‌ನಲ್ಲಿ ಹಂಚಿಕೆ ಮಾಡಿರುವ ಅನುದಾನವನ್ನು ಬಳಸಿಕೊಳ್ಳುವಲ್ಲಿ ಜಲಶಕ್ತಿ ಸಚಿವಾಲಯ ವಿಫಲವಾಗಿದೆ’ ಎಂದು ಅವರು ಆರೋಪಿಸಿದರು. 

‘ಕರ್ನಾಟಕವು ₹100 ತೆರಿಗೆ ಪಾವತಿಸಿದರೆ ಕೇಂದ್ರದಿಂದ ವಾಪಸ್‌ ಬರುವುದು ₹13 ಮಾತ್ರ. ಅನುದಾನ ಹಂಚಿಕೆ ಹಾಗೂ ಯೋಜನೆಗಳ ಅನುಷ್ಠಾನದ ವಿಷಯದಲ್ಲಿ ರಾಜ್ಯಕ್ಕೆ ಖಾಲಿ ಚೊಂಬು ಆಗಿದೆ’ ಎಂದು ಅವರು ಕಿಡಿಕಾರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.