ADVERTISEMENT

ಜನಾರ್ದನ ರೆಡ್ಡಿ ಪಕ್ಷದಿಂದ ಐದು ಕ್ಷೇತ್ರಕ್ಕೆ ಟಿಕೆಟ್ ಘೋಷಣೆ

ಕೆಆರ್‌ಪಿಪಿ ಅಭ್ಯರ್ಥಿಗಳ ಹೆಸರು ಪ್ರಕಟ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 17:58 IST
Last Updated 16 ಫೆಬ್ರುವರಿ 2023, 17:58 IST
ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿ   

ಗಂಗಾವತಿ (ಕೊಪ್ಪಳ ಜಿಲ್ಲೆ): ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಗುರುವಾರ ಇಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡಿದರು.

‘ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಕ್ಷೇತ್ರಕ್ಕೆ ಟಿ. ಧರೆಪ್ಪ ನಾಯಕ, ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರಕ್ಕೆ ಡಾ. ಚಾರುಲ್ ದಾಸರಿ, ವಿಜಯಪುರ ಜಿಲ್ಲೆಯ ನಾಗಠಾಣ ಕ್ಷೇತ್ರಕ್ಕೆ ಶ್ರೀಕಾಂತ್, ರಾಯಚೂರು ಜಿಲ್ಲೆಯ ಸಿಂಧನೂರು ಕ್ಷೇತ್ರಕ್ಕೆ ನೆಕ್ಕಂಟಿ ಮಲ್ಲಿಕಾರ್ಜುನ ಮತ್ತು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರಕ್ಕೆ ಎಚ್‌. ಮಹೇಶ್ ಸ್ಪರ್ಧಿಸುವರು’ ಎಂದು ಜನಾರ್ದನ ರೆಡ್ಡಿ ತಿಳಿಸಿದರು.

‘ಕೋಲಾರ, ತುಮಕೂರು ಮತ್ತು ಉತ್ತರ ಕರ್ನಾಟಕ ಸೇರಿ ಒಟ್ಟು 40 ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವೆ. ಆಂತರಿಕ ಸಮೀಕ್ಷೆ ನಂತರವಷ್ಟೇ ಅಭ್ಯರ್ಥಿಗಳನ್ನು ಘೋಷಿಸುತ್ತಿರುವೆ. ನಾನು ಗಂಗಾವತಿಯಿಂದ ಸ್ಪರ್ಧಿಸುವೆ. ಚುನಾವಣೆ ಬಳಿಕ ಬೇರೆ ಪಕ್ಷದ ಜೊತೆ ಕೈ ಜೋಡಿಸುವುದು ಅನಿವಾರ್ಯ’ ಎಂದು ಅವರು ವಿವರಿಸಿದರು.

ADVERTISEMENT

ಗಂಗಾವತಿಯಿಂದ ಬಿ. ಶ್ರೀರಾಮುಲು ಸ್ಪರ್ಧಿಸುವ ಸಾಧ್ಯತೆಯಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಯಾರೇ ಸ್ಪರ್ಧಿಸಿದರೂ ಯೋಚಿಸುವುದಿಲ್ಲ. ಕೆಲ ವಿಷಯಗಳನ್ನು ಮುಂದಿನ ದಿನಗಳಲ್ಲಿ ತಿಳಿಸುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.