
ಬಳ್ಳಾರಿ: ನಗರ ಹೊರವಲಯದ ರುಕ್ಮಣಮ್ಮ ಚೆಂಗಾರೆಡ್ಡಿ (ಜಿ–ಸ್ಕವೇರ್) ಬಡಾವಣೆಯಲ್ಲಿರುವ ಶಾಸಕ ಗಾಲಿ ಜನಾರ್ದನ ರೆಡ್ಡಿ ನಿವಾಸಕ್ಕೆ ಶುಕ್ರವಾರ ಸಂಜೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಕಿಟಕಿ ಮತ್ತು ಬಾಗಿಲುಗಳಿಗೆ ಹಾನಿಯಾಗಿದೆ.
ಸುಮಾರು 80 ಎಕರೆ ವ್ಯಾಪ್ತಿಯ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ಜಂಟಿ ಒಡೆತನದ ಬಡಾವಣೆಯಲ್ಲಿ ಒಟ್ಟು 9,400 ಚದರಡಿಯ 60x50 ವಿಸ್ತೀರ್ಣದ ವಿಲ್ಲಾ ಮಾದರಿ ಮನೆಯನ್ನು ಜನಾರ್ದನ ರೆಡ್ಡಿ 2011ರಲ್ಲಿ ₹4 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದರು. ಮನೆಯಲ್ಲಿ ಯಾರೂ ವಾಸಿಸುತ್ತಿರಲಿಲ್ಲ. ಬಡಾವಣೆಯಲ್ಲಿ ನಿವೇಶನ ಕೊಳ್ಳುವ ಗ್ರಾಹಕರಿಗೆ ಈ ಮನೆಯನ್ನು ಮಾದರಿಯಾಗಿ ತೋರಿಸಲಾಗುತಿತ್ತು.
ಬೆಂಕಿ ಕಾಣಿಸುತ್ತಲೇ ಬಡಾವಣೆಯ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸಿದ್ದಾರೆ. ಅಷ್ಟರಲ್ಲಿ ಮನೆಯೊಳಗಿನ ಮರದ ಪರಿಕರಗಳು, ಕಿಟಕಿ, ಕಂಬಗಳು ಅಗ್ನಿಗೆ ಆಹುತಿಯಾಗಿದ್ದವು.
ಸ್ಥಳಕ್ಕೆ ಭೇಟಿ ನೀಡಿದ್ದ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ‘ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರೇ ಜನಾರ್ದನ ರೆಡ್ಡಿ ಮನೆಗೆ ಬೆಂಕಿ ಹಚ್ಚಿಸಿದ್ದಾರೆ. ಬ್ಯಾನರ್ ಗಲಭೆ ವೇಳೆ ರೆಡ್ಡಿಯ ಮನೆಯನ್ನು ಸುಟ್ಟು ಹಾಕುವುದಾಗಿ ಹೇಳಿದ್ದರು. ಜನಾರ್ದನ ರೆಡ್ಡಿಯ ನಿವಾಸ ಸುಟ್ಟು ಹಾಕಲು ಸಾಧ್ಯವಾಗದೇ, ಬಡಾವಣೆಯಲ್ಲಿನ ಮಾದರಿ ಮನೆಗೆ ಬೆಂಬಲಿಗರ ಮೂಲಕ ಬೆಂಕಿ ಹಚ್ಚಿಸಿದ್ದಾರೆ’ ಎಂದು ದೂರಿದರು. ಮನೆಗೆ ಬೆಂಕಿ ಹಚ್ಚಿದ ಎನ್ನಲಾದ ಯುವಕನ ಚಿತ್ರವನ್ನು ಮಾಧ್ಯಮದವರಿಗೆ ತೋರಿಸಿದರು.
‘ದುಷ್ಕೃತ್ಯ ನಡೆಸಿದವರನ್ನು ತಕ್ಷಣವೇ ಬಂಧಿಸಬೇಕು. ಸಮಗ್ರ ತನಿಖೆ ಆಗಬೇಕು. ಶಾಸಕ ಜನಾರ್ದನ ರೆಡ್ಡಿ ಬೆಂಗಳೂರಿನಲ್ಲಿದ್ದು, ಬಳ್ಳಾರಿಗೆ ಬರುತ್ತಿದ್ದಾರೆ’ ಎಂದು ಅವರು ಹೇಳಿದರು.
ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ್ ಸೇರಿ ಪೊಲೀಸ್ ಸಿಬ್ಬಂದಿ, ವಿಧಿ ವಿಜ್ಞಾನ ತಂಡದ ಸದಸ್ಯರು ಭೇಟಿ ನೀಡಿ, ಪರಿಶೀಲಿಸಿದರು.
ಘಟನೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದ ಗಡಿಗಿ ಚೆನ್ನಪ್ಪ (ರಾಯಲ್) ವೃತ್ತದ ಬಳಿ ಶುಕ್ರವಾರ ಪ್ರತಿಭಟನೆ ಆರಂಭಿಸಿದರು.
‘ಬಳ್ಳಾರಿಗೆ ಬೆಂಕಿ ಹಚ್ಚುವುದಾಗಿ ಶಾಸಕ ನಾರಾ ಭರತ್ ರೆಡ್ಡಿ ಹೇಳಿದ್ದರು. ಅದರಂತೆಯೇ ನನ್ನ ಮನೆಗೆ ಬೆಂಕಿ ಹಚ್ಚಲಾಗಿದೆ. ಬೆಂಕಿ ಇಟ್ಟವರ ಚಿತ್ರವನ್ನು ಬಡಾವಣೆ ಭದ್ರತಾ ಸಿಬ್ಬಂದಿ ಕ್ಲಿಕ್ಕಿಸಿದ್ದಾರೆ. ಇವರೆಲ್ಲರೂ ಬಳ್ಳಾರಿಯ ಕೌಲ್ ಬಜಾರ್ ಗೌತಮ್ ನಗರ ಮತ್ತು ಸುತ್ತಮುತ್ತಲ ಪ್ರದೇಶದವರು. ಈ ಚಿತ್ರ ಆಧರಿಸಿ ಆರೋಪಿಗಳನ್ನು ಬಂಧಿಸಲು ಪೊಲೀಸ್ ಇಲಾಖೆಗೆ ಒಂದು ಗಂಟೆ ಸಾಕು. ಏನು ಮಾಡುತ್ತಾರೆ ನೋಡೋಣ’ ಎಂದು ಶಾಸಕ ಜನಾರ್ದನ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.