ADVERTISEMENT

ರೆಡ್ಡಿ ಮನೆಗೆ ಬೆಂಕಿ | ಹುಡುಗರ ರೀಲ್ಸ್‌ ಕಾರಣ: ಎಸ್‌ಪಿ ಸುಮನ್‌ ಪೆನ್ನೇಕರ್‌

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 5:56 IST
Last Updated 24 ಜನವರಿ 2026, 5:56 IST
<div class="paragraphs"><p>ಮನೆ ಪರಿಶೀಲನೆ ನಡೆಸಿದ ಬಳ್ಳಾರಿ ಎಸ್‌ಪಿ ಸುಮನ್‌ ಪೆನ್ನೇಕರ್‌</p></div>

ಮನೆ ಪರಿಶೀಲನೆ ನಡೆಸಿದ ಬಳ್ಳಾರಿ ಎಸ್‌ಪಿ ಸುಮನ್‌ ಪೆನ್ನೇಕರ್‌

   

ಬಳ್ಳಾರಿ: ‘ರೀಲ್ಸ್‌, ಫೋಟೊ ಶೂಟ್‌ ಮಾಡಲು ಜನಾರ್ದನ ರೆಡ್ಡಿ ಪತ್ನಿ ಅರುಣಾ ಅವರ ಒಡೆತನದ ಜಿ ಸ್ಕ್ವೇರ್‌ನ ಮಾದರಿ ಮನೆಗೆ ಬಂದಿದ್ದ ಹುಡುಗರು ಹೊತ್ತಿಸಿದ ಬೆಂಕಿಯಿಂದ ಅಗ್ನಿ ಅವಘಡ ಸಂಭವಿಸಿದೆ. ಆದರೂ ಪ್ರಕರಣದ ಕೂಲಂಕಷ ತನಿಖೆ ನಡೆಸಲಾಗುವುದು’ ಎಂದು ಬಳ್ಳಾರಿಯ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಪೆನ್ನೇಕರ್‌ ತಿಳಿಸಿದ್ದಾರೆ. 

ಬೆಂಕಿಗೆ ಆಹುತಿಯಾದ ಮನೆಯನ್ನು ಶನಿವಾರ ಬೆಳಗ್ಗೆ ಪರಿಶೀಲನೆ ಮಾಡಿದ ಅವರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.  ‘ಮನೆ ಹಲವು ವರ್ಷಗಳಿಂದ ಪಾಳು ಬಿದ್ದಿದೆ. ಮನೆಯಲ್ಲಿ ಕಸ ಬಿದ್ದಿದೆ, ಗಾಜುಗಳು ಪುಡಿಯಾಗಿವೆ. ಇಲ್ಲಿ ಯಾರೂ ವಾಸವಿಲ್ಲ. ಸಿಸಿಟಿವಿಯೂ ಇಲ್ಲ. ಭದ್ರತೆಗೆಂದು ಭದ್ರತಾ ಸಿಬ್ಬಂದಿಯನ್ನೂ ಇಲ್ಲಿ ನಿಯೋಜಿಸಿಲ್ಲ ಎಂಬುದು ಕಂಡು ಬಂದಿದೆ. ಅಗ್ನಿ ಅವಘಡ ಪ್ರಕರಣದ ತನಿಖೆಯಲ್ಲಿ ನಾವು ಈಗಾಗಲೇ ಒಂದು ಹಂತಕ್ಕೆ ತಲುಪಿದ್ದೇವೆ. ನಮಗೆ ಅನುಮಾನ ಇದ್ದ 8 ಮಂದಿಯನ್ನು ಬಂದಿಸಿದ್ದೇವೆ. ಇದರಲ್ಲಿ 6 ಮಂದಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರಿದ್ದಾರೆ. ಇದರಲ್ಲಿ ಹಲವರು ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಾಗಿದ್ದು, ಕೆಲವರು ಶಾಲೆ ಬಿಟ್ಟವರಿದ್ದಾರೆ. ಫ್ಯಾನ್ಸಿ ಸ್ಟೋರ್‌ಗಳಲ್ಲಿ ಕೆಲಸ ಮಾಡುವವರಾಗಿದ್ದಾರೆ. ಇಬ್ಬರು ಮುಂಬೈನಿಂದ ಬಂದವರೂ ಇದ್ದಾರೆ. ಇವರೆಲ್ಲರೂ ಕೂಲಿ ಕಾರ್ಮಿಕರ, ಚಾಲಕರ ಮಕ್ಕಳು. ಯಾವುದೇ ಉದ್ದೇಶ ಇಟ್ಟುಕೊಂಡು ಈ ಕೃತ್ಯ ಮಾಡಿರುವ ಬಗ್ಗೆ ನಮಗೆ ಖಚಿತವಾಗಿಲ್ಲ. ಆದರೂ ನಾವು ಯಾವುದೇ ಸಾಧ್ಯತೆಗಳನ್ನು ಅಲ್ಲಗೆಳೆಯುವುದಿಲ್ಲ. ಸಮಗ್ರ ತನಿಖೆ ಮಾಡುತ್ತೇವೆ’ ಎಂದರು.  

ADVERTISEMENT

‘ರೀಲ್ಸ್‌, ಫೋಟೊ ಶೂಟ್‌ ಮಾಡಲು ಹುಡುಗರ ಗುಂಪು ಈ ಮನೆಗೆ ಆಗಾಗ ಬರುತ್ತಿತ್ತು. ಬೇರೆ ಬೆರೆಯವರೂ ಇಲ್ಲಿಗೆ ಬಂದು ಹೋಗುತ್ತಿದ್ದರು. ಬಂಧಿತರ ಮೊಬೈಲ್‌ ಪರಿಶೀಲನೆಯಿಂದ ನಮಗೆ ಇದೆಲ್ಲವೂ ಗೊತ್ತಾಗಿದೆ. ಇದಕ್ಕೆ ಪೂರಕವಾಗಿ ಮನೆಯಲ್ಲಿ ಸಿಗರೇಟ್‌ ತುಣುಕುಗಳು, ಬೆಂಕಿಪೊಟ್ಟಣಗಳು ಅಲ್ಲಲ್ಲಿ ಬಿದ್ದಿರುವುದು ಕಂಡುಬಂದಿದೆ. ಗುಂಪಿನಲ್ಲಿದ್ದ ಬಾಲಕನೊಬ್ಬ ಮನೆಯಲ್ಲಿದ್ದ ವಸ್ತುವೊಂದಕ್ಕೆ ಬೆಂಕಿ ಹೊತ್ತಿಸಿದ್ದಾನೆ. ಆದರೆ, ಬೆಂಕಿ ನಿಯಂತ್ರಣಕ್ಕೆ ಬಾರದೆ ಇಡೀ ಮನೆಗೆ ವ್ಯಾಪಿಸಿದೆ. ಇನ್ನೂ ಆಳವಾಗಿ ತನಿಖೆ ಮಾಡುತ್ತೇವೆ. ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸುತ್ತೇವೆ. ವಿಧಿ ವಿಜ್ಞಾನ ತಜ್ಞರು ಸಾಕ್ಷಿ ಸಂಗ್ರಹ ಕೆಲಸ ಇಂದು ಆರಂಭಿಸಿದ್ದಾರೆ’ ಎಂದು ತಿಳಿಸಿದರು.  

‘ದೂರಿನಲ್ಲಿ ಹೇಳಿರುವುದಂತೆ ಯಾವುದೇ ವಸ್ತುಗಳು ಮನೆಯಲ್ಲಿದ್ದ ಇದ್ದ ಕುರುಹುಗಳು ನಮಗೆ ಸಿಕ್ಕಿಲ್ಲ. ಮನೆಯಲ್ಲಿ ಈ ಹಿಂದೆ ವಸ್ತುಗಳಿದ್ದಿರಬಹುದು. ಅದನ್ನು ಕದ್ದುಕೊಂಡು ಹೋಗಿರುವ ಸಾಧ್ಯತೆಗಳಿವೆ. ಆದರೆ, ಈಗಂತೂ ಯಾವುದೇ ವಸ್ತುಗಳು ಸಿಕ್ಕಿಲ್ಲ’ ಎಂದು ಸ್ಪಷ್ಟಪಡಿಸಿದರು. . 

‘ಜನಾರ್ದನ ರೆಡ್ಡಿ ಅವರ ಲೇಔಟ್‌ನಲ್ಲಿ ಯಾವುದೇ ಭದ್ರತೆ, ಸಿಸಿಟಿವಿಯೂ ಇರಲಿಲ್ಲ. ಇಂಥ ವ್ಯವಸ್ಥೆ ಮಾಡಿಕೊಳ್ಳುವ ಜವಾಬ್ದಾರಿ ಅವರದ್ದೂ ಆಗಿರುತ್ತದೆ. ನಗರದ ಹೊರವಲಯದ ಲೇಔಟ್‌ಗಳಲ್ಲಿ ಅನೈತಿಕ ಚಟುವಟಿಕೆಗಳು ನಡಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಅದರ ನಿಯಂತ್ರಣಕ್ಕೆ ರಾತ್ರಿ ಗಸ್ತು, ಪೊಲೀಸ್‌ ಭದ್ರತೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುತ್ತೇವೆ’ ಎಂದರು.  

‘ಜನಾರ್ದನ ರೆಡ್ಡಿ ಅವರ ಮನೆಗೆ ಬೆಂಕಿ ಹಾಕಿರುವುದಾಗಿ ಶುಕ್ರವಾರ ರಾತ್ರಿ 10.30ಕ್ಕೆ ಗ್ರಾಮೀಣ ಠಾಣೆಗೆ ದೂರು ಬಂದಿತ್ತು. ಅದರಂತೆ ಪ್ರಕರಣ ದಾಖಲಾಗಿದೆ. ದೂರಿನಲ್ಲಿ ನಿರ್ದಿಷ್ಟವಾಗಿ ಯಾರ ಹೆಸರನ್ನೂ ಉಲ್ಲೇಖಿಸಿರಲಿಲ್ಲ’ ಎಂದು ಸುಮನ್‌ ಪೆನ್ನೇಕರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.