ADVERTISEMENT

ಒಂದು ಪೈಸೆ ಅಕ್ರಮ ಹಣವಾದ್ರೂ ಸಿಕ್ತಾ?: ಸಿದ್ದರಾಮಯ್ಯಗೆ ಜನಾರ್ದನ ರೆಡ್ಡಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 6:50 IST
Last Updated 29 ಅಕ್ಟೋಬರ್ 2018, 6:50 IST
ಗಣಿ ಉದ್ಯಮಿ ಜಿ.ಜನಾರ್ದನ ರೆಡ್ಡಿ
ಗಣಿ ಉದ್ಯಮಿ ಜಿ.ಜನಾರ್ದನ ರೆಡ್ಡಿ   

ಮೊಳಕಾಲ್ಮುರು: ‘ನೀನು (ಸಿದ್ದರಾಮಯ್ಯ) ಮುಖ್ಯಮಂತ್ರಿಯಾಗಿದ್ದಾಗ ನನ್ನ ಮನೆಗಳ ಮೇಲೆ ದಾಳಿ ಮಾಡಿಸಿದಿ. ಒಂದು ಪೈಸೆ ಅಕ್ರಮ ಹಣವಾದರೂ ಸಿಕ್ಕಿತೇ?

ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಗಣಿ ಉದ್ಯಮಿ ಜಿ.ಜನಾರ್ದನ ರೆಡ್ಡಿ ಕೇಳಿದ ಪ್ರಶ್ನೆ ಇದು.

ಬಳ್ಳಾರಿ ಲೋಕಸಭಾ ಉಪಚುನಾವಣೆಯ ಪ್ರಚಾರಕ್ಕೆ ಶಾಸಕ ಬಿ.ರಾಮುಲು ಅವರಿಗೆ ಸಾಥ್‌ ನೀಡಲು ಗಡಿ ಪ್ರದೇಶವಾದ ಮೊಳಕಾಲ್ಮೂರಿನಲ್ಲಿ ವಾಸ್ತವ್ಯ ಹೂಡಿರುವ ಅವರು, ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ADVERTISEMENT

‘ಸಿದ್ದರಾಮಯ್ಯ ಅವರು ಅಕ್ರಮ ಗಣಿಗಾರಿಕೆ ನೆಪದಲ್ಲಿ ಪಾದಯಾತ್ರೆ ಮಾಡಿಕೊಂಡು ಬಳ್ಳಾರಿಗೆ ಬಂದು ಸುಳ್ಳು ಆರೋಪ ಮಾಡಿದರು. ಸತ್ಯ ಶೋಧನೆ ಹೆಸರಲ್ಲಿ ಅಸತ್ಯ ಶೋಧನೆ ವರದಿ ಪಡೆದು ನಾಲ್ಕು ವರ್ಷ ಬಂಧನದಲ್ಲಿಟ್ಟರು. ₹ 1 ಲಕ್ಷ ಕೋಟಿ ಹಣವನ್ನು ರೆಡ್ಡಿ ಕುಟುಂಬ ಲೂಟಿ ಮಾಡಿದ್ದು, ಅದನ್ನು ವಾಪಸ್ ತರುತ್ತೇವೆಂದು ಪ್ರಚಾರ ಮಾಡಿದರು. ಮುಖ್ಯಮಂತ್ರಿಯಾದ ಬಳಿಕ ನನ್ನಿಂದ ಎಷ್ಟು ಹಣ ಜಪ್ತಿ ಮಾಡಿದಿರಿ. ನಿಮಗೆ ನಾಚಿಗೆ ಆಗುವುದಿಲ್ಲವೇ’ ಎಂದು ವಾಗ್ದಾಳಿ ನಡೆಸಿದರು.

‘ಐದು ವರ್ಷ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ ಸಿದ್ದರಾಮಯ್ಯ ಬಳ್ಳಾರಿಯನ್ನು ಸರ್ವನಾಶ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿ ಬಳ್ಳಾರಿಗೆ ನೀವು ಮಾಡಿದ್ದು ಏನು ಎಂಬುದನ್ನು ಮಾಧ್ಯಮದ ಎದುರು ಚರ್ಚಿಸೋಣ ಬನ್ನಿ’ ಎಂದು ಬಹಿರಂಗ ಸವಾಲು ಹಾಕಿದರು.

‘ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ನನ್ನ ಕುಟುಂಬಕ್ಕೆ ಸಾಕಷ್ಟು ತೊಂದರೆ ಕೊಟ್ಟಿದೆ. ಬೆಂಗಳೂರಿನ ನನ್ನ ನಿವಾಸದ ಸುತ್ತ ಭಯದ ವಾತಾವರಣ ನಿರ್ಮಾಣ ಮಾಡಿದೆ. ಆಪ್ತರು ಮನೆಗೆ ಬರಲು ಭಯಪಡುತ್ತಿದ್ದಾರೆ. ರಕ್ಷಣೆ ಕೋರಿದರೂ ಭದ್ರತೆ ಕಲ್ಪಿಸಿಲ್ಲ. ನೀವು ಎಷ್ಟು ಭಯಪಡಿಸಿದರೂ ನಾನು ಹೆದರುವುದಿಲ್ಲ. ಬಳ್ಳಾರಿ ಪ್ರವೇಶಿಸಲು ಅವಕಾಶ ಸಿಗದಿದ್ದರೆ ಉತ್ತರ ಕರ್ನಾಟಕದಲ್ಲಿ ವಾಸ್ತವ್ಯ ಹೂಡುತ್ತೇನೆ’ ಎಂದರು.

‘ಡಿ.ಕೆ.ಶಿವಕುಮಾರ್‌ ತಂತ್ರ–ಕುತಂತ್ರದಲ್ಲಿ ಪಿಎಚ್‌.ಡಿ ಪಡೆದಿದ್ದಾರೆ. ಅಣ್ಣ, ತಮ್ಮ, ಚಿಕ್ಕಪ್ಪ ಅಂತೆಲ್ಲ ಪ್ರಚಾರ ನಡೆಸುತ್ತಿದ್ದಾರೆ. ಹಣ ತಂದು ಬಳ್ಳಾರಿಯಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ. ನೀವು ಬಳ್ಳಾರಿಗೆ ಏನು ಮಾಡಿದ್ದೀರಿ ಎಂಬುದನ್ನು ಹೇಳಿ’ ಎಂದು ಆಗ್ರಹಿಸಿದರು.

‘ವೀರಶೈವ ಲಿಂಗಾಯತರನ್ನು ಒಡೆಯಲು ಕಾಂಗ್ರೆಸ್‌ ಪ್ರಯತ್ನಿಸಿದೆ. ಭಗವಂತ ಶಾಪ ಕೊಟ್ಟಿದ್ದರಿಂದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು. ಆರಂಭದಲ್ಲಿಯೇ ಇದನ್ನು ಪ್ರಶ್ನಿಸದ ಡಿ.ಕೆ.ಶಿವಕುಮಾರ್‌, ಲೋಕಸಭಾ ಚುನಾವಣೆಗಾಗಿ ಮತ್ತೆ ಈ ವಿಚಾರವನ್ನು ಕೆದಕಿದ್ದಾರೆ. ವೀರಶೈವ ಲಿಂಗಾಯತರು ನಿಮ್ಮನ್ನು ಕ್ಷಮಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಾಲ್ಮೀಕಿ ಪ್ರಶಸ್ತಿ ಸ್ವೀಕರಿಸಲು ಹಾಗೂ ಅವರ ಪುತ್ರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರಶಸ್ತಿ ಪ್ರದಾನ ಮಾಡಲು ವೇದಿಕೆಗೆ ಬರಲಿಲ್ಲ. ಈ ಮೂಲಕ ವಾಲ್ಮೀಕಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ’ ಎಂದು ಆರೋಪಿಸಿದರು.

**
ನಮ್ಮನ್ನು ಕಂಡರೆ ರಾಜ್ಯ ಸರ್ಕಾರಕ್ಕೆ ಭಯ. ವಿಧಾನಸೌಧಕ್ಕೆ ಬೀಗ ಹಾಕಿಕೊಂಡು ಬಂದಿದ್ದಾರೆ. ನಿಮ್ಮನ್ನು ನೋಡುವ ಭಾಗ್ಯ ಕೊನೆಗೂ ಜನರಿಗೆ ಸಿಕ್ಕಿತು
– ಜಿ.ಜನಾರ್ದನರೆಡ್ಡಿ, ಗಣಿ ಉದ್ಯಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.