ADVERTISEMENT

ಬಿ ಫಾರಂ ಕೊಟ್ಟ ತಕ್ಷಣ ಅನರ್ಹ ಶಾಸಕರು ಬಿಜೆಪಿಗೆ: ಸಚಿವ ಜೆ.ಸಿ.ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2019, 10:54 IST
Last Updated 13 ನವೆಂಬರ್ 2019, 10:54 IST
ಜೆ.ಸಿ. ಮಾಧುಸ್ವಾಮಿ
ಜೆ.ಸಿ. ಮಾಧುಸ್ವಾಮಿ   

ಬೆಳಗಾವಿ: ‘ಬಿಜೆಪಿಯಿಂದ ‘ಬಿ’ ಫಾರಂ ಕೊಟ್ಟ ತಕ್ಷಣ ಅನರ್ಹ ಶಾಸಕರು ಪಕ್ಷ ಸೇರುತ್ತಾರೆ. ಅದನ್ನು ಕೊಡುವುದು ದೊಡ್ಡವರಿಗೆ ಬಿಟ್ಟ ವಿಚಾರ’ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ವಿಧಾನಸಭಾಧ್ಯಕ್ಷರ ಹುದ್ದೆಯ ಗೌರವವನ್ನು ಸುಪ್ರೀಂ ಕೋರ್ಟ್ ಎತ್ತಿ‌ ಹಿಡಿದಿದೆ. ನ್ಯಾಯಾಲಯದ ನಿರ್ಧಾರವನ್ನು ನಾವು ಸ್ವಾಗತಿಸಲೇಬೇಕಾಗುತ್ತದೆ’ ಎಂದರು.

‘ತೀರ್ಪು ವಿಳಂಬವಾಗಿದ್ದರಿಂದ ಅನರ್ಹ ಶಾಸಕರಿಗೆ ತೀವ್ರ ಒತ್ತಡವಾಗಿತ್ತು. ಎರಡು ಮೂರು ತಿಂಗಳ ಹಿಂದೆಯೇ ತೀರ್ಪು ಬಂದಿದ್ದರೆ ಅವರು ಕ್ಷೇತ್ರದಲ್ಲಿ ಓಡಾಡಿಕೊಂಡು ಇರುತ್ತಿದ್ದರು. ಪ್ರಚಾರಕ್ಕೆ ಹೆಚ್ಚಿನ ಸಮಯ ಸಿಗುತ್ತಿತ್ತು’ ಎಂದು ಪ್ರತಿಕ್ರಿಯಿಸಿದರು.

‘ಈಗ ಬಂದ ಬೇರೆಯವರಿಗೆ ಟಿಕೆಟ್ ಕೊಟ್ಟರೆ, ಪಕ್ಷ ಬೆಳೆಸಿದ ನಾವೇನು ಮಾಡಬೇಕು ಎನ್ನುವ ಅಸಮಾಧಾನ ಕೆಲವು ಕ್ಷೇತ್ರಗಳ ಮುಖಂಡರಲ್ಲಿದೆ. ಇದೇ ವೇಳೆ ರಾಜ್ಯದಲ್ಲಿ ಅಧಿಕಾರ ಮತ್ತು ಪಕ್ಷ ಉಳಿಸಿಕೊಳ್ಳುವುದಕ್ಕೆ ಪ್ರಯತ್ನ ನಡೆಸಬೇಕಾಗುತ್ತದೆ. ಇದಕ್ಕಾಗಿ ಕೆಲವರು ರಾಜಿ ಮಾಡಿಕೊಳ್ಳಲೇಬೇಕಾಗುತ್ತದೆ. ಅದನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆಂದು ಭಾವಿಸುತ್ತೇನೆ’ ಎಂದರು.

‘ಬಂಡಾಯ ಏಳುವವರಿಂದ ಪಕ್ಷಕ್ಕೆ ತೊಂದರೆ ಆಗುವುದಿಲ್ಲ. ಈ ಸರ್ಕಾರ ಮುಂದುವರಿಯಬೇಕು ಹಾಗೂ ಉಳಿಸಬೇಕು ಎನ್ನುವುದು ಬಿಜೆಪಿ ಮತದಾರರ ಭಾವನೆಯಾಗಿದೆ. ಹೀಗಾಗಿ ನಮ್ಮೆಲ್ಲ ಅಭ್ಯರ್ಥಿಗಳನ್ನೂ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದು ತಿಳಿಸಿದರು.

‘ಉಪ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಸಿಗದವರಿಗೆ ಬೇರೆ ಸ್ಥಾನಮಾನ ಕೊಟ್ಟು ಸಮಾಧಾನ ಮಾಡಲು ಪ್ರಯತ್ನಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.