ADVERTISEMENT

ಪಾಸಿಟಿವ್‌ ಇದೆ ಅಂತೆ, ಹೇಗೆ ಒಳಗೆ ಬಂದಿರಿ: ಪ್ರಿಯಾಂಕ್‌ಗೆ ಮಾಧುಸ್ವಾಮಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 21:16 IST
Last Updated 25 ಸೆಪ್ಟೆಂಬರ್ 2020, 21:16 IST
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ   

ಬೆಂಗಳೂರು: ‘ಪ್ರಿಯಾಂಕ್ ಖರ್ಗೆಯವರೆ ನಿಮಗೆ ಪಾಸಿಟಿವ್ (ಕೋವಿಡ್‌)‌ ಅಂತ ಕೇಳಿದ್ದೇನೆ. ಒಳಗೆ ಬಂದಿದ್ದೀರಿ....’ ಹೀಗೆಂದು ವಿಧಾನಸಭೆಯಲ್ಲಿ ಶುಕ್ರವಾರ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಶ್ನಿಸಿದರು.

ಇದನ್ನು ಆಲಿಸಿದ ವಿಧಾನಸಭಾ ಸದಸ್ಯರು ಒಂದು ಕ್ಷಣ ಗಾಬರಿಗೊಂಡು ಪರಸ್ಪರ ಮುಖಮುಖ ನೋಡಿಕೊಂಡರು. ಇದಕ್ಕೆ ಸಾವಧಾನವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್, ‘ಮೊದಲ ಬಾರಿಗೆ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್‌ ಬಂದಿದ್ದು ನಿಜ. ಇನ್ನೊಮ್ಮೆ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿದಾಗ ನೆಗೆಟಿವ್‌ ಬಂದಿತು. ವ್ಯತಿರಿಕ್ತ ವರದಿಗಳ ಬಗ್ಗೆ ಮಣಿಪಾಲ ಆಸ್ಪತ್ರೆಯ ವೈರಾಣು ತಜ್ಞರ ಬಳಿ ಹೇಳಿದಾಗ ಮತ್ತೊಮ್ಮೆ ಪರೀಕ್ಷೆ ಮಾಡಿಸಲಾಯಿತು. ಆಗಲೂ ನೆಗೆಟಿವ್‌ ಅಂತ ಬಂದಿತು. ಮೊದಲ ವರದಿಯಲ್ಲಿ ಲೋಪವಿದೆ ಎಂದು ಹೇಳಿದರು. ಸದನಕ್ಕೆ ಹಾಜರಾಗಬಹುದೇ ಎಂದು ಕೇಳಿದಾಗ, ಖಂಡಿತಾ ಹಾಜರಾಗಬಹುದು ಎಂದು ಪ್ರಮಾಣ ಪತ್ರ ನೀಡಿದರು. ಅದನ್ನು ಸಭಾಧ್ಯಕ್ಷರ ಗಮನಕ್ಕೆ ತಂದಿದ್ದೇನೆ’ ಎಂದರು.

ಆಗ ಮಧ್ಯಪ್ರವೇಶಿಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಈ ಬಗ್ಗೆ ನನಗೂ ಸಂದೇಹ ಬಂದಿತ್ತು. ಪ್ರಿಯಾಂಕ್‌ ಅವರಿಂದ ಮಾಹಿತಿ ಕೇಳಿದೆ. ಅವರು ಸರ್ಟಿಫಿಕೇಟ್‌ಗಳನ್ನು ಕೊಟ್ಟು ವಿವರ ನೀಡಿದರು’ ಎಂದರು.

ADVERTISEMENT

‘ಪಾಸಿಟಿವ್‌ ವರದಿ ಬಂದಿದ್ದರಿಂದ ಮತ್ತೆ ಎರಡು ಬಾರಿ ಪರೀಕ್ಷೆ ಮಾಡಿಸಿ, ಎಲ್ಲ ಸರ್ಟಿಫಿಕೇಟ್‌ಗಳನ್ನು‌ ತಂದಿದ್ದು ನಿಮ್ಮ ದೊಡ್ಡತನ’ ಎಂದು ಮಾಧುಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಸ್ಕ್‌ ಹಾಕದೇ ಇದ್ದುದಕ್ಕೆ ಆಕ್ಷೇಪ: ಕಾಂಗ್ರೆಸ್‌ನ ತುಕಾರಾಂ‌ ಪದೇ ಪದೇ ಮಾಸ್ಕ್‌ ತೆಗೆದು ಮಾತನಾಡುತ್ತಿದ್ದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಭಾಧ್ಯಕ್ಷ ಕಾಗೇರಿ, ಯಾರೇ ಇರಲಿ ಮಾಸ್ಕ್‌ ಹಾಕಿಕೊಂಡೇ ಮಾತನಾಡಬೇಕು ಎಂದರು.

ಇದಾದ ಸ್ವಲ್ಪ ಹೊತ್ತಿನಲ್ಲಿ ಕಂದಾಯ ಸಚಿವ ಆರ್‌.ಅಶೋಕ ಅವರು ಉತ್ತರ ನೀಡುವಾಗ, ಮಾಸ್ಕ್‌ ಇಳಿಸಿಕೊಂಡು ಮಾತನಾಡಿದ್ದನ್ನು ಗಮನಿಸಿದ ಸೌಮ್ಯರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.