ADVERTISEMENT

1 ವರ್ಷಕ್ಕೆ ₹12 ಕೋಟಿ ಶುಲ್ಕ, ಬಂಡವಾಳ ಹರಿಸಲು ಏಜೆನ್ಸಿ ನೇಮಕ: ಮಾಧುಸ್ವಾಮಿ

ವಿದೇಶಿ ಹೂಡಿಕೆ ಸೆಳೆಯಲು ಅಂತರರಾಷ್ಟ್ರೀಯ ಏಜೆನ್ಸಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 10:40 IST
Last Updated 9 ಜುಲೈ 2020, 10:40 IST
ಜೆ.ಸಿ.ಮಾಧುಸ್ವಾಮಿ
ಜೆ.ಸಿ.ಮಾಧುಸ್ವಾಮಿ   

ಬೆಂಗಳೂರು: ರಾಜ್ಯದಲ್ಲಿ ವಿದೇಶಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಅಂತರರಾಷ್ಟ್ರೀಯ ಏಜೆನ್ಸಿಯೊಂದನ್ನು ನೇಮಿಸಿಕೊಳ್ಳಲು ತೀರ್ಮಾನಿಸಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಬೋಸ್ಟನ್‌ ಕನ್ಸಲ್ಟಿಂಗ್‌ ಗ್ರೂಪ್‌ ಇಂಡಿಯಾ ಲಿಮಿಟೆಡ್‌’ ಅನ್ನು 12 ತಿಂಗಳ ಅವಧಿಗೆ ಸಮಾಲೋಚಕರನ್ನಾಗಿ ನೇಮಿಸಿಕೊಳ್ಳಲು ತೀರ್ಮಾನಿಸಿದ್ದು, ಇದಕ್ಕೆ ವೃತ್ತಿಪರ ಶುಲ್ಕ ₹12 ಕೋಟಿ ನಿಗದಿ ಮಾಡಲಾಗಿದೆ. ಇವರು ಅಂತರರಾಷ್ಟ್ರೀಯ ಹೂಡಿಕೆದಾರರನ್ನು ರಾಜ್ಯಕ್ಕೆ ಕರೆತಂದು ಹೂಡಿಕೆ ಮಾಡಿಸುತ್ತಾರೆ ಎಂದು ಅವರು ಹೇಳಿದರು.

ADVERTISEMENT

ಇ ಆಡಳಿತದಡಿ ಇ ಸಂಗ್ರಹಕ್ಕಾಗಿ ‘ಇ–ಸಂಗ್ರಹ–2.0’ ಎಂಬ ಹೊಸ ಸಾಫ್ಟ್‌ವೇರ್‌ ಅಭಿವೃದ್ಧಿ ಮತ್ತು ಅನುಷ್ಠಾನ ಮಾಡಲು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಇಎಟಿ ಸರ್ವಿಸಸ್ ಎಂಬ ಕಂಪನಿಯನ್ನು ನೇಮಿಸಲು ಒಪ್ಪಿಗೆ ನೀಡಲಾಗಿದೆ. 7 ವರ್ಷಗಳ ಅವಧಿಗೆ ₹184.37 ಕೋಟಿ ವೆಚ್ಚವಾಗಲಿದೆ. ಹಣಕಾಸು ಇಲಾಖೆಯ ಸಲಹೆಯ ಮೇರೆಗೆ ಒಪ್ಪಿಗೆ ನೀಡಲಾಗಿದೆ ಎಂದರು.

ರಾಜ್ಯದ ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳು ಬೇರೆ ಬೇರೆ ಮೂಲಗಳಿಂದ ಸಾಲ ಪಡೆದಿದ್ದವು. ಸಾಲವನ್ನು ಸಕಾಲದಲ್ಲಿ ಪಾವತಿ ಮಾಡದೇ ಇದ್ದರೆ, ಎನ್‌ಪಿಎ ಎಂದು ತೀರ್ಮಾನಿಸುವ ಸಾಧ್ಯತೆ ಇತ್ತು. ಆದ್ದರಿಂದ ಐದು ವಿದ್ಯುತ್‌ ಕಂಪನಿಗಳಿಗೆ ಒಟ್ಟು ₹2500 ಕೋಟಿ ಬಡ್ಡಿ ರಹಿತ ಸಾಲ ನೀಡಲು ತೀರ್ಮಾನಿಸಲಾಗಿದೆ. ಬೆಸ್ಕಾಂಗೆ ₹500 ಕೋಟಿ, ಹುಬ್ಬಳ್ಳಿ–ಧಾರವಾಡ ವಿದ್ಯುತ್‌ ಕಂಪನಿಗೆ ₹400 ಕೋಟಿ, ಗುಲ್ಬರ್ಗಾ ವಿದ್ಯುತ್‌ ಕಂಪನಿಗೆ ₹1000 ಕೋಟಿ ಮತ್ತು ಚಾಮುಂಡೇಶ್ವರಿ ವಿದ್ಯುತ್‌ ಕಂಪನಿಗೆ ₹600 ಕೋಟಿ ಸಾಲ ನೀಡಲು ತೀರ್ಮಾನಿಸಲಾಗಿದೆ ಎಂದರು.

ಕರ್ನಾಟಕ ವಿದ್ಯುತ್‌ ಕಾರ್ಖಾನೆ(ಕವಿಕ) ಮತ್ತು ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರಿಯನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸುಪರ್ದಿಯಿಂದ ಇಂಧನ ಇಲಾಖೆ ವ್ಯಾಪ್ತಿಗೆ ಹಸ್ತಾಂತರಿಸಲು ಒಪ್ಪಿಗೆ ನೀಡಲಾಗಿದೆ.

ರಾಜ್ಯದ ವಿಪತ್ತು ನಿಧಿಯಡಿ ತುರ್ತು ಉದ್ದೇಶದ ಬಳಕೆಗೆ ₹80 ಕೋಟಿ ಖರ್ಚು ಮಾಡಲು ಅವಕಾಶ ಇತ್ತು. ಕೋವಿಡ್‌ನಿಂದಾಗಿ ಕ್ಷೌರಿಕರು, ಮಡಿವಾಳರು, ಟ್ಯಾಕ್ಸಿ ಚಾಲಕರು, ಹೂವು ಬೆಳೆಗಾರರು ಮುಂತಾದವರಿಗೆ ಲಾಕ್‌ಡೌನ್‌ ಪರಿಹಾರ ಹಣ ಕೊಡಬೇಕಾಗಿದ್ದರಿಂದ ವಿಪತ್ತು ನಿಧಿಯನ್ನು ₹500 ಕೋಟಿಗೆ ಹೆಚ್ಚಿಸಿ ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಿದ್ದು, ತಕ್ಷಣವೇ ಹಣ ಪಾವತಿಸಲು ಅನುಕೂಲವಾಗುತ್ತದೆ ಎಂದು ಮಾಧುಸ್ವಾಮಿ ತಿಳಿಸಿದರು.

ಕೋವಿಡ್‌ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣಗಳನ್ನು ಖರೀದಿಸಲು ಆಯವ್ಯಯದಲ್ಲಿ ಉಳಿತಾಯ ಬಾಬ್ತಿನಲ್ಲಿದ್ದ ₹81.99 ಕೋಟಿ ಬಳಕೆ ಮಾಡಲು ಒಪ್ಪಿಗೆ ನೀಡಲಾಗಿದೆ. ಅಲ್ಲದೆ, ಜಿಲ್ಲೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಹೈಫ್ಲೋ ಆಕ್ಸಿಜನ್‌ ವ್ಯವಸ್ಥೆಗೆ ಮೂಲ ಸೌಕರ್ಯ, ಹಾಸಿಗೆಗಳು, ಸಿವಿಲ್ ಕಾಮಗಾರಿಗಳಿಗಾಗಿ ₹207 ಕೋಟಿ ಮಂಜೂರು ಮಾಡಲು ಒಪ್ಪಿಗೆ ನೀಡಲಾಗಿದೆ ಎಂದರು.

ಸಂಪುಟ ಸಭೆಯ ಇತರ ತೀರ್ಮಾನಗಳು:

*ವಿಜಯಪುರದಲ್ಲಿ ವಿಮಾನನಿಲ್ದಾಣ ಸ್ಥಾಪನೆಗೆ ₹220 ಕೋಟಿ ನೀಡಲು ಆಡಳಿತಾತ್ಮಕ ಅನುಮೋದನೆ. ಆರಂಭದಲ್ಲಿ ರನ್‌ವೇ ಸೇರಿದಂತೆ ಎಲ್ಲ ಬಗೆಯ ಸಿವಿಲ್ ಕಾಮಗಾರಿಗಳಿಗಾಗಿ ₹95 ಕೋಟಿ ಬಿಡುಗಡೆಗೆ ಒಪ್ಪಿಗೆ.

* ಎಪಿಎಂಸಿಗಳಲ್ಲಿ ಮಾರುಕಟ್ಟೆ ಶುಲ್ಕವೆಂದು ಶೇ 1.5 ರಷ್ಟು ಸೆಸ್‌ ಸಂಗ್ರಹ ಮಾಡಲಾಗುತ್ತಿತ್ತು. ಆ ದರವನ್ನು ಶೇ 1 ಕ್ಕೆ ಇಳಿಸಲು ಸಮ್ಮತಿ.

*ಕೆಪಿಎಸ್‌ಸಿಯ ತೆರವಾದ ಒಂದು ಹುದ್ದೆಯನ್ನು ನೇಮಕ ಮಾಡುವ ಅಧಿಕಾರ ಮುಖ್ಯಮಂತ್ರಿಗೆ ನೀಡಲಾಗಿದೆ.

*ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ಸಣ್ಣ ತಿದ್ದುಪಡಿ ಮಾಡಿದ್ದು, ಆ ಪ್ರಕಾರ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಯಾವುದೇ ಪ್ರಕರಣದ ಪ್ರಾಥಮಿಕ ತನಿಖೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸಬೇಕು ಮತ್ತು ಆರು ತಿಂಗಳ ಒಳಗೆ ಆರೋಪ ಪಟ್ಟಿ ಸಿದ್ಧಪಡಿಸಬೇಕು

*ರಾಯಚೂರಿನಲ್ಲಿ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಇನ್‌ಫರ್ಮೇಷನ್ ಟೆಕ್ನಾಲಜಿ ಸ್ಥಾಪಿಸಲು ಕೇಂದ್ರದ ಜತೆ ಒಡಂಬಡಿಕೆ ಆಗಿತ್ತು. ಆ ಪ್ರಕಾರ, ಅದನ್ನು ಆರಂಭಿಸಲು ಭೂಮಿ ಮತ್ತು 4 ವರ್ಷಗಳಿಗೆ ಮೂಲಸೌಕರ್ಯಗಳಿಗಾಗಿ ₹ 44.08 ಕೋಟಿ ನೀಡಲು ಒಪ್ಪಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.