ADVERTISEMENT

ಜೆಡಿಎಸ್‌ ಅವಲೋಕನ ಸಭೆ: ಸಂಕ್ರಾಂತಿ ಬಳಿಕ ಸಂಘಟನೆಗೆ ಚಿತ್ತ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 16:56 IST
Last Updated 7 ಜನವರಿ 2021, 16:56 IST
ಕುಮಾರಸ್ವಾಮಿ
ಕುಮಾರಸ್ವಾಮಿ   

ಬೆಂಗಳೂರು: ಸಂಕ್ರಾಂತಿ ಬಳಿಕ ಮತಗಟ್ಟೆ ಹಂತದಿಂದ ರಾಜ್ಯ ಘಟಕದವರೆಗೆ ಎಲ್ಲ ಹಂತಗಳಲ್ಲಿ ಹೊಸ ಸಮಿತಿಗಳ ನೇಮಕ, ಹೊಸ ಮುಖಗಳಿಗೆ ಮನ್ನಣೆ ನೀಡುವ ಮೂಲಕ ಪಕ್ಷ ಸಂಘಟನೆಗೆ ಹೊಸ ಸ್ವರೂಪ ನೀಡಲು ಜೆಡಿಎಸ್‌ ವರಿಷ್ಠರು ನಿರ್ಧರಿಸಿದ್ದಾರೆ.

ಇತ್ತೀಚಿನ ಚುನಾವಣೆಗಳಲ್ಲಿ ಸತತ ಹಿನ್ನಡೆ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಬೆಂಬಲಿತರ ಗೆಲುವು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣಾ ತಯಾರಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಗುರುವಾರ ಇಡೀ ದಿನ ಅವಲೋಕನ ಸಭೆ ನಡೆಯಿತು.

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ‘ಸಂಕ್ರಾಂತಿಯ ಬಳಿಕ ಎಲ್ಲ ಹಂತದ ಸಮಿತಿಗಳಲ್ಲಿ ಬದಲಾವಣೆ ಮಾಡಲಾಗುವುದು’ ಎಂದು ಪ್ರಕಟಿಸಿದರು.

ADVERTISEMENT

ರಾಜ್ಯದ 30 ಜಿಲ್ಲೆಗಳ ತಲಾ ಒಬ್ಬ ಸದಸ್ಯರನ್ನು ಒಳಗೊಂಡ ರಾಜ್ಯಮಟ್ಟದ ಸಮಿತಿ ರಚಿಸಲಾಗುವುದು. ರಾಜ್ಯ ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ತಿಂಗಳಿಗೊಮ್ಮೆ ಸಭೆ ನಡೆಸಿ ಪಕ್ಷ ಸಂಘಟನೆಗೆ ಚುರುಕು ನೀಡಲಾಗುವುದು. ಜಿಲ್ಲೆ, ತಾಲ್ಲೂಕು, ಮತಗಟ್ಟೆ ಹಂತದವರೆಗೂ ಈ ವ್ಯವಸ್ಥೆ ಮಾಡಲಾಗುವುದು. ಯುವ ಘಟಕ, ಮಹಿಳಾ ಘಟಕ ಸೇರಿದಂತೆ ಎಲ್ಲ ಮುಂಚೂಣಿ ಘಟಕಗಳಲ್ಲೂ ಈ ರೀತಿಯ ಬದಲಾವಣೆ ಮಾಡಲಾಗುವುದು ಎಂದು ತಿಳಿಸಿದರು.

‘ರಾಜ್ಯ ಮಟ್ಟದಲ್ಲಿ ಪ್ರಮುಖರ ಸಮಿತಿಯನ್ನೂ ರಚಿಸಲಾಗುವುದು. ಈ ಸಮಿತಿಯ ತೀರ್ಮಾನಕ್ಕೆ ಎಲ್ಲರೂ ತಲೆಬಾಗಬೇಕು. ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿಲ್ಲದವರನ್ನು ಮುಲಾಜಿಲ್ಲದೆ ಕಿತ್ತು ಹಾಕಲಾಗುವುದು. ಎಲ್ಲ ಹಂತದಲ್ಲೂ ಜನರ ನಡುವೆ ಸಕ್ರಿಯವಾಗಿ ಇರುವವರಿಗೇ ಪ್ರಾತಿನಿಧ್ಯ ನೀಡಲಾಗುವುದು. ಪ್ರತಿ ತಾಲ್ಲೂಕಿನಲ್ಲಿ 15,000ದಿಂದ 20,000 ಸದಸ್ಯರ ನೋಂದಣಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ವಿಲೀನ, ಮೈತ್ರಿ ಇಲ್ಲ: ‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಯಾರ ಜತೆಗೂ ನಾವು ಹೊಂದಾಣಿಕೆ ಮಾಡಿಕೊಂಡಿಲ್ಲ. ಬಿಜೆಪಿ ಜತೆ ಜೆಡಿಎಸ್‌ ವಿಲೀನ ಎನ್ನುವುದು ಸುಳ್ಳು. ಯಾರ ಜತೆಗೂ ಮೈತ್ರಿಯೂ ಇಲ್ಲ, ವಿಲೀನವೂ ಇಲ್ಲ. ಪಕ್ಷ
ಕಟ್ಟುವ ಆಸಕ್ತಿ ಇರುವವರು ನನ್ನ ಜತೆಗೆ ಬನ್ನಿ’ ಎಂದು ಕುಮಾರಸ್ವಾಮಿ ಸಭೆಯಲ್ಲಿದ್ದ ಮುಖಂಡರಿಗೆ ಮನವಿ ಮಾಡಿದರು.

ಸಭೆಯ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ, ‘ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷಕ್ಕೆ ಬಲ ತುಂಬಿದೆ. ನಾವು ಕಾಂಗ್ರೆಸ್‌ ಪಕ್ಷಕ್ಕೆ ಸಮೀಪದಲ್ಲೇ ಇದ್ದೇವೆ. ಆರ್ಥಿಕ ನೆರವು ಕೊಡದಿದ್ದರೂ ಸ್ಥಳೀಯ ಮುಖಂಡರೇ ಪಕ್ಷದ ಕಾರ್ಯಕರ್ತರನ್ನು ಗೆಲ್ಲಿಸಿದ್ದಾರೆ. 2023ರಲ್ಲಿ ಸ್ವಂತ ಬಲದಿಂದ ಪಕ್ಷವನ್ನು ಅಧಿಕಾರಕ್ಕೆ ತರುವುದು ನಿಶ್ಚಿತ’ ಎಂದರು

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ, ಮಾಜಿ ಶಾಸಕ ವೈ.ಎಸ್‌.ವಿ. ದತ್ತ, ಎಲ್ಲ ಶಾಸಕರು, ಸೋತ ಅಭ್ಯರ್ಥಿಗಳು, ಜಿಲ್ಲಾ ಘಟಕಗಳ ಅಧ್ಯಕ್ಷರು ಮತ್ತು ಪ್ರಮುಖ ಮುಖಂಡರು ಸಭೆಯಲ್ಲಿ ಅಭಿಪ್ರಾಯ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.