
ಬೆಂಗಳೂರು: ಜೆಡಿಎಸ್ ಪ್ರಮುಖ ನಾಯಕರ ಸಮಿತಿಯ ಅಧ್ಯಕ್ಷರೂ ಆಗಿರುವ, ಶಾಸಕ ಜಿ.ಟಿ.ದೇವೇಗೌಡ ಅವರನ್ನು ಸಮಿತಿಯಿಂದ ಕೈಬಿಡಲು ಅಂತಿಮ ಹಂತದ ಸಿದ್ಧತೆ ನಡೆದಿದೆ.
ಪ್ರಮುಖ ನಾಯಕರ ಸಮಿತಿ ಪುನರ್‌ರಚನೆ ಸಂಬಂಧ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಕ್ಷದ ಶಾಸಕರು ಹಿಂದಿನ ವಾರ ಸಭೆ ನಡೆಸಿದ್ದರು. ಜಿ.ಟಿ.ದೇವೇಗೌಡ ಅವರನ್ನು ಸಮಿತಿಯಿಂದ ಕೈಬಿಡುವಂತೆ ಸಭೆಯಲ್ಲಿ ಬಹುತೇಕ ಶಾಸಕರು ಒತ್ತಾಯಿಸಿದರು ಎಂದು ಮೂಲಗಳು ಹೇಳಿವೆ.
‘ಜಿ.ಟಿ.ದೇವೇಗೌಡ ಅವರು ಪಕ್ಷದ ಕೆಲಸ ಮಾಡುತ್ತಿಲ್ಲ. ಪ್ರಮುಖ ನಾಯಕರ ಸಮಿತಿಯ ಅಧ್ಯಕ್ಷರಾಗಿದ್ದುಕೊಂಡು, ಪಕ್ಷ ವಿರೋಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರನ್ನು ಸಮಿತಿಯ ಅಧ್ಯಕ್ಷ ಸ್ಥಾನದಿಂದ ಮತ್ತು ಸಮಿತಿಯಿಂದ ಕೈಬಿಡಬೇಕು ಎಂದು ಎಲ್ಲ ಶಾಸಕರು ಒತ್ತಾಯಿಸಿದರು’ ಎಂದಿವೆ.
‘ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯ ವಿರುದ್ಧ ಪಕ್ಷದ ನಾಯಕರು ಹೋರಾಟಗಳನ್ನು ಸಂಘಟಿಸುತ್ತಿದ್ದರೆ, ಜಿ.ಟಿ.ದೇವೇಗೌಡ ಅವರು ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಗಳುತ್ತಾರೆ. ಇದರಿಂದ ಪಕ್ಷಕ್ಕೆ ಹಲವು ಬಾರಿ ಮುಜುಗರವಾಗಿದೆ. ಹೀಗಾಗಿ ಅವರನ್ನು ಸಮಿತಿಯಿಂದ ಕೈಬಿಡಲೇಬೇಕು ಎಂದು ಶಾಸಕರು ಪಟ್ಟು ಹಿಡಿದಿದ್ದಾರೆ’ ಎಂದು ವಿವರಿಸಿವೆ.
‘ಜಿ.ಟಿ.ದೇವೇಗೌಡ ಅವರ ವರ್ತನೆ, ಪಕ್ಷ ವಿರೋಧಿ ಚಟುವಟಿಕೆಗಳನ್ನು ಪಕ್ಷದ ನಾಯಕರೂ ಗಮನಿಸಿದ್ದಾರೆ. ಈ ಬಗ್ಗೆ ತಿಳುವಳಿಕೆ ಹೇಳಿದ್ದರೂ, ಅವರು ಸುಧಾರಿಸಿಲ್ಲ. ಹೀಗಾಗಿ ಶಾಸಕರ ಒತ್ತಾಯವನ್ನು ನಾಯಕರು ಪರಿಗಣಿಸಿದ್ದಾರೆ’ ಎಂದು ಮಾಹಿತಿ ನೀಡಿವೆ.
* ಸಮಿತಿಯಿಂದ ಜಿ.ಟಿ.ದೇವೇಗೌಡ ಕೈಬಿಡಲು ಎಲ್ಲ ಶಾಸಕರಿಂದಲೂ ಒತ್ತಾಯ
* ಪ್ರಮುಖ ನಾಯಕರ ಸಮಿತಿ ಪುನರ್‌ರಚನೆ ಈ ವಾರದಲ್ಲೇ ಪೂರ್ಣ
* ಸಮಿತಿ ಅಧ್ಯಕ್ಷ ಯಾರಾಗಲಿದ್ದಾರೆ ಎಂಬುದು ಇನ್ನೂ ನಿಗೂಢ