ADVERTISEMENT

ಭಾಷಣ ಬಿಗಿಯುವ ಬಿಜೆಪಿ ಆಡಳಿತದಲ್ಲಿ ಇಂಡಿಯಾ ಶೈನಿಂಗ್: ಕುಮಾರಸ್ವಾಮಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2022, 7:44 IST
Last Updated 3 ಏಪ್ರಿಲ್ 2022, 7:44 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ಇಂಧನ, ಎಲ್‌ಪಿಜಿ ಬೆಲೆ ಏರಿಕೆ ವಿಚಾರವಾಗಿ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಹಲಾಲ್ ಹಾಲಾಹಲದ ನಡುವೆಯೇ ಇಂದು ಬೆಳಗ್ಗೆ ಬರಸಿಡಿಲಿನಂತೆ ಅಪ್ಪಳಿಸಿದ ಸುದ್ದಿ. ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ; 13 ದಿನಗಳಲ್ಲಿ 8 ರೂ. ಜಿಗಿತ! ಇದಪ್ಪಾ ʼಬಹುಜನ ಹಿತಾಯ, ಬಹುಜನ ಸುಖಾಯʼ ಎಂದು ಭಾಷಣ ಬಿಗಿಯುವ ಬಿಜೆಪಿ ಆಡಳಿತದಲ್ಲಿ ಇಂಡಿಯಾ ಶೈನಿಂಗ್!! ಎಂದಿದ್ದಾರೆ.

13 ದಿನದಿಂದ ಬೆಲೆ ಏರಿಕೆ ನಿರಂತರ. ಎರಡೂ ತೈಲಗಳ ಬೆಲೆ 8 ರೂ. ಹೆಚ್ಚಳ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ ₹ 108.99 ರೂ. (ಇಂದಿನ ಹೆಚ್ಚಳ: 88 ಪೈಸೆ), ಡೀಸೆಲ್ ಬೆಲೆ ಲೀಟರಿಗೆ ₹ 92.83 (ಇಂದಿನ ಹೆಚ್ಚಳ: 78 ಪೈಸೆ) ಜಿಗಿದಿದೆ. ಖಜಾನೆ ಭರ್ತಿಗೆ ಷೇರು ಸೂಚ್ಯಂಕವನ್ನು ಕುಣಿಸಿದಂತೆ, ಬೆಲೆ ಸೂಚ್ಯಂಕದ ಕರಡಿ ಕುಣಿತವೂ ಭರ್ಜರಿ ಎಂದಿದ್ದಾರೆ.

ADVERTISEMENT

2018ರಲ್ಲಿ ನಾನು ಸಿಎಂ ಆಗಿದ್ದಾಗ ಸಾಲ ಮನ್ನಾಕ್ಕಾಗಿ ಪೆಟ್ರೋಲ್ ಲೀಟರಿಗೆ 1.12 ಪೈಸೆ ಮತ್ತು ಡೀಸೆಲ್ ಬೆಲೆಯಲ್ಲಿ ಲೀಟರಿಗೆ 1.14 ಪೈಸೆ ಹೆಚ್ಚಳ ಮಾಡಿದ್ದಕ್ಕೆ ಬಿಜೆಪಿ ನಾಯಕರು ಕೂಗಾಡಿ ಗಲಾಟೆ ಎಬ್ಬಿಸಿದ್ದರು. ಬೆಲೆ ಹೆಚ್ಚಳದ ಈ ಹಣ ರೈತರಿಗೆ ಹೋಗಿಬಿಡುತ್ತದಲ್ಲ ಎಂದು ಅವರ ಹೊಟ್ಟೆ ಉರಿದುಹೋಯಿತು ಎಂದು ದೂರಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ಕೇಸರಿ ಶಾಲು, ಟಿಪ್ಪು ಪಠ್ಯ, ಮುಸ್ಲಿಂ ವರ್ತಕರಿಗೆ ನಿಷೇಧ, ಹಲಾಲ್ ಕಟ್ ಬಗ್ಗೆ ಅಬ್ಬರಿಸಿ ಬೊಬ್ಬಿರಿಯುವ ʼಶ್ರೀಮಂತರ ಪಕ್ಷ ಬಿಜೆಪಿʼಯು ಬೆಲೆ ಏರಿಕೆ ಬಗ್ಗೆ ಮಾತ್ರ ಮೌನವಾಗಿದೆ!
ರಾಜ್ಯ ಸರಕಾರವೂ ಮೌನ!!
ಮುಖ್ಯಮಂತ್ರಿಗಳೂ ಮೌನ!!!
ಮೌನಂ ಶರಣಂ ಗಚ್ಛಾಮಿ.
ಮೌನಿ ಪಕ್ಷ!
ಮೌನಿ ಸರ್ಕಾರ!!
ಮೌನಿ ಮುಖ್ಯಮಂತ್ರಿ!!!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ʼಮೌನಿ ಪ್ರಧಾನಿʼ ಎಂದ ಇವರ ಅಬ್ಬರ ಎಲ್ಲಿ ಉಡುಗಿ ಹೋಗಿದೆ? ದನಿಯೆತ್ತಿ ಬೆಲೆ ಏರಿಕೆ ವಿರುದ್ಧ. ಇದು ನನ್ನ ಆಗ್ರಹ ಎಂದು ಹೇಳಿದ್ದಾರೆ.

ಎಚ್.ಡಿ. ಕುಮಾರಸ್ವಾಮಿಯವರ ಇನ್ನುಳಿದ ಟ್ವೀಟ್‌ಗಳು ಇಲ್ಲಿವೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.