ADVERTISEMENT

ಹಿಂಸಾ ರಾಜಕಾರಣದ ಪೂರ್ಣ ಸಿನಿಮಾ ತೋರಿಸಲು ಹೊರಟ ರಾಷ್ಟ್ರೀಯ ಪಕ್ಷಗಳು: ಎಚ್‌ಡಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಫೆಬ್ರುವರಿ 2022, 11:32 IST
Last Updated 21 ಫೆಬ್ರುವರಿ 2022, 11:32 IST
ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ   

ಬೆಂಗಳೂರು: ಶಿವಮೊಗ್ಗ ಘಟನೆಯ ಮೂಲಕ ರಾಷ್ಟ್ರೀಯ ಪಕ್ಷಗಳು ಹಿಂಸಾ ರಾಜಕಾರಣದ ಪೂರ್ಣ ಸಿನಿಮಾ ತೋರಿಸಲು ಹೊರಟಿವೆ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಶಿವಮೊಗ್ಗದಲ್ಲಿ ಬಜರಂಗ ದಳದ ಕಾರ್ಯಕರ್ತ ಹರ್ಷ ಅವರ ಹತ್ಯೆ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ರಾಷ್ಟ್ರೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಶಿವಮೊಗ್ಗದಲ್ಲಿ ನಡೆದ ಯುವಕನ ಕೊಲೆ ಅಮಾನವೀಯ. ಆ ಯುವಕನ ಕುಟುಂಬಕ್ಕೆ ನನ್ನ ಸಾಂತ್ವನಗಳು. ಈ ಕೊಲೆಯ ಹಿಂದೆ ಯಾರೇ ಇದ್ದರೂ ಅವರನ್ನು ತಕ್ಷಣ ಪತ್ತೆಹಚ್ಚಿ ಬಂಧಿಸಬೇಕು ಎನ್ನುವುದು ಸರ್ಕಾರಕ್ಕೆ ನನ್ನ ಒತ್ತಾಯ’ ಎಂದು ಅವರು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ರಾಜ್ಯದಲ್ಲಿ ಇಂಥ ಘಟನೆಗಳು ಪದೇಪದೇ ನಡೆಯುತ್ತವೆ. ಇಂಥ ಘಟನೆಗಳ ಬೆಂಕಿಯಲ್ಲಿ ರಾಷ್ಟ್ರೀಯ ಪಕ್ಷಗಳು ಚಳಿ ಕಾಯಿಸಿಕೊಳ್ಳುತ್ತವೆ ಎಂದು ನಾನು ಮೊದಲೇ ಹೇಳಿದ್ದೆ. ಈಗ ರಾಜ್ಯದಲ್ಲಿ ಅಂತವೇ ಕೆಟ್ಟ, ಭಯಾನಕ ಘಟನೆಗಳು ನಡೆಯುತ್ತಿವೆ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಇಂಥ ಘಟನೆಗಳು ನಡೆಯುತ್ತಿವೆ ಎನ್ನುವುದು ನನ್ನ ಅನುಮಾನ. ರಾಷ್ಟ್ರೀಯ ಪಕ್ಷಗಳಿಗೆ ಅಭಿವೃದ್ಧಿ ವಿಚಾರ ಇಟ್ಟುಕೊಂಡು ಜನರ ಬಳಿಗೆ ಹೋಗಲು ವಿಷಯ ಇಲ್ಲ. ಕೇವಲ ಭಾವನಾತ್ಮಕ ಅಂಶಗಳ ಮೂಲಕ 'ಹಿಂಸಾ ರಾಜಕಾರಣ'ವನ್ನು ಮಾಡಲು ಎರಡೂ ಪಕ್ಷಗಳು ಹೊರಟಿವೆ’ ಎಂದು ಕುಮಾರಸ್ವಾಮಿ ದೂರಿದ್ದಾರೆ.

ಹತ್ಯೆಗೀಡಾದ ಯುವಕನಿಗೆ ಮೊದಲೇ ಜೀವ ಬೆದರಿಕೆ ಇತ್ತೆಂದೂ, ಪೊಲೀಸರಿಗೆ ದೂರು ಕೊಡಲಾಗಿತ್ತು ಎಂದೂ ಹೇಳುತ್ತಿದ್ದಾರೆ. ಹಾಗಾದರೆ ಆ ಯುವಕನಿಗೆ ರಕ್ಷಣೆ ಯಾಕೆ ಕೊಡಲಿಲ್ಲ? ಇದಕ್ಕೆ ಉತ್ತರ ಬೇಕಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳು 2023ರ ಚುನಾವಣೆಗೆ ಸದನದಲ್ಲಿ ಗದ್ದಲ ಎಬ್ಬಿಸುವ ಮೂಲಕ ಟ್ರೈಲರ್ ಬಿಟ್ಟಿದ್ದು, ಸಿನಿಮಾ ಬಾಕಿ ಇದೆ ಎಂದಿದ್ದೆ. ಶಿವಮೊಗ್ಗ ಘಟನೆಯ ಮೂಲಕ ರಾಷ್ಟ್ರೀಯ ಪಕ್ಷಗಳು ಹಿಂಸಾ ರಾಜಕಾರಣದ ಪೂರ್ಣ ಸಿನಿಮಾ ತೋರಿಸಲು ಹೊರಟಿವೆ. ಜನರ ಸೂಕ್ಷ್ಮ ಭಾವನೆಗಳು ಹಾಗೂ ಸಮಾಜದ ಶಾಂತಿಯನ್ನು ಅಪಾಯಕ್ಕೆ ಒಡ್ಡಿ ಬೇಳೆ ಬೇಯಿಸಿಕೊಳ್ಳುತ್ತಿರುವ ರಾಷ್ಟ್ರೀಯ ಪಕ್ಷಗಳ ರಕ್ಕಸ ರಾಜಕಾರಣಕ್ಕೆ ಕ್ಷಮೆಯೇ ಇಲ್ಲ ಎಂದು ಅವರು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಈಗ ಒಂದು ಅಮೂಲ್ಯ ಪ್ರಾಣ ಹೋಗಿದೆ. ಅದಕ್ಕೆ ಯಾರು ಹೊಣೆ? ರಾಜಕಾರಣಿಗಳು ಮೂರು ದಿನ ಹೋದ ಪ್ರಾಣದ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸಿ, ಹತ್ತು ಲಕ್ಷ ಪರಿಹಾರ ಕೊಟ್ಟರೆ ಸಾಕೇ? ಇಂತಹ ಹಿಂಸಾ ಪ್ರವೃತ್ತಿಗೆ ಕೊನೆ ಎಂದು ಎಂಬುದಾಗಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.