ADVERTISEMENT

12 ಸ್ಥಾನಕ್ಕೆ ಜೆಡಿಎಸ್‌ ಮತ್ತೆ ಪಟ್ಟು

ಸ್ವತಂತ್ರ ಸ್ಪರ್ಧೆಯ ಎಚ್ಚರಿಕೆ ನೀಡಿದ ಸಹೋದರರು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 19:04 IST
Last Updated 20 ಫೆಬ್ರುವರಿ 2019, 19:04 IST

ಬೆಂಗಳೂರು/ಹಾಸನ: ‘ಕೋಮುವಾದಿ ಪಕ್ಷಗಳು ಅಧಿಕಾರಕ್ಕೆ ಬರುವುದನ್ನು ತಡೆಯಲು ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ 12 ಸ್ಥಾನ ಕೊಡಬೇಕು ಎಂದು ಕೇಳಿದ್ದೇವೆ. ಕಾಂಗ್ರೆಸ್‌ನವರು ನೀಡಿದರೆ ಸಂತೋಷ. ಒಪ್ಪದಿದ್ದರೆ ಫ್ರೆಂಡ್ಲಿ ಫೈಟ್‌ಗೂ ರೆಡಿ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳುವ ಮೂಲಕ ಕಾಂಗ್ರೆಸ್‌ಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಹಾಸನದಲ್ಲಿ ಮಾತನಾಡಿದ ರೇವಣ್ಣ, ‘ಕೋಮುವಾದಿ ಶಕ್ತಿಗಳನ್ನು ದೂರ ಇಡಬೇಕು ಎಂಬ ಉದ್ದೇಶದಿಂದ ಸಮ್ಮಿಶ್ರ ಸರ್ಕಾರ ರಚನೆ ಮಾಡಲಾಗಿದೆ. ಲೋಕಸಭೆಯಲ್ಲಿ ಮೈತ್ರಿ ಪಕ್ಷ ಗೆಲ್ಲಬೇಕಾದರೆ ಹೊಂದಾಣಿಕೆ ಅನಿವಾರ್ಯ. ಕಾಂಗ್ರೆಸ್‌ನವರು ಒಪ್ಪದಿದ್ದರೆ ತ್ರಿಕೋನ ಸ್ಪರ್ಧೆಗೆ ನಾವು ಸಿದ್ಧ’ ಎಂದರು.

‘ನಾವು 12 ಸ್ಥಾನಗಳನ್ನು ಬಿಟ್ಟುಕೊಡುವಂತೆ ಕೇಳಿದ್ದೇವೆ. ಸಚಿವ ಸಂಪುಟ ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷರ ಸ್ಥಾನಗಳ ವಿಷಯದಲ್ಲಿ 2:1 ಅನುಪಾತದಲ್ಲಿ ಕಾಂಗ್ರೆಸ್‌ ಮತ್ತು ನಮ್ಮ ಪಕ್ಷಕ್ಕೆ ಹಂಚಿಕೆ ಮಾಡಿಕೊಳ್ಳಲಾಗಿತ್ತು. ಅದೇ ಸೂತ್ರವನ್ನು ಲೋಕಸಭಾ ಚುನಾವಣೆಯಲ್ಲಿ ಪಾಲಿಸಬೇಕು ಎಂಬುದು ನಮ್ಮ ಬೇಡಿಕೆ. ಪ್ರಾದೇಶಿಕ ಪಕ್ಷವಾದ ನಮ್ಮನ್ನು ಕೂಡಾ ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂಬುದು ನಮ್ಮ ಅಪೇಕ್ಷೆ’ ಎಂದು ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಎರಡು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಜತೆಗೆ ಗುರುವಾರ ಸಮಾಲೋಚನೆ ನಡೆಸುತ್ತೇನೆ’ ಎಂದು ಅವರು ತಿಳಿಸಿದರು.

‘ಚುನಾವಣಾ ಕಾರ್ಯತಂತ್ರ ಕುರಿತು ಸಚಿವ ಡಿ.ಕೆ.ಶಿವಕುಮಾರ್‌ ಜತೆಗೆ ಚರ್ಚಿಸಿದ್ದೇನೆ. ಕಾಂಗ್ರೆಸ್‌ ನಾಯಕತ್ವಕ್ಕೆ ಈ ವಿಷಯದಲ್ಲಿ ಸ್ಪಷ್ಟತೆ ಇದೆ. ಕೆಲವು ನಾಯಕರು ಮಾತ್ರ ಈ ವಿಚಾರದಲ್ಲಿ ಗೊಂದಲದಲ್ಲಿದ್ದಾರೆ. ಆ ಪಕ್ಷದ ಹೈಕಮಾಂಡ್‌ ನಿರ್ಧಾರ ಪ್ರಕಟಿಸಿದ ಬಳಿಕ ಎಲ್ಲರೂ ಅದಕ್ಕೆ ಸಹಮತ ವ್ಯಕ್ತಪಡಿಸುತ್ತಾರೆ ಎಂಬ ವಿಶ್ವಾಸ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.