ADVERTISEMENT

ಬಿಜೆಪಿಯ ‘ಕುಟುಂಬ ರಾಜಕಾರಣ’ದ ಪಟ್ಟಿ ನೀಡಿ ಟ್ವೀಟ್‌ ಮಾಡಿದ ಜೆಡಿಎಸ್‌

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 7:34 IST
Last Updated 14 ನವೆಂಬರ್ 2021, 7:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ‘ಬಿಜೆಪಿ ಹೇಳುವುದೊಂದು, ಮಾಡುವುದು ಇನ್ನೊಂದು. ಮನೆಯಲ್ಲಿ ಒಂದು ಮುಖ! ಬೀದಿಯಲ್ಲಿ ಇನ್ನೊಂದು ಮುಖ! ಒಡಕು ರಾಜಕಾರಣದ ಪಕ್ಷಕ್ಕೆ ಹೊಲಸು ರಾಜಕಾರಣದಲ್ಲಿ ಹೆಚ್ಚು ನಂಬಿಕೆ ಎನ್ನುವುದು ‘ಆಪರೇಷನ್ ಕಮಲ’ದ ಮೂಲಕ ರಚನೆ ಮಾಡಿದ ಸರ್ಕಾರಗಳೇ ಸಾಕ್ಷಿ’ ಎಂದು ಜೆಡಿಎಸ್‌ ಟ್ವೀಟ್‌ ಮಾಡಿದೆ.

‘ಕುಟುಂಬ ರಾಜಕಾರಣದಲ್ಲಿ ಬಿಜೆಪಿ ದೇಶದ ಎಲ್ಲ ಪಕ್ಷಗಳ ದಾಖಲೆಗಳನ್ನು ಸರಿಗಟ್ಟಿದೆ. ಕರ್ನಾಟಕದ ಮಟ್ಟಿಗಂತೂ ಕೇಸರಿ ಕಲಿಗಳದ್ದು ಸಾರ್ವಕಾಲಿಕ ದಾಖಲೆಯೇ ಸರಿ. ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ‘ ಎಂದು ಟೀಕಿಸಿರುವ ಜೆಡಿಎಸ್‌, ಈ ಪಟ್ಟಿಯನ್ನು ನೀಡಿದೆ.

1. ಯಡಿಯೂರಪ್ಪ ಕುಟುಂಬ: ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ. ಹಿರಿಮಗ ಲೋಕಸಭೆ ಸದಸ್ಯ, ಕಿರಿಮಗ ಪಕ್ಷದ ಉಪಾಧ್ಯಕ್ಷ.

ADVERTISEMENT

2. ಶೆಟ್ಟರ್ ಕುಟುಂಬ: ಜಗದೀಶ್ ಶೆಟ್ಟರ್ ಶಾಸಕರು, ಮಾಜಿ ಸಚಿವ, ಮಾಜಿ ಸಿಎಂ; ಅವರ ತಮ್ಮ ಹಾಲಿ ವಿಧಾನ ಪರಿಷತ್ ಸದಸ್ಯ.

3. ಅಣ್ಣಾ ಸಾಹೇಬ್ ಕುಟುಂಬ: ಪತಿ ಲೋಕಸಭೆ ಸದಸ್ಯ, ಪತ್ನಿ ರಾಜ್ಯದಲ್ಲಿ ಕ್ಯಾಬಿನೆಟ್ ಸಚಿವೆ.

4. ಬಳ್ಳಾರಿ ರೆಡ್ಡಿ ಕುಟುಂಬ: ಕರುಣಾಕರ ರೆಡ್ಡಿ ಶಾಸಕ, ಅವರ ಸಹೋದರ ಸೋಮಶೇಖರ ರೆಡ್ಡಿ ಕೂಡ ಶಾಸಕ. ಇನ್ನೊಬ್ಬ ಸಹೋದರ ಬಿಜೆಪಿ ನಾಯಕರೇ. ಅವರ ಗೆಳೆಯ ಶ್ರೀರಾಮುಲು ಈಗ ಮಂತ್ರಿ. ಮಾಜಿ ಎಂಪಿ ಶಾಂತಾ ಅವರು ಶ್ರೀರಾಮುಲು ತಂಗಿ. ಸಣ್ಣ ಫಕೀರಪ್ಪ ಕೂಡ ಅವರ ಪೈಕಿಯೇ.

5. ಜಾರಕಿಹೊಳಿ ಕುಟುಂಬ: ರಮೇಶ್ ಜಾರಕಿಹೊಳಿ ಮಾಜಿ ಮಂತ್ರಿ -ಶಾಸಕರು. ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಹಾಲಿ ಶಾಸಕರು, ಕೆಎಂಎಫ್ ಸದಸ್ಯರು.

6. ಲಿಂಬಾವಳಿ ಕುಟುಂಬ: ಅರವಿಂದ ಲಿಂಬಾವಳಿ ಶಾಸಕರು, ಅವರ ಭಾವಮೈದ ರಘು ಕೂಡ ಶಾಸಕರಲ್ಲವೇ?

7. ಉದಾಸಿ ಕುಟುಂಬ: ದಿವಂಗತ ಉದಾಸಿ ಅವರು ಮಂತ್ರಿಗಳಾಗಿದ್ದರು. ಅವರ ಮಗ ಈಗ ಸಂಸತ್ ಸದಸ್ಯರಾಗಿದ್ದಾರೆ.

‘ಪಟ್ಟಿ ಇನ್ನೂ ಇದೆ. ರಾಜ್ಯವಾರು ಬರೆಯುತ್ತಾ ಹೋದರೆ ಪುಟಗಳೇ ಸಾಲುವುದಿಲ್ಲ. ಕುಟುಂಬ ರಾಜಕಾರಣದ ರೆಂಬೆಕೊಂಬೆಗಳು ಸಮೃದ್ಧವಾಗಿರುವುದು ಎಲ್ಲಿ? ಯಾವ ಪಕ್ಷದಲ್ಲಿ? ಕುಟುಂಬ ರಾಜಕಾರಣದ ವಿರಾಟ ದರ್ಶನ ಆಗುತ್ತಿರುತ್ತಿರುವುದು ಎಲ್ಲಿ?’

‘ರಾಷ್ಟ್ರ ನಿರ್ಮಾಣ ಬಿಜೆಪಿಯ ಗುರಿಯಲ್ಲ. ಆಪರೇಷನ್ ಕಮಲ ಅದರ ಗರಿ. ಆಪರೇಷನ್ ಕಮಲವನ್ನು ರಾಷ್ಟ್ರೀಕರಣ ಮಾಡಿ ರಾಷ್ಟ್ರಪ್ರೇಮ ಮೆರೆದ ಕುಖ್ಯಾತಿ ಅದರದ್ದು. ಒಡಕು ರಾಜಕಾರಣ ಬಿಜೆಪಿ ನಿತ್ಯ ಕಾಯಕ. ಆಪರೇಷನ್ ಕಮಲ ಅದರ ಅಧಿಕೃತ ರಾಜಧರ್ಮ. ಕುಟುಂಬ ರಾಜಕಾರಣ ಅದರ ಅಧಿಕಾರದ ಸೋಪಾನ‘ ಎಂದೂ ಜೆಡಿಎಸ್‌ ಟೀಕಿಸಿದೆ.

‘ಸವಕಲು ಹೇಳಿಕೆಗಳಿಂದ ಬೇಳೆ ಬೇಯಿಸಿಕೊಳ್ಳುವುದು ಬಿಟ್ಟು ಜನರ ಕೆಲಸ ಮಾಡಿ. ಬೇರೆಯವರ ತಟ್ಟೆಯತ್ತ ನೋಡುವ ಚಾಳಿ ಬಿಟ್ಟರೆ ಉತ್ತಮ‘ ಎಂದೂ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.