ಬೆಂಗಳೂರು: ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಫಲಿತಾಂಶದಲ್ಲಿ ಬೆಂಗಳೂರಿನ ಶ್ರೀರಾಮ್ ಗ್ಲೋಬಲ್ ಶಾಲೆಯ ವಿದ್ಯಾರ್ಥಿ ದಕ್ಷ್ ತಯಾಲಿಯಾ, ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಿದ್ಯಾರ್ಥಿ ಶಶಾಂಕ ಭೀಮಶಾ ಬರಗಲಿ ಅಖಿಲ ಭಾರತ ರ‍್ಯಾಂಕಿಂಗ್‌ನಲ್ಲಿ (ಎಐಆರ್) 15ನೇ ಸ್ಥಾನಗಳಿಸುವ ಮೂಲಕ ರಾಜ್ಯಕ್ಕೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ.
360ಕ್ಕೆ 312 ಅಂಕ ಗಳಿಸಿರುವ ದಕ್ಷ್ ತಯಾಲಿಯಾ ಅವರು, ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ (ಐಐಟಿ) ಸೇರಿ ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಾಡುವ ಗುರಿ ಹೊಂದಿದ್ದಾರೆ.
‘ಕಳೆದ ಎರಡು ವರ್ಷಗಳು ಸವಾಲಿನವುಗಳಾಗಿದ್ದವು. 10ನೇ ತರಗತಿಯಲ್ಲಿದ್ದಾಗ ನನ್ನ ತಯಾರಿ ಆರಂಭವಾಯಿತು. ಆನ್‌ಲೈನ್ ತರಗತಿಗಳು ಮತ್ತು ಅಣಕು ಪರೀಕ್ಷೆಗಳು ನಿಗದಿತ ಗುರಿ ತಲುಪಲು ಸಹಕಾರಿಯಾದವು. ಪೋಷಕರು, ಉಪನ್ಯಾಸಕರು ಮತ್ತು ತರಬೇತಿ ನೀಡಿದ ಸಂಸ್ಥೆಗೆ ಧನ್ಯವಾದ ಸಲ್ಲಿಸುವೆ’ ಎಂದು ದಕ್ಷ್ ಪ್ರತಿಕ್ರಿಯಿಸಿದರು.
‘ದೇಶದ ಪ್ರತಿಷ್ಠಿತ ಐಐಟಿಯಲ್ಲಿ ಉನ್ನತ ವಿದ್ಯಾಭ್ಯಾಸ ಪೂರ್ಣಗೊಳಿಸಿ, ಸ್ಟಾರ್ಟ್‌ಅಪ್ ಕಂಪನಿ ಆರಂಭಿಸಿ, ನಿರುದ್ಯೋಗ ನಿವಾರಣೆ ಮಾಡುವ ಧ್ಯೇಯ ಇಟ್ಟುಕೊಂಡಿದ್ದೇನೆ’ ಎಂದು ಶಶಾಂಕ ಹೇಳಿದರು.
ರಾಜ್ಯದ ಹಲವಾರು ವಿದ್ಯಾರ್ಥಿಗಳು 100 ರ‍್ಯಾಂಕ್‌ಗಳ ಒಳಗೆ ಗಳಿಸಿದ್ದಾರೆ. ಬೆಂಗಳೂರಿನ ಚೈತನ್ಯ ಟೆಕ್ನೋ ಶಾಲೆಯ ಮಾರತ್ತಹಳ್ಳಿಯ ವಿದ್ಯಾರ್ಥಿ ಭವೇಶ್ ಜಯಂತಿ ಎಐಆರ್‌ನಲ್ಲಿ 35ನೇ ಸ್ಥಾನಗಳಿಸಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ಭವೇಶ್ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಎಂಜಿನಿಯರಿಂಗ್ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದ್ದರು. ಅವರು ಸಹ ಮುಂಬೈನ ಐಐಟಿಗೆ ಪ್ರವೇಶ ಪಡೆದು, ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಾಡುವ ಇಚ್ಛೆ ವ್ಯಕ್ತಪಡಿಸಿದರು.
ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಕುಶಾಗ್ರ ಗುಪ್ತಾ ಎಐಆರ್‌ನಲ್ಲಿ 49ನೇ ಸ್ಥಾನ ಪಡೆದಿದ್ದಾರೆ. ಅವರು ಬೆಂಗಳೂರಿನ ಕಸವನಹಳ್ಳಿಯ ನಾರಾಯಣ ಕೋ-ಕಾವೇರಿ ಭವನದ ವಿದ್ಯಾರ್ಥಿ. ಕುಶಾಗ್ರ ಅವರೂ ಮುಂಬೈನ ಐಐಟಿಗೆ ಸೇರುವ ಗುರಿ ಹೊಂದಿದ್ದಾರೆ ಮತ್ತು ನಂತರ ಗಣಿತ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಬಯಸಿದ್ದಾರೆ.
ಜೆಇಇ (ಅಡ್ವಾನ್ಸ್ಡ್) 2025ರಲ್ಲಿ ಒಟ್ಟು 1,80,422 ಅಭ್ಯರ್ಥಿಗಳು 1 ಮತ್ತು 2 ಪತ್ರಿಕೆಗಳಿಗೆ ಹಾಜರಾಗಿದ್ದರು. ಅದರಲ್ಲಿ 54,378 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.