ADVERTISEMENT

ಚಿನ್ನಪ‍್ರಿಯರಿಗೆ ಸಿಹಿ ಸುದ್ದಿ: ಸರ್ಕಾರಿ ಆಭರಣ ಮಳಿಗೆ

ಚಿನ್ನಪ‍್ರಿಯರಿಗೆ ಸಿಹಿ ಸುದ್ದಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 15:52 IST
Last Updated 18 ಮಾರ್ಚ್ 2021, 15:52 IST
   

ಬೆಂಗಳೂರು: ಬೆಂಗಳೂರು, ಮೈಸೂರು ಸೇರಿ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನಾಭರಣಗಳ ಮಳಿಗೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು.

ಮೈಸೂರು ಸಿಲ್ಕ್ಸ್‌, ಮೈಸೂರು ಸ್ಯಾಂಡಲ್‌ ಸೋಪ್‌ ಮತ್ತು ಕಾವೇರಿ ಹ್ಯಾಂಡ್‌ಲೂಮ್‌ ಮಾದರಿಯಲ್ಲಿ ಬ್ರ್ಯಾಂಡಿಂಗ್‌ ಮಾಡಿ ಅದೇ ಮಾದರಿಯಲ್ಲಿ ಆಭರಣಗಳ ಮಳಿಗೆ ತೆರೆಯಲಾಗುವುದು. ಸರ್ಕಾರವೇ ಮಳಿಗೆಗಳನ್ನು ನಿರ್ವಹಣೆ ಮಾಡಲಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ಆಭರಣಗಳನ್ನು ತಯಾರಿಸಿಕೊಡಲಾಗುವುದು ಎಂದು ವಿವರಿಸಿದರು.

ADVERTISEMENT

ರಾಜ್ಯದಲ್ಲಿ ಮಳಿಗೆಗಳ ಯಶಸ್ಸು ಆಧರಿಸಿ ಹೊರ ರಾಜ್ಯಗಳಲ್ಲೂ ಆಭರಣಗಳ ಮಳಿಗೆಗಳನ್ನು ಆರಂಭಿಸುವ ಯೋಜನೆ ಇದೆ ಎಂದರು.

ಗಂಡಬೇರುಂಡ ಚಿನ್ನದ ನಾಣ್ಯ:

ಮದುವೆ ಮತ್ತು ಇತರ ಸಮಾರಂಭಗಳಲ್ಲಿ ಬಂಧು–ಬಾಂಧವರು ಮತ್ತು ಮಿತ್ರರಿಗೆ ಉಡುಗೊರೆಯಾಗಿ ವಿತರಿಸಲು ಕರ್ನಾಟಕದ ಲಾಂಛನವಾದ ‘ಗಂಡಬೇರುಂಡ’ ಗುರುತಿನ ಚಿನ್ನದ ನಾಣ್ಯಗಳನ್ನು ಹೊರತರಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಚಿನ್ನದ ಉತ್ಪಾದನೆ ದ್ವಿಗುಣಗೊಳಿಸಲು ಉದ್ದೇಶಿಸಲಾಗಿದೆ. ಈಗ ಹಟ್ಟಿ ಚಿನ್ನದ ಗಣಿಯಲ್ಲಿ 1,500 ರಿಂದ 1,800 ಕೆ.ಜಿ ಚಿನ್ನದ ಉತ್ಪಾದನೆ ಆಗುತ್ತಿದೆ. 2022 ರ ವೇಳೆಗೆ ಆ ಪ್ರಮಾಣವನ್ನು 5,000 ಕೆ.ಜಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.