ADVERTISEMENT

ಜಿಂದಾಲ್‌ಗೇ ಬಳ್ಳಾರಿಯ ಸಿಂಹಪಾಲು ಗಣಿಗಳು!

ವರವಾದ ಗಣಿ ಕಾಯ್ದೆ ತಿದ್ದುಪಡಿ; ತರಾತುರಿಯಲ್ಲಿ ಅರಣ್ಯ ಭೂಮಿ ವರ್ಗಾವಣೆ

ಎಸ್.ರವಿಪ್ರಕಾಶ್
Published 20 ಜೂನ್ 2019, 19:45 IST
Last Updated 20 ಜೂನ್ 2019, 19:45 IST
   

ಬೆಂಗಳೂರು: ತರಾತುರಿಯಲ್ಲಿ ಅರಣ್ಯ ಭೂಮಿಯೂ ಸೇರಿದಂತೆ ಕಬ್ಬಿಣದ ಅದಿರು ಗಣಿಗಾರಿಕೆ ಬ್ಲಾಕ್‌ಗಳ ಹರಾಜಿನಲ್ಲಿ ಜೆಎಸ್‌ಡಬ್ಲ್ಯೂ ಸ್ಟೀಲ್ಸ್‌ ಲಿಮಿಟೆಡ್‌ಗೆ (ಜಿಂದಾಲ್‌) ‘ಸಿ’ ದರ್ಜೆಯ ಏಳರಲ್ಲಿ ಐದು ಬ್ಲಾಕ್‌ಗಳನ್ನುನೀಡಲಾಗಿದೆ.

ಜೆಎಸ್‌ಡಬ್ಲ್ಯೂಐದು ಬ್ಲಾಕ್‌ಗಳನ್ನು ಪಡೆಯಲು ನೆರವಾಗಿದ್ದು ‘ಗಣಿಗಳು ಮತ್ತು ಖನಿಜಗಳ ಅಭಿವೃದ್ಧಿ ಮತ್ತು ನಿಯಂತ್ರಣ’ (ಎಂಎಂಆರ್‌ಡಿ) ಕಾಯ್ದೆಯ ಸೆಕ್ಷನ್‌ ‘10 ಬಿ’ಗೆ ಮಾಡಿರುವ ತಿದ್ದುಪಡಿ. ಕೇಂದ್ರ ಸರ್ಕಾರ 2015 ರಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಿತ್ತು. ಇದರಿಂದ ಬೆರಳೆಣಿಕೆಯಷ್ಟು ಕಬ್ಬಿಣ ಮತ್ತು ಉಕ್ಕು ತಯಾರಿಕೆದಾರರಿಗೆ ಮಾತ್ರ ಅನುಕೂಲವಾಗಿದೆ. ಇದರಿಂದಾಗಿ ಜೆಎಸ್‌ಡಬ್ಲ್ಯೂ ಸ್ಟೀಲ್ಸ್‌ ಸಿಂಹಪಾಲು ಗಣಿ ಬ್ಲಾಕ್‌ಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ತರಾತುರಿಯಲ್ಲಿ ಅರಣ್ಯ ಭೂಮಿ: ಅಲ್ಲದೆ,ಸಂಡೂರು ತಾಲ್ಲೂಕು ದೋಣಿಮಲೈ ಬ್ಲಾಕ್‌ನಲ್ಲಿರುವ 133.58 ಹೆಕ್ಟೇರ್‌ ಅರಣ್ಯ ಭೂಮಿಯನ್ನು ಗಣಿಗಾರಿಕೆಗೆ ನೀಡಲು (ಫಾರೆಸ್ಟ್‌ ಲ್ಯಾಂಡ್‌ ಡೈವರ್ಷನ್‌) ‘ದೋಸ್ತಿ’ ಸರ್ಕಾರ ತರಾತುರಿಯಲ್ಲಿ ಹಸಿರು ನಿಶಾನೆ ತೋರಿರುವುದು ಸಂಶಯಗಳಿಗೆ ಕಾರಣವಾಗಿದೆ.

ADVERTISEMENT

ಒಟ್ಟು ಅರಣ್ಯ ಭೂಮಿಯಲ್ಲಿ ಸುಮಾರು 66.78 ಹೆಕ್ಟೇರ್‌ ಅರಣ್ಯ ಭೂಮಿ (ವರ್ಜಿನ್‌) ಈವರೆಗೂ ಮರಗಳ ಹನನ ಅಥವಾ ಗಣಿಗಾರಿಕೆಗೆ ಒಳಪಟ್ಟಿಲ್ಲ. ಈ ಭೂಮಿಯನ್ನು ಗಣಿಗಾರಿಕೆಗೆ ಒಪ್ಪಿಸಲು ತೀರ್ಮಾನವಾಗಿದ್ದು, ಇದಕ್ಕೆ ಪರ್ಯಾಯವಾಗಿ ಅರಣ್ಯ ಬೆಳೆಸಲು ಕಂಪನಿಯು ಯಾದಗಿರಿ ಜಿಲ್ಲೆಯಲ್ಲಿ ಭೂಮಿ ಗುರುತಿಸಿದೆ.

ರಾಜ್ಯದ ಅರಣ್ಯ ಮತ್ತು ಪರಿಸರ ಅನುಮತಿ ಆಧರಿಸಿ 2019 ಮೇ 15 ರಂದು ಗಣಿಗಾರಿಕೆಗೆ ಕೇಂದ್ರ ಒಪ್ಪಿಗೆ ನೀಡಿದೆ.

ಜಿಂದಾಲ್‌ಗೆ ಹೇಗೆ ಅನುಕೂಲ: ಎಂಎಂಆರ್‌ಡಿ ಕಾಯ್ದೆ ತಿದ್ದುಪಡಿ ಪ್ರಕಾರ, ಕಬ್ಬಿಣದ ಅದಿರು ಗಣಿಗಾರಿಕೆಗೆ ಪರವಾನಗಿ ಪಡೆಯಬೇಕಾದವರು, ಬೀಡು ಕಬ್ಬಿಣ, ಉಕ್ಕು ಅಥವಾ ಪೆಲ್ಲೆಟ್ಟುಗಳನ್ನು ಉತ್ಪಾದಿಸುವುದು ಕಡ್ಡಾಯ. ಇದಕ್ಕೆ ಅಂತಿಮ ಬಳಕೆದಾರರು (ಎಂಡ್‌ ಯೂಸರ್‌) ಎನ್ನಲಾಗುತ್ತದೆ. ಗಣಿಗಾರಿಕೆ ಪರವಾನಗಿ ಅರ್ಜಿ ಸಲ್ಲಿಸುವವರು ಅಂತಿಮ ಬಳಕೆದಾರ ಒಕ್ಕೂಟವಾಗಿದ್ದರೂ ಪರವಾನಗಿ ಪಡೆಯುವ ಹರಾಜಿನಲ್ಲಿ ಭಾಗವಹಿಸಲು ಆಗುವುದಿಲ್ಲ. ಈ ನಿಯಮಗಳು ಸಾರ್ವಜನಿಕ ರಂಗದ ಉದ್ದಿಮೆಗಳಿಗೂ ಅನ್ವಯವಾಗುತ್ತದೆ ಎಂಬುದೇಎಂಎಂಆರ್‌ಡಿ ಕಾಯ್ದೆಯಲ್ಲಿ ತಿದ್ದುಪಡಿ ಆಗಿರುವ ಪ್ರಮುಖ ಅಂಶ.

ಈ ತಿದ್ದುಪಡಿಯಿಂದ ರಾಜ್ಯದಲ್ಲಿ ಅನುಕೂಲ ಆಗಿರುವುದು ಜಿಂದಾಲ್‌ ಬಿಟ್ಟರೆ, ಬಲ್ಡೊಟಾ ಕಂಪನಿಗೆ ಮಾತ್ರ.

ಹಳೇ ಪರವಾನಗಿಗಳ ರದ್ದು: ಹೊಸ ತಿದ್ದುಪಡಿಯ ಷರತ್ತುಗಳನ್ನು ಪೂರೈಸದ 14 ಕಂಪನಿಗಳು (‘ಸಿ’ ದರ್ಜೆ) ಹೊಂದಿದ್ದ ಗಣಿಗಾರಿಕೆ ಪರವಾನಗಿಯನ್ನು ರಾಜ್ಯ ಸರ್ಕಾರ 2015ರ ಡಿಸೆಂಬರ್‌ನಲ್ಲಿ ರದ್ದುಪಡಿಸಿತು. 669.45 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅರ್ಜಿ ಆಹ್ವಾನಿಸಿ ಹೊಸದಾಗಿ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಜೆಎಸ್‌ಡಬ್ಲ್ಯೂ ಸ್ಟೀಲ್ಸ್‌ಗೆ ವರವಾಯಿತು. ಇದರಿಂದಾಗಿ 14 ಕಂಪನಿಗಳ ಗಣಿಗಾರಿಕೆ ಪರವಾನಗಿಗಳೂ ರದ್ದಾದವು.

‘ಸಿ’ ದರ್ಜೆಯ 14 ಗಣಿಗಳಲ್ಲಿ ಏಳು ಬ್ಲಾಕ್‌ಗಳಿಗೆ ಪರವಾನಗಿ ನೀಡಲು ಇ– ಹರಾಜು (ಎಲೆಕ್ಟ್ರಾನಿಕ್‌ ಹರಾಜು ಪ್ರಕ್ರಿಯೆ) ಕರೆಯಲಾಯಿತು. ಹರಾಜಿನಲ್ಲಿ ಜೆಎಸ್‌ಡಬ್ಲ್ಯೂ ಸ್ಟೀಲ್ಸ್‌ ಮತ್ತು ಬಲ್ಡೋಡಾಗೆ ಸೇರಿದ ಎಂಎಸ್‌ಪಿಎಲ್‌ ಮಾತ್ರ ಭಾಗವಹಿಸಲು ಸಾಧ್ಯವಾಯಿತು ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರವು ಅರಣ್ಯ ಮತ್ತು ಪರಿಸರ ಹಾಗೂ ಸ್ಫೋಟಕ್ಕೆ ಸಂಬಂಧಿಸಿದಂತೆ ಅನುಮತಿ ಪಡೆಯಬೇಕು ಎಂದು ಕಟ್ಟುನಿಟ್ಟಾಗಿ ತಿಳಿಸಿತ್ತು. ಇದರ ಬೆನ್ನಲ್ಲಿ ರಾಜ್ಯ ಅರಣ್ಯ ಮತ್ತು ಪರಿಸರ ಇಲಾಖೆ ತ್ವರಿತಗತಿಯಲ್ಲಿ ಕಡತ ವಿಲೇವಾರಿ ಮಾಡಿ ಒಪ್ಪಿಗೆ ನೀಡಿತು.

ತಿದ್ದುಪಡಿಯಿಂದ ನಷ್ಟ ಯಾರಿಗೆ
ಎಂಎಂಆರ್‌ಡಿ ಕಾಯ್ದೆಯ ತಿದ್ದುಪಡಿಯಿಂದ ಕೇವಲ ಗಣಿಗಾರಿಕೆಯನ್ನೇ ನಡೆಸಿಕೊಂಡು ಬಂದಿದ್ದ ಕಂಪನಿಗಳಿಗೆ ಹೊಡೆತ ಬಿದ್ದಿದೆ. ತುಂಗಭದ್ರಾ ಮಿನರಲ್ಸ್‌ಗಳಂತಹ ಕಂಪನಿ ಹಲವು ದಶಕಗಳಿಂದ ಗಣಿಗಾರಿಕೆ ನಡೆಸಿಕೊಂಡು ಬಂದಿವೆ. ಕಾಯ್ದೆ ತಿದ್ದುಪಡಿಯಿಂದ ಜಿಂದಾಲ್‌ನಂತಹ ಕಂಪನಿಗಳು ಗಣಿಗಾರಿಕೆ ವ್ಯಾಪ್ತಿ ಬಳ್ಳಾರಿ ಜಿಲ್ಲೆಯಲ್ಲಿ ವಿಸ್ತರಿಸಿಕೊಳ್ಳಲು ಸಾಧ್ಯವಾಗಿದೆ.

**
‘ಸಿ’ ದರ್ಜೆ ಗಣಿಗಾರಿಕೆ ಹರಾಜಿನಲ್ಲಿ ಪಾಲ್ಗೊಂಡವರಿಗೆ ಅನುಮತಿ ನೀಡಲಾಗುವುದು. ಪರ್ಯಾಯ ಅರಣ್ಯ ಬೆಳೆಸಲು ಜಾಗ ತೋರಿಸಿದ ಕಡೆ ಅರಣ್ಯ ಬೆಳೆಸಲಾಗುತ್ತದೆ.
-ಪುನಾಟಿ ಶ್ರೀಧರ್, ಪಿಸಿಸಿಎಫ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.