ADVERTISEMENT

ಧರ್ಮ ನಿಂದನೆ ಆರೋಪ: ಪತ್ರಕರ್ತನ ಸಂತೋಷ್ ತಮ್ಮಯ್ಯ ಬಂಧನ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2018, 7:19 IST
Last Updated 14 ನವೆಂಬರ್ 2018, 7:19 IST
ಸಂತೋಷ್ ತಮ್ಮಯ್ಯ
ಸಂತೋಷ್ ತಮ್ಮಯ್ಯ   

ಮಡಿಕೇರಿ: ಇಸ್ಲಾಂ ಧರ್ಮದ ಕುರಿತುಅವಹೇಳನಕಾರಿಯಾಗಿ ಭಾಷಣ ಮಾಡಿದ ಆರೋಪದಡಿ ಪೊನ್ನಂಪೇಟೆ ಸಮೀಪದ ಮುಗಟಗೇರಿ ಗ್ರಾಮದಪತ್ರಕರ್ತ ಸಂತೋಷ್ ತಮ್ಮಯ್ಯ ಅವರನ್ನು ಗೋಣಿಕೊಪ್ಪಲು ಪೊಲೀಸರು ಮಂಗಳವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯವು ಜಾಮೀನು ನೀಡಿದ್ದು, ಬಿಡುಗಡೆಗೊಂಡಿದ್ದಾರೆ.

ನ.5ರಂದು ಗೋಣಿಕೊಪ್ಪಲಿನಲ್ಲಿ ‘ಪ್ರಜ್ಞಾ ಕಾವೇರಿ ಸಂಘಟನೆ’ ಆಯೋಜಿಸಿದ್ದ ‘ಟಿಪ್ಪು ಕರಾಳ ಮುಖಗಳ ಅನಾವರಣ’ ವಿಚಾರ ಸಂಕಿರಣದಲ್ಲಿ ಸಂತೋಷ್‌ ತಮ್ಮಯ್ಯ ಭಾಷಣ ಮಾಡಿದ್ದರು.

‘ಸಂತೋಷ್‌ ಅವರು ಸಮಾಜದಲ್ಲಿ ಶಾಂತಿ ಕದಡುವ ಯತ್ನ ನಡೆಸಿದ್ದಾರೆ. ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ಕೆ.ಜೆ.ಆಸ್ಕರ್ ಅವರು ದೂರು ನೀಡಿದ್ದರು. ಧರ್ಮ ನಿಂದನೆ ಆರೋಪದಡಿ ಪ್ರಕರಣ ದಾಖಲಾಗಿತ್ತು.

ADVERTISEMENT

‘ಟಿಪ್ಪು ಜಯಂತಿ ಆಚರಿಸುವಂತೆ ಮುಸ್ಲಿಂ ಸಮಾಜವು ಸರ್ಕಾರಕ್ಕೆ ಮನವಿ ಸಲ್ಲಿಸಿರಲಿಲ್ಲ. ಅದು ಸರ್ಕಾರದ ತೀರ್ಮಾನ. ಆದರೆ, ಜಯಂತಿ ಆಚರಣೆ ವಿರೋಧಿಸುವ ನೆಪದಲ್ಲಿ ಇಸ್ಲಾಂ ಧರ್ಮಕ್ಕೆ ಅವಹೇಳನ ಮಾಡಲಾಗಿದೆ’ ಎಂದು ಕೊಡಗು ಜಿಲ್ಲೆಯಾದ್ಯಂತ ಮುಸ್ಲಿಂ ಸಮಾಜದಿಂದ ಪ್ರತಿಭಟನೆಗಳು ನಡೆದಿದ್ದವು.

‘ಒಂದು ಧರ್ಮದ ಜನರ ಭಾವನೆಗಳಿಗೆ ಧಕ್ಕೆ ಬರುವಂತೆ ಮಾತನಾಡಿರುವುದು ತನಿಖೆ ವೇಳೆ ಮೇಲ್ನೋಟಕ್ಕೆ ಕಂಡುಬಂದಿರುವ ಕಾರಣ ಬಂಧಿಸಲಾಗಿತ್ತು’ ಎಂದು ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದರು.

ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದಮೈಸೂರಿನ ಸುಧಾಕರ ಹೊಸಳ್ಳಿ,ಮಂಗಳೂರಿನ ರಾಬರ್ಟ್ ರೊಜಾರಿಯೊ, ರಂಗಕರ್ಮಿ ಅಡ್ಡಂಡ ಕಾರ್ಯಪ್ಪ, ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಪ್ರತಿಭಟನೆ, ಖಂಡನೆ: ಬಂಧನ ಖಂಡಿಸಿ ಮಂಗಳವಾರ ಬೆಳಿಗ್ಗೆ ವಿಶ್ವ ಹಿಂದೂ ಪರಿಷತ್‌, ಕೊಡವ ಸಮಾಜದಿಂದ ಗೋಣಿಕೊಪ್ಪಲಿನಲ್ಲಿ ಬೃಹತ್‌ ಪ್ರತಿಭಟನೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.