ADVERTISEMENT

ಭ್ರಷ್ಟಾಚಾರ ಮುಕ್ತ ವಿವಿ: ಜಿ.ಟಿ. ದೇವೇಗೌಡ ಭರವಸೆ

ವಿಶ್ವವಿದ್ಯಾಲಯಗಳ ಕರ್ಮಕಾಂಡಗಳ ಮೇಲೆ ಬೆಳಕು ಚೆಲ್ಲಿದ ‘ಪ್ರಜಾವಾಣಿ’ ಪ್ರಯತ್ನಕ್ಕೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2018, 10:22 IST
Last Updated 28 ಅಕ್ಟೋಬರ್ 2018, 10:22 IST
ಜಿ.ಟಿ. ದೇವೇಗೌಡ
ಜಿ.ಟಿ. ದೇವೇಗೌಡ   

ಶಿವಮೊಗ್ಗ:ಕುಲಪತಿ ಹುದ್ದೆಗಳೂ ಸೇರಿದಂತೆ ನೇಮಕಾತಿಗೆ ಕೌನ್ಸೆಲಿಂಗ್ ಮಾದರಿ, ಆಡಳಿತ, ಅಭಿವೃದ್ಧಿ, ಗುತ್ತಿಗೆ, ಖರೀದಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ವಿಶ್ವವಿದ್ಯಾಲಯಗಳಲ್ಲೂ ಏಕ ರೀತಿಯ ವಿಧಾನ ಅನುಸರಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಮಾಹಿತಿ ನೀಡಿದರು.

ಶಿವಮೊಗ್ಗದಲ್ಲಿ ಭಾನುವಾರ ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳೂ ಒಂದೇ ಕಾಯ್ದೆ ಅಡಿ ಕಾರ್ಯನಿರ್ವಹಿಸಬೇಕು.ವಿಶ್ವವಿದ್ಯಾಲಯಗಳ ಸ್ವಾಯತ್ತತೆಗೆ ಧಕ್ಕೆಯಾಗಬಾರದು.ಏಕರೀತಿಯ ಪ್ರವೇಶ, ಪರೀಕ್ಷಾವಿಧಾನ ಅನುಸರಿಸಲು ಹೊಸ ಸಾಫ್ಟ್‌ವೇರ್ ಸಿದ್ಧಪಡಿಸಲು ಈಗಾಗಲೇ ಸೂಚಿಸಲಾಗಿದೆ. ಎಲ್ಲ ಪ್ರಕ್ರಿಯೆ ಸಾಮಾನ್ಯ ಜನರಿಗೂ ತಿಳಿಯುವಂತೆ ಪಾರದರ್ಶಕ ನೀತಿ ಜಾರಿಗೊಳಿಸಲಾಗುತ್ತಿದೆ. ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ಬೆಂಬಲ ನೀಡಿದ್ದಾರೆ ಎಂದರು.

ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಹಿಂದಿನ ಕಾಂಗ್ರೆಸ್ ಸರ್ಕಾರ ಮಸೂದೆ ಮಂಡಿಸಿತ್ತು. ಎರಡೂ ಸದನಗಳಲ್ಲಿ ಅಂಗೀಕಾರವಾಗಿ ರಾಜ್ಯಪಾಲರ ಸಹಿಗೆ ಕಳುಹಿಸಲಾಗಿದೆ. ಎರಡು ದಿನಗಳ ಹಿಂದೆ ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಅಡ್ವೋಕೇಟ್ ಜನರಲ್ ಅಭಿಪ್ರಾಯ ಪಡೆದು ಶೀಘ್ರ ನಿರ್ಧಾರ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ವಿವರಿಸಿದರು.

ADVERTISEMENT

ಕುಲಸಚಿವರ ಸ್ಥಾನಗಳಿಗೆ ಕೆಎಎಸ್‌ ಶ್ರೇಣಿಯ ಅಧಿಕಾರಿಗಳನ್ನೇ ನೇಮಿಸುವ ಕುರಿತು ಪ್ರಸ್ತಾವ ಇಲ್ಲ. ಸಿಂಡಿಕೇಟ್‌ ಸೇರಿದಂತೆ ಅರ್ಹರನ್ನು ನೇಮಿಸಲು ಕ್ರಮ ಕೈಗೊಳ್ಳಲಾಗುವುದು. ವಿಶ್ವವಿದ್ಯಾಲಯಗಳಲ್ಲಿ ಅಮೂಲಾಗ್ರ ಬದಲಾವಣೆ ತರಲು ಶಿಕ್ಷಣ ತಜ್ಞರು, ಉತ್ತಮ ಹೆಸರಿರುವ ವಿಶ್ರಾಂತ ಕುಲಪತಿಗಳು, ವಿಧಾನ ಪರಿಷತ್ ಸದಸ್ಯರು, ಬುದ್ಧಿ ಜೀವಿಗಳ ಸಲಹೆ ಪಡೆಯಲಾಗುತ್ತಿದೆ. ಈಗಾಗಲೇ ಎರಡು ಸಭೆಗಳನ್ನು ನಡೆಸಲಾಗಿದೆ. ಭವಿಷ್ಯದಲ್ಲಿ ಭ್ರಷ್ಟಾಚಾರ ಮುಕ್ತ ತಾಣವಾಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.