ADVERTISEMENT

ನೇಕಾರರ ನೆರವಿಗೆ ಆಗ್ರಹಿಸಿ ಕೊಂಡಯ್ಯ ಪತ್ರ

​ಪ್ರಜಾವಾಣಿ ವಾರ್ತೆ
Published 25 ಮೇ 2021, 16:22 IST
Last Updated 25 ಮೇ 2021, 16:22 IST
ಕೆ.ಸಿ. ಕೊಂಡಯ್ಯ
ಕೆ.ಸಿ. ಕೊಂಡಯ್ಯ   

ಬೆಂಗಳೂರು: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಎಲ್ಲ ನೇಕಾರರಿಗೂ ತಲಾ ₹ 5,000 ಪರಿಹಾರ ನೀಡಬೇಕು ಎಂದು ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಕೆ.ಸಿ. ಕೊಂಡಯ್ಯ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗೆ ಮಂಗಳವಾರ ಪತ್ರ ಬರೆದಿರುವ ಅವರು, ‘ಎರಡನೇ ಲಾಕ್‌ಡೌನ್‌ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವು ನೀಡಲು ರಾಜ್ಯ ಸರ್ಕಾರ ₹ 1,250 ಕೋಟಿ ಮೊತ್ತದ ಪ್ಯಾಕೇಜ್‌ ಘೋಷಿಸಿದೆ. ಅದರಲ್ಲಿ ನೇಕಾರ ಸಮುದಾಯವನ್ನು ಕಡೆಗಣಿಸಿರುವುದು ಖಂಡನೀಯ. ರೈತರಷ್ಟೇ ನೇಕಾರರೂ ಮುಖ್ಯ ಎಂಬುದನ್ನು ಸರ್ಕಾರ ಮರೆತಂತಿದೆ’ ಎಂದಿದ್ದಾರೆ.

ಮೊದಲ ಲಾಕ್‌ಡೌನ್‌ ವೇಳೆ ಪ್ರಕಟಿಸಿದ್ದ ಪ್ಯಾಕೇಜ್‌ನಲ್ಲಿ ನೇಕಾರರಿಗೆ ತಲಾ ₹ 2,000 ನೆರವು ಘೋಷಿಸಲಾಗಿತ್ತು. ಅದನ್ನು ಹೆಚ್ಚಿಸಬೇಕೆಂಬ ಬೇಡಿಕೆ ಮುಂದಿಡಲಾಗಿತ್ತು. ಈ ವರ್ಷದ ಪ್ಯಾಕೇಜ್‌ನಲ್ಲಿ ನೇಕಾರರ ಪ್ರಸ್ತಾಪವೇ ಇಲ್ಲ. ಕಳೆದ ವರ್ಷದ ಲಾಕ್‌ಡೌನ್‌ ಅವಧಿಯಲ್ಲಿ ಸಾಲ ತೀರಿಸಲಾಗದೆ 13ಕ್ಕೂ ಹೆಚ್ಚು ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಮತ್ತೆ ಅಂತಹ ಪರಿಸ್ಥಿತಿ ಉದ್ಭವಿಸಿದೆ. ತಕ್ಷಣವೇ ನೇಕಾರ ಸಮುದಾಯಕ್ಕೆ ನೆರವು ಘೋಷಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.