ADVERTISEMENT

ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ವಿವಾದ ಸೃಷ್ಟಿ: ರಾಜ್ಯ ಸರ್ಕಾರದ ವಿರುದ್ಧ ಕಾಗೇರಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 9:37 IST
Last Updated 3 ಸೆಪ್ಟೆಂಬರ್ 2025, 9:37 IST
<div class="paragraphs"><p>ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ</p></div>

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

   

ದಾವಣಗೆರೆ: ರಾಜ್ಯ ಸರ್ಕಾರದ ಆಡಳಿತದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್‌ ಸಾಲುಸಾಲು ವಿವಾದಗಳನ್ನು ಸೃಷ್ಟಿಸುತ್ತಿದೆ. ಈ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.

‘ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ. ಎಲ್ಲೆಡೆ ಭ್ರಷ್ಟಾಚಾರ ತುಂಬಿತುಳುಕುತ್ತಿದೆ. ಅತಿವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಡಳಿತದ ಮೇಲೆ ಹಿಡಿತ ಕಳೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ದಿನಗಳನ್ನು ದೂಡುತ್ತಿದ್ದಾರೆ. ಕುರ್ಚಿ ಉಳಿಸಿಕೊಳ್ಳಲು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ಹೊರಹಾಕಿದರು.

ADVERTISEMENT

‘ಬಹುಸಂಖ್ಯಾತ ಹಿಂದೂಗಳ ಭಾವನೆಯನ್ನು ರಾಜ್ಯ ಸರ್ಕಾರ ಧಿಕ್ಕಸಿದೆ. ಧರ್ಮಸ್ಥಳ, ದಸರಾ ಮಹೋತ್ಸವ ಹಾಗೂ ಚಾಮುಂಡಿ ಬೆಟ್ಟದ ವಿಚಾರದಲ್ಲಿ ಇದು ನಿರೂಪಿತವಾಗಿದೆ. ಸಾಮಾಜಿಕ ಸಾಮರಸ್ಯ ಕದಡುವ ಅಂತರರಾಷ್ಟ್ರೀಯ ಮಟ್ಟದ ಷಡ್ಯಂತ್ರದ ಭಾಗವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ. ಸಮಾಜ ಒಡೆದರೆ ಡ್ರಗ್ಸ್‌ ಮಾಫಿಯಾಗೆ ಅನುಕೂಲವಾಗಲಿದೆ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಎಡಪಂಥೀಯ ಸಂಘಟನೆಗಳ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಧರ್ಮಸ್ಥಳ ವಿಚಾರದಲ್ಲಿ ಕೆಲ ಸಂಘಟನೆ ಹಾಗೂ ನಾಯಕರ ಒತ್ತಡಕ್ಕೆ ಮಣಿದು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದಾರೆ. ಹಿಂದೂಗಳ ಪವಿತ್ರ ಕ್ಷೇತ್ರವಾದ ಧರ್ಮಸ್ಥಳದ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ಟೂಲ್‌ಕಿಟ್‌ ರೂಪಿಸಲಾಗಿದೆ. ಹಿಂದೂಗಳ ವಿರುದ್ಧದ ಇಂತಹ ಷಡ್ಯಂತ್ರಗಳಿಗೆ ಫಲ ಸಿಗದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಗಣೇಶೋತ್ಸವದ ವಿಚಾರದಲ್ಲಿ ಸಂಘಪರಿವಾರದ ನಾಯಕರಿಗೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಬೆದರಿಕೆ ಹಾಕಿದ್ದಾರೆ. ಕೆಲ ಮುಖಂಡರನ್ನು ಗಡಿಪಾರು ಮಾಡುವ ಹುನ್ನಾರ ನಡೆಸಿದ್ದಾರೆ. ಇಂತಹ ಪ್ರಯತ್ನಕ್ಕೆ ಕೈಹಾಕಿದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ರಾಜಶೇಖರ್‌, ಮುಖಂಡರಾದ ಧನಂಜಯ ಕಡ್ಲೆಬಾಳು, ಕಲ್ಲೇಶ್‌, ಸಚಿನ್‌ ವರ್ಣೇಕರ್‌ ಹಾಜರಿದ್ದರು.

ಬಾಲಿಶ ಹೇಳಿಕೆಗಳ ಮೂಲಕ ರಾಹುಲ್‌ ಗಾಂಧಿ ನಗೆಪಾಟಲಿಗೆ ಈಡಾಗಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ಸ್ಥಾನದ ಗಾಂಭೀರ್ಯತೆಯನ್ನು ಹಾಳು ಮಾಡುತ್ತಿದ್ದಾರೆ
ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ

‘ಹೊಸ ಜಾತಿ ಸೃಷ್ಟಿ’

‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ತರಾತುರಿಯಲ್ಲಿ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಜಾತಿ ನಿರ್ಮೂಲನೆ ಪ್ರತಿಪಾದಿಸುವವರೇ ಹೊಸ ಜಾತಿಗಳನ್ನು ಸೃಷ್ಟಿಸಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಹುನ್ನಾರ ನಡೆಸಿದ್ದಾರೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.

‘ಕೇಂದ್ರ ಸರ್ಕಾರ ಜಾತಿ ಜನಗಣತಿ ನಡೆಸುತ್ತಿದೆ. ಈ ಗಣತಿ ಅಧಿಕೃತ ದಾಖಲೆಯಾಗಲಿದೆ. ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳನ್ನು ಮತಬ್ಯಾಂಕ್‌ ಮಾಡಿಕೊಳ್ಳಲು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು 15 ದಿನಗಳಲ್ಲಿ ಮುಗಿಸಲು ಮುಂದಾಗಿದೆ. 1,400 ಜಾತಿಗಳನ್ನು ಹೆಸರಿಸಿ ಸಾಮರಸ್ಯ ಹಾಳುಮಾಡುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ದೇಶದಲ್ಲಿ ಕಾನೂನುಬದ್ಧ ಧರ್ಮಾಂತರಕ್ಕೆ ಅವಕಾಶವಿದೆ. ಹೊಸ ಧರ್ಮ ಸ್ವೀಕರಿಸಿದವರು ಹಳೆಯ ಜಾತಿ, ಧರ್ಮ ಉಲ್ಲೇಖಿಸುವಂತಿಲ್ಲ. ಆದರೂ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಮಾಡಿಕೊಳ್ಳುತ್ತಿರುವ ಸಿದ್ಧತೆಯಲ್ಲಿ ಒಕ್ಕಲಿಗ ಕ್ರಿಶ್ಚಿಯನ್‌, ಕುರುಬ ಕ್ರಿಶ್ಚಿಯನ್‌, ವೀರಶೈವ ಕ್ರಿಶ್ಚಿಯನ್‌ನಂತಹ ಜಾತಿಗಳನ್ನು ಉಲ್ಲೇಖಿಸಲಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ’ ಎಂದರು.

ಮಳೆ ಮಾಪನ ದುರಸ್ತಿಗೆ ಆಗ್ರಹ

‘ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವ ಮಳೆ ಮಾಪನ ಕೇಂದ್ರಗಳು ಹಾಳಾಗಿವೆ. ಇದರಿಂದ ಮಳೆಯ ಕುರಿತು ಅಧಿಕೃತ ದಾಖಲೆ ಲಭ್ಯವಾಗದೇ ರೈತರಿಗೆ ಬೆಳೆವಿಮೆ ಕೈತಪ್ಪುತ್ತಿದೆ. ರೈತರ ಬಗೆಗೆ ಕಾಳಜಿ ಇದ್ದರೆ ಮೊದಲು ಮಳೆಮಾಪನ ಕೇಂದ್ರಗಳನ್ನು ದುರಸ್ತಿಗೊಳಿಸಿ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.

‘ರೈತರ ಹಿತಕಾಯಲು ರಾಜ್ಯ ಸರ್ಕಾರ ಬದ್ಧವಾಗಿದೆ. ಅಡಿಕೆ ಬೆಳೆಯ ವಿಚಾರದಲ್ಲಿ ಸೃಷ್ಟಿಯಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ, ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ. ತೋಟಗಾರಿಕಾ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಅಡಿಕೆ ಬೆಳೆಗಾರರ ಹಿತಕಾಪಾಡುವ ಪ್ರಯತ್ನಕ್ಕೆ ಮುಂದಾಗಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.