
ಬೆಳಗಾವಿ ಅಧಿವೇಶನ (ಸಂಗ್ರಹ ಚಿತ್ರ)
ಸುವರ್ಣ ವಿಧಾನಸೌಧ (ಬೆಳಗಾವಿ): ಉತ್ತರ ಕರ್ನಾಟಕದಲ್ಲಿ ಕಲ್ಯಾಣ ಕರ್ನಾಟಕವೇ ಬಹಳ ಹಿಂದುಳಿದಿದೆ. ಕಿತ್ತೂರು ಕರ್ನಾಟಕಕ್ಕೇ ಹೆಚ್ಚಿನ ಅನುದಾನ ಹೋಗುತ್ತದೆ. ಈ ತಾರತಮ್ಯವನ್ನು ಹೋಗಲಾಡಿಸಬೇಕು ಎಂಬ ಕೂಗು ವಿಧಾನ ಪರಿಷತ್ತಿನಲ್ಲಿ ಅನುರಣಿಸಿತು.
ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಹಿಂದುಳಿದಿರುವ ಈ ಎರಡೂ ಭಾಗಗಳನ್ನು ಪ್ರತ್ಯೇಕಿಸಿ ನೋಡುವುದು ಬೇಡ ಎಂಬ ಒತ್ತಾಯಕ್ಕೂ ಸದನ ಸಾಕ್ಷಿಯಾಯಿತು.
ಇಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಬುಧವಾರದ ಕಲಾಪದ ವೇಳೆ, ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತಾಗಿ ಚರ್ಚೆಯನ್ನು ಕೈಗೆತ್ತಿಕೊಳ್ಳಲಾಯಿತು.
ಬಿಜೆಪಿಯ ಶಶೀಲ್ ಜಿ.ನಮೋಷಿ, ‘ಉತ್ತರ ಕರ್ನಾಟಕ ಎಂದರೆ, ಮುಂಬೈ ಕರ್ನಾಟಕವನ್ನಷ್ಟೇ ಕೇಂದ್ರೀಕರಿಸಿ ಮಾತನಾಡಲಾಗುತ್ತಿದೆ. ಆದರೆ ಅದಕ್ಕಿಂತಲೂ ಹಿಂದುಳಿದಿರುವ ಕಿತ್ತೂರು ಕರ್ನಾಟಕವನ್ನು ಕಡೆಗಣಿಸಲಾಗುತ್ತಿದೆ. 371-ಜೆ ವಿಧಿ ಜಾರಿಯಾದ ನಂತರ ಸ್ವಲ್ಪ ಸುಧಾರಣೆ ಆಗಿದೆಯಾದರೂ, ಆಗಬೇಕಾದದ್ದು ಇನ್ನಷ್ಟು ಇದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 52,000 ಶಿಕ್ಷಕರ ಹುದ್ದೆಗಳು ಖಾಲಿ ಇದ್ದರೆ, ಆ ಪೈಕಿ ಕಲ್ಯಾಣ ಕರ್ನಾಟಕದಲ್ಲಿ 22,000 ಹುದ್ದೆಗಳು ಖಾಲಿ ಇವೆ. ಪ್ರಾದೇಶಿಕ ಅಸಮಾನತೆಗೆ ಇದಕ್ಕಿಂತ ಬೇರೆ ನಿದರ್ಶನ ಬೇಕೆ’ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನ ಎಫ್.ಎಚ್.ಜಕ್ಕಪ್ಪನವರ್, ‘ಸಾರಿಗೆ ವಿಚಾರದಲ್ಲೂ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡುತ್ತಿರುವ 4,500 ವಿದ್ಯುತ್ ಚಾಲಿತ ಬಸ್‌ಗಳಲ್ಲಿ ಕೇವಲ 200 ಬಸ್‌ಗಳನ್ನು ಕಲ್ಯಾಣ ಕರ್ನಾಟಕಕ್ಕೆ ಹಂಚಿಕೆ ಮಾಡಲಾಗುತ್ತಿದೆ. ಈ ಸಂಖ್ಯೆಯನ್ನು 750ಕ್ಕೆ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.
ಜತೆಗೆ, ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಇದೆ. ಆದರೆ ಕಿತ್ತೂರು ಕರ್ನಾಟಕದ ಭಾಗಕ್ಕೆ ಅಂತಹ ಯಾವುದೇ ಮಂಡಳಿ ಇಲ್ಲ. ಹೀಗಾಗಿ ಇಲ್ಲಿಗೆ ಹಂಚಿಕೆಯಾಗುವ ಅನುದಾನವು ಬಳಕೆಯಾಗುತ್ತಿರುವುದಕ್ಕೆ ಒಂದೆಡೆಯೇ ಲೆಕ್ಕ ಸಿಗದಂತಾಗಿದೆ. ಅಂತಹ ಒಂದು ಮಂಡಳಿ ಕಿತ್ತೂರು ಕರ್ನಾಟಕಕ್ಕೂ ಬೇಕು’ ಎಂದು ಆಗ್ರಹಿಸಿದರು.
ಬಿಜೆಪಿಯ ವೈ.ಎಂ.ಸತೀಶ್, ‘ರಾಜ್ಯದ ಇತರೆಡೆ ಇರುವ ಪ್ರದೇಶಾಭಿವೃದ್ಧಿ ಮಂಡಳಿಗಳಲ್ಲಿ ವಿಧಾನ ಪರಿಷತ್ತಿನ ಸದಸ್ಯರಿಗೆ ಸದಸ್ಯತ್ವ ಮತ್ತು ಅನುದಾನ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಅಂತಹ ಅವಕಾಶ ಇಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು’ ಎಂದರು.
ಕಾಂಗ್ರೆಸ್‌ನ ಎಂ.ನಾಗರಾಜ್ ಯಾದವ್, ‘ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಎಂದು ಪ್ರತ್ಯೇಕಿಸಿ ನೋಡುವುದು ಬೇಡ. ಈ ಎರಡೂ ಪ್ರಾಂತ್ಯಗಳು ದಕ್ಷಿಣ ಕರ್ನಾಟಕಕ್ಕಿಂತ ಬಹಳ ಹಿಂದುಳಿದಿವೆ. ನಾವೆಲ್ಲರೂ ಸೇರಿ, ಈ ಪ್ರದೇಶಗಳನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂದುರತ್ತ ಗಮನಹರಿಸೋಣ’ ಎಂದು ಪ್ರತಿಪಾದಿಸಿದರು.
‘ಮೀಸಲಾತಿಯಲ್ಲಿ ಅನ್ಯಾಯ’
‘ಕಲ್ಯಾಣ ಕರ್ನಾಟಕ ಮೀಸಲಾತಿ ಅನ್ವಯ ಮಾಡುವಾಗ ಅಧಿಕಾರಿಗಳು ಅನ್ಯಾಯ ಮಾಡುತ್ತಿದ್ದಾರೆ. ಮೀಸಲಾತಿಯ ಸಾರ್ವತ್ರಿಕ ನಿಯಮಗಳ ಪ್ರಕಾರ, ಯಾವುದೇ ಮೀಸಲಾತಿ ಅಡಿ ಬರುವ ಅಭ್ಯರ್ಥಿಯು ಮೆರಿಟ್ ಆಧಾರದಲ್ಲಿ ಆಯ್ಕೆಯಾದರೆ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾಗುತ್ತಾನೆ. ಆದರೆ ಕಲ್ಯಾಣ ಕರ್ನಾಟಕ ಮೀಸಲಾತಿ ವಿಚಾರದಲ್ಲಿ ಹಾಗೆ ಆಗುತ್ತಿಲ್ಲ’ ಎಂದು ಶಶೀಲ್ ಜಿ.ನಮೋಷಿ ಆರೋಪಿಸಿದರು.
‘ಮೆರಿಟ್ ಆಧಾರದಲ್ಲಿ ಆಯ್ಕೆಯಾಗುವ ಅರ್ಹತೆ ಇದ್ದರೂ, ಅಭ್ಯರ್ಥಿಯನ್ನು ಕಲ್ಯಾಣ ಕರ್ನಾಟಕ ಮೀಸಲಾತಿಯ ಅಡಿಯಲ್ಲಿ ತೋರಿಸಲಾಗುತ್ತಿದೆ. ಇದರಿಂದ, ಅರ್ಹತೆ ಇದ್ದೂ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಸಾಮಾನ್ಯ ವರ್ಗದದಲ್ಲಿ ಆಯ್ಕೆ/ಬಡ್ತಿ ಜೇಷ್ಠತೆಯನ್ನು ನಿರಾಕರಿಸಲಾಗುತ್ತಿದೆ.ಇದನ್ನು ಸರಿಪಡಿಸಬೇಕು’ ಎಂದು ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.