ADVERTISEMENT

‘ಕರಾವಳಿಯ ಉಸೇನ್‌ ಬೋಲ್ಟ್‌’ಗೆ ಮೆಚ್ಚುಗೆ ಮಹಾಪೂರ

ಕಂಬಳ ಓಟಗಾರನಿಗೆ ಕ್ರೀಡಾ ಪ್ರಾಧಿಕಾರದ ತರಬೇತಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 2:13 IST
Last Updated 16 ಫೆಬ್ರುವರಿ 2020, 2:13 IST
ಕಂಬಳದ ಕೋಣಗಳೊಂದಿಗೆ ಓಡಿದ ಶ್ರೀನಿವಾಸ್‌ ಗೌಡ
ಕಂಬಳದ ಕೋಣಗಳೊಂದಿಗೆ ಓಡಿದ ಶ್ರೀನಿವಾಸ್‌ ಗೌಡ   

ಮಂಗಳೂರು: ಕಂಬಳದ ಗದ್ದೆಯಲ್ಲಿ ಮಿಂಚಿನ ವೇಗದಲ್ಲಿ ಓಡಿದ ಮೂಡುಬಿದಿರೆಯ ಮೀಯಾರಿನ ಯುವಕ ಶ್ರೀನಿವಾಸ್‌ ಗೌಡ ಅವರಿಗೆ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೇ 1ರಂದು ಐಕಳದಲ್ಲಿ ನಡೆದ ತುಳುನಾಡಿನ ಸಾಂಪ್ರದಾಯಿಕ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸ್‌ ಗೌಡ ಅವರು 142.50 ಮೀಟರ್ ಕರೆ (ಕಂಬಳ ಕೋಣಗಳ ಟ್ರ್ಯಾಕ್)ಯನ್ನು ಕೇವಲ 13.62 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದರು. ಇದು ಕಂಬಳ ಕ್ರೀಡೆಯಲ್ಲಿ ಇದುವರೆಗಿನ ಅತ್ಯಂತ ವೇಗದ ದಾಖಲೆಯಾಗಿದ್ದು, ಶ್ರೀನಿವಾಸ್ ಗೌಡ ಅವರನ್ನು ವೇಗದ ಓಟಗಾರ ಉಸೇನ್ ಬೋಲ್ಟ್ ಜತೆಗೆ ಹೋಲಿಸಲಾಗುತ್ತಿದೆ.

ಆನಂದ್ ಮಹೀಂದ್ರಾ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು, ‘ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರರಿಂದ ಶ್ರೀನಿವಾಸ್‌ ಗೌಡ ಅವರಿಗೆ ತರಬೇತಿ ನೀಡಲಾಗುವುದು. ಭಾರತೀಯ ಕ್ರೀಡಾ ಪ್ರತಿಭೆಗಳಿಗೆ ಎಲ್ಲ ರೀತಿಯ ಸಹಕಾರ ಒದಗಿಸಲಾಗುವುದು’ ಎಂದು ತಿಳಿಸಿದ್ದಾರೆ.

ADVERTISEMENT

ಶ್ರೀನಿವಾಸ್‌ ಗೌಡರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ, ‘ನಮ್ಮ ಗ್ರಾಮೀಣ ಪ್ರತಿಭೆಗಳು ಕಡಿಮೆ ಇಲ್ಲ ಎಂಬುದಕ್ಕೆ ಇದು ಸಾಕ್ಷಿ. ವಿಶ್ವಮಟ್ಟದ ದಾಖಲೆಯ ಪ್ರದರ್ಶನ ನೀಡಿದ ಕಂಬಳದ ವೇಗದ ಓಟಗಾರ ಶ್ರೀನಿವಾಸ್‌ ಗೌಡರಿಗೆ ಹಾರ್ದಿಕ ಅಭಿನಂದನೆಗಳು. ಈ ಪ್ರತಿಭೆಯನ್ನು ವಿಶ್ವಸ್ತರಕ್ಕೆ ಬೆಳೆಸುವ ನಿಟ್ಟಿನಲ್ಲಿ ಸರ್ಕಾರದ ಪ್ರೋತ್ಸಾಹ ಇರಲಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.